ಸ್ವದೇಶಿ ಚಿಂತನೆ, ವಸ್ತುಗಳ ಬಳಕೆ ಸ್ವಾಭಿಮಾನ ಪ್ರತೀಕ: ಬೇಲಿಮಠದ ಶಿವರುದ್ರ ಸ್ವಾಮೀಜಿ

| Published : Feb 12 2024, 01:30 AM IST

ಸ್ವದೇಶಿ ಚಿಂತನೆ, ವಸ್ತುಗಳ ಬಳಕೆ ಸ್ವಾಭಿಮಾನ ಪ್ರತೀಕ: ಬೇಲಿಮಠದ ಶಿವರುದ್ರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವದೇಶಿ ಜಾಗರಣ ಮಂಚ್ ವತಿಯಿಂದ ಜಯನಗರದ ಚಂದ್ರಗುಪ್ತ ಮೌರ್ಯ ಮೈದಾನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ‘ಸ್ವದೇಶಿ ಮೇಳ’ ಸಮಾರೋಪ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸ್ವದೇಶಿ ಚಿಂತನೆ, ಸ್ವದೇಶಿ ವಸ್ತುಗಳ ಬಳಕೆಯು ಸ್ವಾಭಿಮಾನದ ಪ್ರತೀಕವಾಗಿದ್ದು, ಸ್ವದೇಶಿ ವಸ್ತುಗಳನ್ನು ಹೆಚ್ಚೆಚ್ಚು ಬಳಸುವ ಮೂಲಕ ದೇಶಿಯ ಕೈಗಾರಿಕೆಗಳಿಗೆ ಬೆಂಬಲ, ಉತ್ತೇಜನ ನೀಡಬೇಕು ಎಂದು ಬೇಲಿಮಠದ ಶಿವರುದ್ರ ಸ್ವಾಮೀಜಿ ಕರೆ ನೀಡಿದ್ದಾರೆ.

ಸ್ವದೇಶಿ ಜಾಗರಣ ಮಂಚ್ ವತಿಯಿಂದ ಜಯನಗರದ ಚಂದ್ರಗುಪ್ತ ಮೌರ್ಯ ಮೈದಾನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ‘ಸ್ವದೇಶಿ ಮೇಳ’ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿ, ಭಾರತ ಎಂದಿಗೂ ಅನ್ಯರ ಆಶ್ರಯದಲ್ಲಿ ಇರಲಿಲ್ಲ. ಜಗತ್ತಿಗೆ ಸಂಸ್ಕಾರ, ಯೋಜನೆ ಮತ್ತು ಯೋಚನೆಯನ್ನು ಕಲಿಸಿಕೊಟ್ಟಿದೆ. ಆದರೆ, ವ್ಯಾಪಾರಕ್ಕಾಗಿ ಬಂದ ವಿದೇಶಿಯರು ನಮ್ಮನ್ನು ಕುತಂತ್ರದಿಂದ ದಾಸರಾಗಿ ಮಾಡಿದರು. ನಮ್ಮ ಚಿಂತನೆಗಳೇ ಸರಿಯಿಲ್ಲ ಎಂಬ ವಿಷವನ್ನು ನಮ್ಮಲ್ಲಿ ತುಂಬಿದ್ದರು ಎಂದರು.

ಆಯುರ್ವೇದ ಪದ್ಧತಿಯನ್ನು ಹಣಿಯುವ ಮೂಲಕ ನಮ್ಮ ಆರೋಗ್ಯ ಹಾಳು ಮಾಡಿ ಆಲೋಪತಿಯನ್ನು ತಂದರು. ಆದರೆ, ಕೋವಿಡ್‌ ಕಾಲದಲ್ಲಿ ಆಯುರ್ವೇದದ ಶಕ್ತಿ ಮತ್ತೆ ನಮಗೆ ತಿಳಿಯಿತು. ಭಾರತೀಯರ ಅಂತಃಶಕ್ತಿಯನ್ನು ಬಡಿದೆಬ್ಬಿಸುವಲ್ಲಿ ಸ್ವದೇಶಿ ಜಾಗರಣ ಮಂಚ್‌ ಕೆಲಸ ಮಾಡುತ್ತಿದೆ. ಅವರಿಗೆ ಪ್ರೋತ್ಸಾಹ ನೀಡುವ ಕೆಲಸಗಳು ಜನರು ಮತ್ತು ಸರ್ಕಾರದಿಂದ ಆಗಬೇಕು ಎಂದು ಸ್ವಾಮೀಜಿ ಹೇಳಿದರು.

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಆತ್ಮನಿರ್ಭರ ಭಾರತ ಉಪಕ್ರಮದಿಂದ ದೇಶಿಯ ಕೈಗಾರಿಕೆಗಳಿಗೆ ಉತ್ತೇಜನ ದೊರಕಿದ್ದು, ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯಾಪರೋದ್ಯಮಿಗಳಿಗೆ ಅನುಕೂಲವಾಗಿದೆ. ಆದರೆ, ಈ ವೈವಿದ್ಯಮಯವಾದ ದೇಶಿಯ ಕೈಗಾರಿಕೆಗಳಿಗೆ ಬ್ರಾಂಡಿಂಗ್‌ ಕೊರತೆಯಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ವ್ಯವಸ್ಥೆ ಕಲ್ಪಿಸಬೇಕಿದೆ. ಸಮರ್ಥವಾದ ವ್ಯವಸ್ಥೆಯನ್ನು ರೂಪಿಸಿಕೊಡುವ ಜವಾಬ್ದಾರಿ ಸಮಾಜ ಮತ್ತು ಸರ್ಕಾರದ್ದಾಗಿದೆ.‌ ನಿರ್ಲಕ್ಷ್ಯಕ್ಕೊಳಗಾಗಿದ್ದ ಖಾದಿಗೆ ಪ್ರಧಾನಿ ಮೋದಿ ಮನ್ನಣೆ ನೀಡಿ ಜನಪ್ರಿಯಗೊಳಿಸಿದರು. ಸ್ವದೇಶಿ ಉದ್ಯಮ ಬೆಳೆಯುತ್ತಿದೆ. ನಮ್ಮಲ್ಲಿ ಸ್ವದೇಶಿ ಚಿಂತನೆ ತರಲು ಇನ್ನೂ 15-20 ವರ್ಷಗಳು ಬೇಕಾಗುತ್ತವೆ ಎಂದು ಹೇಳಿದರು.

ಸ್ವದೇಶಿ ಜಾಗರಣ ಮಂಚ್ ರಾಷ್ಟ್ರೀಯ ಸಹ ಸಂಯೋಜಕ ಡಾ। ಅಶ್ವನಿ ಮಹಾಜನ್‌, ಸ್ವದೇಶಿ ಮೇಳಗಳಿಗೆ ಒಂದು ವಿಭಿನ್ನ ಉದ್ದೇಶವಿದೆ. ಮುಂದಿನ ದಿನಗಳಲ್ಲಿ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಮಾಡುವ ಉದ್ದೇಶವಿದೆ. ಜಾಗತಿಕರಣದಿಂದ ಅಮೆರಿಕದಂತಹ ದೇಶದಲ್ಲಿಯು ಸಣ್ಣ ವ್ಯಾಪಾರಿಗಳು ಮತ್ತು ಉದ್ಯಮಿಗಳು ನೆಲ ಕಚ್ಚಿವೆ. ಆದರೆ, ಭಾರತದ ಅರ್ಥ ವ್ಯವಸ್ಥೆಯೇ ಬೇರೆಯಾಗಿದೆ. ಹೀಗಾಗಿಯೇ ಲಕ್ಷಕ್ಕಿಂತ ಹೆಚ್ಚು ಜನ ಭಾಗವಹಿಸಿದ್ದಾರೆ. ಇದು ಭಾರತವು ಹೊಸ ದೃಷ್ಟಿಕೋನದಲ್ಲಿ ಯೋಚಿಸುತ್ತಿರುವುದನ್ನು ಸೂಚಿಸುತ್ತದೆ ಎಂದರು.

ಶಾಸಕ ಸಿ.ಕೆ.ರಾಮಮೂರ್ತಿ, ಸಂಯೋಜಕ ಅಶ್ವತ್ಥನಾರಾಯಣ ಮತ್ತು ಸಂಘಟಕ ಅಮಿತ್‌ ಅಮರನಾಥ್‌ ಉಪಸ್ಥಿತರಿದ್ದರು.