ಸಾರಾಂಶ
ಮೂಡುಬಿದಿರೆ: ಸ್ವಚ್ಛತಾ ಹಿ ಸೇವಾ ಅಭಿಯಾನದ ಅಂಗವಾಗಿ ಮೂಡುಬಿದಿರೆ ಪುರಸಭೆ ಮತ್ತು ರೋಟರಿ ಕ್ಲಬ್, ಮೂಡುಬಿದಿರೆ ಟೆಂಪಲ್ ಟೌನ್ ವತಿಯಿಂದ ಜಂಟಿಯಾಗಿ ಸಿಟಿಯು ಘಟಕ ಅಳವಡಿಸುವ ಕಾರ್ಯಕ್ರಮ ನಡೆಯಿತು.
‘ಸ್ವಚೋತ್ಸವ 2025’ರ ಭಾಗವಾಗಿ, ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕವಾಗಿ ಕಸ ಎಸೆಯುವ ಸ್ಥಳಗಳನ್ನು (ಬ್ಲ್ಯಾಕ್ ಸ್ಪಾಟ್) ಸ್ವಚ್ಛಗೊಳಿಸಿ ಅವುಗಳನ್ನು ಸುಂದರ ಮತ್ತು ಆರೋಗ್ಯಕರ ತಾಣಗಳಾಗಿ ಪರಿವರ್ತಿಸುವ ಮಹತ್ವದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಈ ಉಪಕ್ರಮದ ಭಾಗವಾಗಿ, ಪ್ರಾಂತ್ಯ ಶಾಲೆಯ ಬಳಿಯಿದ್ದ ಕಸ ಎಸೆಯುವ ಸ್ಥಳದಲ್ಲಿ ಸಾರ್ವಜನಿಕರು ಕಸ ಹಾಕುವುದನ್ನು ತಪ್ಪಿಸುವ ಉದ್ದೇಶದಿಂದ ‘ನಮ್ಮ ವಿದ್ಯಾ ದೇಗುಲದ ದ್ವಾರದ ಬಳಿಯಲ್ಲಿ ಕಸದ ಉಡುಗೂರೆ ನೀಡಲು ಬಯಸುವಿರಾ’ ಎಂಬ ಘೋಷ ವಾಕ್ಯದೊಂದಿಗೆ ‘ಬ್ಲ್ಯಾಕ್ ಸ್ಪಾಟ್ ಶುಚಿತ್ವ ಪರಿವರ್ತನಾ ಘಟಕ’ (Blackspot Cleanliness Transformation Unit - CTU)ವನ್ನು ಅಳವಡಿಸಲಾಯಿತು.ಈ ಪ್ರದೇಶದಲ್ಲಿ ಸಾರ್ವಜನಿಕರು ಕಸ ಎಸೆಯುವುದನ್ನು ಸಂಪೂರ್ಣವಾಗಿ ನಿಲ್ಲಿಸುವುದು ಈ ಯೋಜನೆ ಮುಖ್ಯ ಗುರಿಯಾಗಿದೆ.ಮೂಡುಬಿದಿರೆ ಪುರಸಭೆಯು ಸ್ವಚ್ಛ, ಹಸಿರು, ಮತ್ತು ಆರೋಗ್ಯಕರ ಪುರಸಭಾ ವ್ಯಾಪ್ತಿಯನ್ನು ಉಳಿಸುವ ಗುರಿಯೊಂದಿಗೆ ಈ ಅಭಿಯಾನ ಮುನ್ನಡೆಸುತ್ತಿದೆ.ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ವಾರ್ಡ್ ಸದಸ್ಯ ಇಕ್ಬಾಲ್ ಕರೀಂ, ರೋಟರಿ ಕ್ಲಬ್ ಟೆಂಪಲ್ ಟೌನ್‌ನ ಅಧ್ಯಕ್ಷ ಹರೀಶ್ ಎಂ.ಕೆ, ಕಾರ್ಯದರ್ಶಿ ಭರತ್ ಶೆಟ್ಟಿ, ಮಾಜಿ ಕಾರ್ಯದರ್ಶಿ ಮಂಜುನಾಥ್ ಪೂಜಾರಿ, ಸದಸ್ಯರಾದ ಶಂಕರ್ ರಾವ್, ಜಯಪ್ರಕಾಶ್ ಭಂಡಾರಿ, ಶಂಕರ್ ಕೋಟ್ಯಾನ್, ಪರಿಸರ ಅಭಿಯಂತರ ಶಿಲ್ಪಾ ಎಸ್., ಹಿರಿಯ ಆರೋಗ್ಯ ನಿರೀಕ್ಷಕರ ಶಶಿರೇಖ, ಸಮುದಾಯ ಸಂಘಟಕರ (ಕಮ್ಯುನಿಟಿ ಮೊಬಿಲೈಸರ್) ತಂಡ, ವಾಹನ ಚಾಲಕರು ಮತ್ತು ಪೌರ ಕಾರ್ಮಿಕರು ಉಪಸ್ಥಿತರಿದ್ದರು.