ವಿಶ್ವಧರ್ಮ ಸಭೆಯಲ್ಲಿ ಭಾರತ ಮತ್ತು ಹಿಂದೂ ಧರ್ಮವನ್ನು ಪ್ರತಿನಿಧಿಸಿ ಯುವಕರಿಗೆ ನೀಡಿದ ಸ್ಫೂರ್ತಿದಾಯಕ ಭಾಷಣ ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿದೆ

ಬಳ್ಳಾರಿ: ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಆಡಳಿತ ಭವನದಲ್ಲಿ 164ನೇ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದ ವಿಶ್ವವಿದ್ಯಾಲಯದ ಇಂಗ್ಲೀಷ್ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ರಾಬರ್ಟ್ ಜೋಸ್, ಜೀವನ, ಆಧ್ಯಾತ್ಮಿಕತೆ ಮತ್ತು ರಾಷ್ಟ್ರ ನಿರ್ಮಾಣ ಕುರಿತು ತಮ್ಮ ಬೋಧನೆಗಳ ಮೂಲಕ ಹಲವಾರು ಪೀಳಿಗೆಗೆ ಸ್ಫೂರ್ತಿ ನೀಡಿದ ಮಹಾನ್ ತತ್ವಜ್ಞಾನಿಯಾದ ಸ್ವಾಮಿ ವಿವೇಕಾನಂದರು ಯುವಕರಿಗೆ ಮಾದರಿಯಾಗಿದ್ದಾರೆ. ಹಿಂದೂ ಧರ್ಮದ ವಿಚಾರಗಳನ್ನು ವಿಶ್ವದ ಯುವಜನರಿಗೆ ಪರಿಚಯಿಸಿದ ಮಹನೀಯರಾಗಿದ್ದಾರೆ. ಯಾವುದೇ ಒಂದು ರಾಷ್ಟ್ರ ಜನಾಂಗ, ಧರ್ಮಕ್ಕೆ ಸೀಮಿತವಾಗದೇ ಸೌಹಾರ್ದ ಕಂಡುಕೊಳ್ಳಬೇಕು ಎಂದು ಪ್ರತಿಪಾದಿಸಿದರು.

ವಿಶ್ವಮಾನವ ಸಂದೇಶ ನೀಡಿ ಇಡೀ ವಿಶ್ವವೇ ನನ್ನ ಬಂಧು ಎಂದು ತಿಳಿಸಿದ ಮಹಾನ್ ದಾರ್ಶನಿಕ ಎನಿಸಿದ ವಿವೇಕಾನಂದರು, 1893ರಲ್ಲಿ ಶಿಕಾಗೋದಲ್ಲಿ ಜರುಗಿದ್ದ ಮೊದಲ ವಿಶ್ವಧರ್ಮ ಸಭೆಯಲ್ಲಿ ಭಾರತ ಮತ್ತು ಹಿಂದೂ ಧರ್ಮವನ್ನು ಪ್ರತಿನಿಧಿಸಿ ಯುವಕರಿಗೆ ನೀಡಿದ ಸ್ಫೂರ್ತಿದಾಯಕ ಭಾಷಣ ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿದೆ ಎಂದು ತಿಳಿಸಿದರು.

ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಪೀರ್‌ಬಾಷಾ ಮಾತನಾಡಿ, ವಿವೇಕಾನಂದರು ಭಾರತದ ಸಂಸ್ಕೃತಿಯ ಪ್ರತೀಕವಾಗಿದ್ದರು. ದೇಶದ ವೇದ ಪಂಡಿತರು ಅವರಿಗೆ ಮಾನ್ಯತೆ ನೀಡಲಿಲ್ಲ. ಅವರ ವೈಚಾರಿಕ ಚಿಂತನೆಗಳು ಅಮೆರಿಕದಲ್ಲಿ ಹೆಚ್ಚು ಪ್ರಭಾವಕ್ಕೆ ಒಳಗಾಗಿದ್ದವು. ದೇಶದ ಅತಿದೊಡ್ಡ ಪಿಡುಗಾದ ಜಾತಿಪದ್ಧತಿಯನ್ನು ವಿವೇಕಾನಂದರು ಎಂದಿಗೂ ಅನುಕರಿಸಲಿಲ್ಲ. ಜಾತಿ, ಅಸಮಾನತೆ, ಅಸಹಿಷ್ಣತೆಯ ವಿರುದ್ಧ ಹೋರಾಡಿದರು ಎಂದು ತಿಳಿಸಿದರು.

ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಮುನಿರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿವೇಕಾನಂದರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಕೊಳ್ಳುವ ಮೂಲಕ ದೇಶ ಕಟ್ಟುವ ಕೆಲಸವಾಗಬೇಕು. ಯುವಕರಲ್ಲಿ ಸಾಧಿಸುವ ಉತ್ಸಾಹ ಎದೆಗುಂದಬಾರದು ಎಂದು ಕುಲಪತಿ ಮುನಿರಾಜು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ತಿಪ್ಪೇರುದ್ರಪ್ಪ.ಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದೈಹಿಕ ಶಿಕ್ಷಣ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶಶಿಧರ ಕೆಲ್ಲೂರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಡಾ.ಸಂಪತಕುಮಾರ ಸ್ವಾಗತಿಸಿದರು.

ಕಾರ್ಯಕ್ರಮ ಆರಂಭಕ್ಕೂ ಮೊದಲು ವಿವಿಯ ಆವರಣದಲ್ಲಿರುವ ಸ್ವಾಮಿ ವಿವೇಕಾನಂದರ ಕಂಚಿನ ಪ್ರತಿಮೆಗೆ ವಿವಿಯ ಆಡಳಿತ ವರ್ಗ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಮಾಲಾರ್ಪಣೆ ಮಾಡಿ ರಾಷ್ಟ್ರೀಯ ಯುವ ದಿನವನ್ನು ಸಾಂಕೇತಿಕವಾಗಿ ಆಚರಿಸಿದರು.

ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ, ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.