ಸಾರಾಂಶ
ಡಿ.ಶ್ರೀನಿವಾಸ್
ಕನ್ನಡಪ್ರಭ ವಾರ್ತೆ ಹಾರೋಹಳ್ಳಿಹಾರೋಹಳ್ಳಿ ತಾಲೂಕಿನಲ್ಲಿ ಹರಿಯುವ ಸುವರ್ಣಮುಖಿ ನದಿ ಕಲುಷಿತವಾಗಿ ಇತ್ತೀಚಿನ ದಿನಗಳಲ್ಲಿ ನೀರಿನ ಬಣ್ಣ ಬದಲಾಗುತ್ತಿರುವುದರಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ.
ಬೆಂಗಳೂರು- ಕನಕಪುರ ಹೆದ್ದಾರಿಯ ಮಧ್ಯಭಾಗದಲ್ಲಿರುವ ಹಾರೋಹಳ್ಳಿಯಿಂದ ಮೂರುವರೆ ಕಿಲೋಮೀಟರ್ ದೂರದಲ್ಲಿ ಸುವರ್ಣಮುಖಿ ನದಿ ಹರಿಯುತ್ತಿದೆ. ಇದರ ವಿಸ್ತೀರ್ಣ 75 ರಿಂದ 80 ಎಕರೆ ಜಾಗದಲ್ಲಿದ್ದು, ಬೇಸಿಗೆಯಲ್ಲಿ ನದಿಯ ನೀರು ಇಂಗುತ್ತದೆ. ಇಲ್ಲದಿದ್ದರೆ ಸದಾ ಮೈತುಂಬಿ ಹರಿಯುತ್ತದೆ. ಈ ನದಿಯು ಬನ್ನೇರುಘಟ್ಟ ಪ್ರದೇಶದಲ್ಲಿ ಉಗಮವಾಗಿ ಸುತ್ತಮುತ್ತಲಿನ ಬಡೇಸಾಬರದೊಡ್ಡಿ, ರಾಮೇಗೌಡನದೊಡ್ಡಿ, ಮೇಡಮಾರನಹಳ್ಳಿ, ಮುಡೇನಹಳ್ಳಿ, ಎರೇಹಳ್ಳಿ, ಉಳಗೊಂಡನಹಳ್ಳಿ, ಹೆಬ್ಬಿದ್ರೆಮೆಟ್ಲು, ಕುರುಬಳ್ಳಿ, ಚೀಲೂರು, ತುಂಗಣಿ ಮಾರ್ಗವಾಗಿ ವೃಷಭಾವತಿ ನದಿ ಸೇರುತ್ತದೆ.ಈ ನದಿ ನೀರಿನಿಂದ ಸ್ಥಳೀಯ ರೈತರು ಭತ್ತ, ರಾಗಿ, ಜೋಳ, ರೇಷ್ಮೆಯಂತಹ ಬೆಳೆಗಳಿಗೆ ನೀರು ಹಾಯಿಸುತ್ತಾರೆ, ಅಲ್ಲದೆ ಸ್ಥಳೀಯ ಗ್ರಾಮಗಳಿಗೆ ಈ ನದಿ ಕುಡಿಯುವ ನೀರಿನ ಮೂಲವಾಗಿದೆ. ಈ ನೀರಿನ ಮುಖಾಂತರ ಸುತ್ತಮುತ್ತಲಿನ ಸಣ್ಣಪುಟ್ಟ ಕೆರೆಗಳಿಗೂ ನೀರು ತುಂಬಿಸುತ್ತಿದ್ದು, ಇದರಿಂದ ಬೇಸಿಗೆಯಲ್ಲಿ ಅಥವಾ ನೀರಿನ ಅಭಾವದಲ್ಲಿ ವ್ಯವಸಾಯಕ್ಕೆ ಹಾಗೂ ಮನುಷ್ಯ ಮತ್ತು ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆಗೆ ಒಂದು ದಾರಿಯಾಗಿದೆ. ಇಂತಹ ಬಹುಪಯೋಗಿ ನದಿ ನೀರಿನ ಬಣ್ಣ ಬದಲಾಗುತ್ತಿದೆ ಎಂದು ಸುತ್ತಮುತ್ತಲಿನ ಗ್ರಾಮಸ್ಥರ ಆರೋಪವಾಗಿದೆ.
ಈ ನದಿಯ ಅಕ್ಕಪಕ್ಕದ ಗ್ರಾಮಗಳಿಗೆ ಇಲ್ಲಿಯವರೆಗೂ ಕುಡಿಯುವ ನೀರಿನ ಕೊರತೆ ಬಂದಿಲ್ಲದ ಕಾರಣ ನೀರು ಕಲುಷಿತಗೊಂಡರೆ ಅಂತರ್ಜಲದಲ್ಲೂ ಕಲುಷಿತವಾಗಬಹುದು ಎಂದು ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ.ಬನ್ನೇರುಘಟ್ಟ ಮಾರ್ಗದಲ್ಲಿ ಬರುವ ನದಿಯ ಸಮೀಪವಿರುವ ಯಾವುದಾದರೊಂದು ಕಾರ್ಖಾನೆ ಅಕ್ರಮವಾಗಿ ಕಲುಷಿತ ಕೊಳಚೆ ನೀರನ್ನು ನದಿಗೆ ಹರಿ ಬಿಡುತ್ತಿದ್ದಾರೆ. ಇದರಿಂದಲೇ ನೀರು ಕಲುಷಿತಗೊಂಡು ಬಣ್ಣ ಬದಲಾಗುತ್ತಿದೆ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ನದಿ ನೀರು ಕಲುಷಿತವಾಗಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭಯ ಗ್ರಾಮಸ್ಥರನ್ನು ಕಾಡುತ್ತಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕು, ನದಿ ನೀರು ಕಲುಷಿತಕ್ಕೆ ಕಾರಣವನ್ನು ತಕ್ಷಣವೇ ಕಂಡು ಹಿಡಿದು, ನದಿ ನೀರಿನ ಶುದ್ಧೀಕರಣಕ್ಕೆ ಮತ್ತು ಸಂರಕ್ಷಣೆಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.ನದಿಯ ಅಭಿವೃದ್ಧಿ:
ನದಿಯ ಸುತ್ತಮುತ್ತ ಗಿಡಗಂಟೆಗಳು ಬೆಳೆದು ನದಿಯ ಸ್ವಚ್ಛತೆಗೆ ಧಕ್ಕೆಯಾಗಿದೆ, ಇದನ್ನು ಸ್ವಚ್ಛಗೊಳಿಸಿದರೆ ನೀರಿನ ಹರಿವಿಗೆ ನದಿಪಾತ್ರದ ಸ್ವಚ್ಛತೆಗೆ ಅನುಕೂಲವಾಗುತ್ತದೆ, ಸುತ್ತಮುತ್ತಲಿನ ಗ್ರಾಮಸ್ಥರು ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ವಾಕಿಂಗ್ ಮಾಡಲು ನದಿ ತೀರದಲ್ಲಿ ಉದ್ಯಾನವನ ಮತ್ತು ವಾಕಿಂಗ್ ಟ್ರ್ಯಾಕ್ ಗಳನ್ನು ನಿರ್ಮಿಸಿದರೆ ವಾಯುವಿಹಾರಕ್ಕೆ ಅನುಕೂಲವಾಗುತ್ತದೆ. ನದಿಯ ಸ್ವಚ್ಛತೆ ಕಾಪಾಡಿದರೆ ಜಲಚರ ಪ್ರಾಣಿಗಳು, ದನಕರುಗಳಿಗೆ, ಸುತ್ತಮುತ್ತಲಿನ ಗ್ರಾಮಸ್ಥರಿಗೆ ಹಾಗೂ ಮೀನುಗಾರರ ಜೀವನಕ್ಕೆ ಅನುಕೂಲವಾಗುತ್ತದೆ ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.‘ಸಣ್ಣಪುಟ್ಟ ಮೀನುಗಾರರು ಮೀನು ಹಿಡಿಯಲು ಈ ನದಿಯನ್ನೇ ಆಶ್ರಯಿಸಿದ್ದಾರೆ. ಆದ್ದರಿಂದ ನದಿಯ ಸುತ್ತಮುತ್ತಲು ಮುಳ್ಳಿನ ತಂತಿ ಬೇಲಿಯ ವ್ಯವಸ್ಥೆ ಮಾಡಿ ಸಿಸಿ ಟಿವಿ ಅಳವಡಿಸಿಬೇಕು ಹಾಗೂ ಸ್ಥಳೀಯರು, ಸಾರ್ವಜನಿಕರು ಸಂಜೆ ವೇಳೆ ವಾಯುವಿಹಾರಕ್ಕೆ ಬರುವವರಿಗೆ ವಾಕಿಂಗ್ ಪಾತ್ ವ್ಯವಸ್ಥೆ ಮಾಡಿದರೆ ತುಂಬಾ ಅನುಕೂಲವಾಗುತ್ತದೆ.’
- ಹಾರೋಹಳ್ಳಿ ಚಂದ್ರು, ಮುಖಂಡರು, ಬಿಜೆಪಿ