ಸಾರಾಂಶ
ಗಾಂಧಿ ಗ್ರಾಮದಲ್ಲಿ ವಿವೇಕಾನಂದ ಜ್ಞಾನ ಕುಟೀರ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಸ್ವಾಮಿ ವಿವೇಕಾನಂದರು ಯುವಕರ ಆಶಾ ಕಿರಣ ಹಾಗೂ ಸ್ಫೂರ್ತಿಯ ಚಿಲುಮೆಯಾಗಿದ್ದರು ಎಂದು ಕಡಹಿನಬೈಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಾಮಹೇಶ್ ಹೇಳಿದರು.
ಶುಕ್ರವಾರ ತಾಲೂಕಿನ ಗಾಂಧಿ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಜ್ಞಾನ ಕುಟೀರ ಉದ್ಘಾಟಿಸಿ ಮಾತನಾಡಿ, ಅವರು ಯುವಕರಿಗೆ ಏಳು ಎದ್ದೇಳು, ಗುರಿ ಮುಟ್ಟುವ ತನಕ ಹೋರಾಡು ಎಂಬ ವಾಕ್ಯದೊಂದಿಗೆ ಬಡಿದೆಬ್ಬಿಸುತ್ತಿದ್ದರು. ಗಣ ರಾಜ್ಯೋತ್ಸವ ದಿನದಂದೇ ಅವರ ಹೆಸರಿನಲ್ಲಿ ಜ್ಞಾನ ಕುಟೀರ ಉದ್ಘಾಟನೆಯಾಗುತ್ತಿರುವುದು ಶ್ಲಾಘನೀಯ ಎಂದರು.ಗ್ರಾಪಂ ಸದಸ್ಯ ರವೀಂದ್ರ ಮಾತನಾಡಿ, ಮನುಷ್ಯ ಎಷ್ಟು ವರ್ಷ ಬದುಕಿದ್ದ ಎನ್ನುವುದಕ್ಕಿಂತ ಬದುಕಿದ್ದಷ್ಟು ವರ್ಷ ಏನು ಸಾಧನೆ ಮಾಡಿದರು ಎಂಬುದು ಮುಖ್ಯ. ಸ್ವಾಮಿ ವಿವೇಕಾನಂದರು ಕೇವಲ 39 ವರ್ಷ ಮಾತ್ರ ಬದುಕಿದ್ದರು. ಆದರೆ, ಅವರ ಸಾಧನೆ, ಚಿಂತನೆ, ಆದರ್ಶ ಇಂದಿಗೂ ಅನುಕರಣೀಯ. ಭಾರತದ ಸಂಸ್ಕೃತಿ, ಧರ್ಮ, ಸಂಸ್ಕಾರವನ್ನು ಇಡೀ ವಿಶ್ವಕ್ಕೇ ಅವರು ತೋರಿಸಿಕೊಟ್ಟಿದ್ದರು ಎಂದರು.
ಗ್ರಾಪಂ ಪಿಡಿಒ ವಿಂದ್ಯಾ ಮಾತನಾಡಿ, ಸ್ವಾಮಿ ವಿವೇಕಾನಂದರು ಅಮೇರಿಕಾದ ಚಿಕಾಗೋ ಸಮ್ಮೇಳನದಲ್ಲಿ ಮಾಡಿದ ಭಾಷಣದಲ್ಲಿ ಹಿಂದೂ ಧರ್ಮದಲ್ಲಿರುವ ಶಾಂತಿ, ಸಮಾಧಾನ, ವಿಶ್ವ ಭ್ರಾತೃತ್ವ ಸಂಬಂಧಗಳನ್ನು ಎತ್ತಿ ಹಿಡಿದಿದ್ದರು ಎಂದರು.ದಾನಿಗಳಾದ ಗಾಂಧಿ ಗ್ರಾಮದ ಕೆ.ಎನ್.ನಾಗರಾಜು ಮಾತನಾಡಿ, ಈ ಕುಟೀರವನ್ನು ಮಕ್ಕಳ ವಿಧ್ಯಾಭ್ಯಾಸದ ದೃಷ್ಠಿಯಿಂದ ಮಾಡಲಾಗಿದೆ. ಇದು ಸುಮಾರು 2 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇಲ್ಲಿ ಸ್ವಾಮಿ ವಿವೇಕಾ ನಂದರ ಪುತ್ಥಳಿ ಸ್ಥಾಪಿಸಲಾಗಿದೆ. ನಮ್ಮ ಶಾಲೆ ಶಿಕ್ಷಕ ಸಿ.ತಿಮ್ಮೇಶ್ ತಮಗೆ ರಾಜ್ಯ ಪ್ರಶಸ್ತಿಯಿಂದ ಬಂದ ನಗದು ಹಣ ವಿನಿಯೋಗಿಸಿರುವುದು ಬಹಳ ಸಂತೋಷ ಹಾಗೂ ಇತರೆ ಶಿಕ್ಷಕರಿಗೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ದಾನಿಗಳಾದ ಪ್ರಣೀತ್, ಪಾರ್ವತಿ, ಅಜಂತ, ಕೆ.ಎನ್.ನಾಗರಾಜು, ಅಣ್ಣಾಮಲೈ ಮತ್ತು ರಿನೀಶ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅರುಣ್‌ಕುಮಾರ್ ವಹಿಸಿದ್ದರು.ಗ್ರಾಪಂ ಉಪಾಧ್ಯಕ್ಷ ಸುನೀಲ್‌ಕುಮಾರ್, ಸದಸ್ಯರಾದ ವಾಣಿ ನರೇಂದ್ರ, ಎ.ಬಿ.ಮಂಜುನಾಥ್, ಅಶ್ವಿನಿ,ಪೂರ್ಣಿಮಾ, ಚಂದ್ರಶೇಖರ್, ಗ್ರಾಪಂ ಮಾಜಿ ಉಪಾಧ್ಯಕ್ಷ ಡಿ.ಜಿ.ಸತೀಶ್, ಸಿಆರ್‌ಪಿ ತಿಮ್ಮಮ್ಮ ಇದ್ದರು.