ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಕಾವ್ಯ ಸಂಸ್ಕೃತಿಗೆ ಸಂಬಂಧಿಸಿದ್ದು. ಆದ್ದರಿಂದ ಕವಿ, ಕಾವ್ಯ ಮತ್ತು ಸಾಹಿತ್ಯಕ್ಕೆ ನಿಕಟವಾದ ಸಂಬಂಧವಿದೆ. ಕವಿ ಹೃದಯದಲ್ಲಿ ಸದ್ಭಾವನೆ ಮೂಡಿದಾಗ ಅತ್ಯಂತ ಉತ್ಕೃಷ್ಟವಾದ ಕಾವ್ಯ ಸೃಷ್ಟಿಯಾಗುತ್ತದೆ ಎಂದು ವಿಶ್ರಾಂತ ಕುಲಪತಿ ಡಾ.ಕೆ. ಚಿದಾನಂದಗೌಡ ತಿಳಿಸಿದರು.ವಿಜಯನಗರದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಸ್ಪಂದನ ಸಾಂಸ್ಕೃತಿಕ ಪರಿಷತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿಸ್ಮಯ ಪ್ರಕಾಶನದ ಸಹಯೋಗದೊಂದಿಗೆ ಆಯೋಜಿಸಿದ್ದ ಯುಗಾದಿ ಕವಿ- ಕಾವ್ಯ ಸಂಭ್ರಮದ ರಾಜ್ಯ ಮಟ್ಟದ ಕವಿ ಮೇಳದ ಸಮಾರೋಪದಲ್ಲಿ ಸಾಧಕರಿಗೆ ಸ್ವಾಮಿ ವಿವೇಕಾನಂದರ ಸದ್ಭಾವನಾ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.ಸ್ವಾಮಿ ವಿವೇಕಾನಂದರಲ್ಲಿ ಸದ್ಭಾವನೆ ಅಪಾರವಾಗಿತ್ತು. ಈ ಕಾರಣಕ್ಕೆ ಅವರ ಚಿಂತನೆ ಮತ್ತು ವಿಚಾರಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿವೆ. ದೇಶ, ಜಾತಿ, ಧರ್ಮ ಮೀರಿದ ವಿಶ್ವ ಸೋದರತ್ವ ಮತ್ತು ಸಹಿಷ್ಣುತಾ ಮನೋಭಾವ ಎಲ್ಲಾ ಕಾಲಕ್ಕೂ ಅಗತ್ಯವಾದುದ್ದು ಎಂದು ಸ್ವಾಮಿ ವಿವೇಕಾನಂದರು ಶತಮಾನದ ಹಿಂದೆಯೇ ಪ್ರತಿಪಾದಿಸಿದ್ದರು ಎಂದು ಹೇಳಿದರು.ಆದರೆ, ಪ್ರಸ್ತುತ ದಿನಮಾನಗಳಲ್ಲಿ ಜಗತ್ತಿನ ಉದ್ದಗಲ ಜಾತಿ- ಜಾತಿಗಳ, ಧರ್ಮ-ಧರ್ಮಗಳ, ವ್ಯಕ್ತಿ-ವ್ಯಕ್ತಿಗಳ ನಡುವೆ ಅಭಿಪ್ರಾಯ ಭೇದಗಳು ಹೆಚ್ಚಾಗುತ್ತಿವೆ. ಇದರಿಂದಾಗಿ ಜಾಗತಿಕ ಯುದ್ಧಗಳು ಮತ್ತು ಆಂತರಿಕ ಕೋಮು ಗಲಭೆಗಳು ನಡೆಯುತ್ತಿವೆ. ನಮ್ಮ ಅಭಿಪ್ರಾಯ ಭೇದಗಳ ನಡುವೆಯೂ ಪರಸ್ಪರ ಪ್ರೀತಿ, ಸೋದರತ್ವ ಹಾಗೂ ಧಾರ್ಮಿಕ ಸಹಿಷ್ಣುತೆ ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಇದು ಸ್ಪರ್ಧಾತ್ಮಕ ಯುಗ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಸ್ಪರ್ಧೆ ಮತ್ತು ಪೈಪೋಟಿ ಇದೆ. ಯುವಜನರು ಈ ಪೈಪೋಟಿ ಎದುರಿಸಿ ಗೆಲುವು ಸಾಧಿಸಬೇಕಾದರೆ ಸದಾ ಎಚ್ಚರದಿಂದ ಇರಬೇಕು. ಗುರಿಯ ಕಡೆಗೆ ಲಕ್ಷ್ಯ ವಹಿಸಬೇಕು ಎಂದು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್ ಮಾತನಾಡಿ, ಸಾಮಾಜಿಕ ಹೊಣೆಗಾರಿಕೆಯಿಂದ ನೈತಿಕತೆ ಉಳಿಸಿಕೊಂಡು ಬರವಣಿಗೆಯಲ್ಲಿ ತೊಡಗಿಸಿಕೊಂಡವರು ತೀರಾ ಕಡಿಮೆಯಿದ್ದಾರೆ. ಸಾಹಿತಿಗಳ ಎಲ್ಲಾ ಬರವಣಿಗೆಯನ್ನು ಸಾಮಾಜಿಕ ಕಾಳಜಿಯ ಬರವಣಿಗೆಗಳು ಎಂದು ಒಪ್ಪಲು ಸಾಧ್ಯವಿಲ್ಲ. ಬರವಣಿಗೆಯಿಂದ ದೇಶದಲ್ಲಿ ಶಾಂತಿ ನೆಲೆಸುವಂತೆಯೂ ಮಾಡಬಹುದು, ಹಾಗೆಯೇ ಅಶಾಂತಿ ಉಂಟಾಗುವಂತೆಯೂ ಮಾಡಬಹುದು ಎಂದು ತಿಳಿಸಿದರು.ಪ್ರಶಸ್ತಿ ಪ್ರದಾನಪತ್ರಕರ್ತ ಡಾ. ನಾಗರಾಜ್ ನವೀಮನೆ, ರಾಜ್ಯ ನಗರಾಭಿವೃದ್ಧಿ ಸಂಸ್ಥೆಯ ನಿರ್ದೇಶಕ ಸಿ. ರಾಜು, ಹುಣಸೂರು ತಾಲೂಕು ಬಿಳಿಕೆರೆಯ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯ ಶಿಕ್ಷಕಿ ಎನ್.ಸಿ. ಕೌಸಲ್ಯ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಸಿ.ಎಸ್. ಮಮತಾ, ನಿವೃತ್ತ ಎಂಜಿನಿಯರ್ ಎಂ. ಜವರೇಗೌಡ, ಕೆ.ಆರ್. ನಗರ ತಾಲೂಕು ಭೇರ್ಯದ ಪಶುವೈದ್ಯಾಧಿಕಾರಿ ಡಾ.ಎಚ್.ಪಿ. ಹರೀಶ್ ಅವರಿಗೆ ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಂ.ಬಿ. ಮಂಜೇಗೌಡ, ವಿಜಯನಗರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಎಂ. ರಾಮಚಂದ್ರ,ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಟಿ. ಸತೀಶ್ ಜವರೇಗೌಡ, ಪದಾಧಿಕಾರಿಗಳಾದ ಚಂದ್ರು ಮಂಡ್ಯ, ಕೆ.ಎಸ್. ಸತೀಶ್ ಕುಮಾರ್, ಟಿ. ಲೋಕೇಶ್ ಹುಣಸೂರು ಮೊದಲಾದವರು ಇದ್ದರು.----ಕೋಟ್... ಪ್ರತಿಯೊಬ್ಬ ವ್ಯಕ್ತಿಗೂ ಒಂದು ಉತ್ತಮ ವ್ಯಕ್ತಿತ್ವ ಇರಬೇಕು. ಯಾವುದೇ ವ್ಯಕ್ತಿ ವ್ಯಕ್ತಿತ್ವವಿಲ್ಲದೆ ಎಷ್ಟೇ ಉನ್ನತ ಶಿಕ್ಷಣ ಪಡೆದರೂ ಯಾವುದೇ ಪ್ರಯೋಜನವಿಲ್ಲ. ನಮ್ಮಲ್ಲಿ ವೈವಿದ್ಯೆತೆಯಿದೆ. ಇದು ಉಳಿಯಬೇಕಾದರೆ ನಾವೆಲ್ಲರೂ ಏಕತೆಯ ಮನೋಭಾವನೆಯನ್ನ ಅಗತ್ಯವಾಗಿ ಬೆಳೆಸಿಕೊಳ್ಳಬೇಕಾಗಿದೆ. ಕುವೆಂಪು ಅವರ ಆಶಯವು ಇದೇ ಆಗಿತ್ತು.- ಪ್ರೊ.ಕೆ. ಚಿದಾನಂದಗೌಡ, ವಿಶ್ರಾಂತ ಕುಲಪತಿ----ರಾಮಯಣ ಮತ್ತು ಮಹಾಭಾರತದಲ್ಲಿರುವ ಶ್ರೇಷ್ಠ ಸಂದೇಶಗಳನ್ನು ತಿರುಚುವಂತಹ ಕೆಲಸವನ್ನ ಕೆಲವು ಬರಹಗಾರರು ಮಾಡುತ್ತಿದ್ದಾರೆ. ಇದರಿಂದ ಸಾಮಾಜಿಕ ಸಾಮರಸ್ಯ ಹಾಳಾಗುತ್ತಿದೆ. ಸಮಾಜ ಒಡೆಯುವ ಬರವಣಿಗೆಯ ಮೂಲಕ ಹೊಸ ತಲೆಮಾರನ್ನು ದಿಕ್ಕುತಪ್ಪಿಸುವ ಕೆಲಸವನ್ನು ಸಾಹಿತಿಗಳು ಮಾಡದೆ, ತಮ್ಮ ಸಾಹಿತ್ಯದ ಮೂಲಕ ಜಗತ್ತನ್ನು ಬದಲಾವಣೆ ಮಾಡುವತ್ತ ಗಮನ ಹರಿಸಬೇಕು.- ಡಾ.ಬಿ.ಜೆ. ವಿಜಯ್ ಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ