ಕನ್ನಡಪ್ರಭ ವಾರ್ತೆ ಆಲೂರು

ಸಮಾಜ ಧರ್ಮದ ದಾರಿಯಲ್ಲಿ ನಡೆಯುವಂತೆ ಮಾರ್ಗದರ್ಶನ ಮಾಡುತ್ತಿರುವ ಮಠಮಾನ್ಯಗಳು ಬೆಳೆಯಬೇಕಾದರೆ ಭಕ್ತರ ಔದಾರ್ಯತೆ ಅಗತ್ಯ. ಮಠ ಮಂದಿರಗಳಿಗೆ ಭೌತಿಕ ಆಸ್ತಿಗಿಂತ ಭಕ್ತರೆ ದೊಡ್ಡ ಆಸ್ತಿ ಎಂದು ಶ್ರೀಮದ್ ರಂಭಾಪುರೀ ವೀರಾ ಸಿಂಹಾಸನ ಶಾಖಾ ಶ್ರೀ ಸಂಸ್ಥಾನ ಹಿರೇಮಠ ಕಾರ್ಜುವಳ್ಳಿಯ ಪೀಠಾಧ್ಯಕ್ಷರಾದ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಪಾಳ್ಯ ಹೋಬಳಿ ಕಾರ್ಜುವಳ್ಳಿ ಗ್ರಾಮದಲ್ಲಿರುವ ಶ್ರೀ ಸಂಸ್ಥಾನ ಹಿರೇಮಠದಲ್ಲಿ ಕಾರ್ಜುವಳ್ಳಿ ಶ್ರೀಗಳವರ ಅಧಿಕ ಜೇಷ್ಠ ಮಾಸದ ನಿಮಿತ್ಯ ಕೈಗೊಂಡ 9 ದಿನಗಳ ಮೌನ ಶಿವಾನುಷ್ಠಾನ ಮಂಗಲ ಸಮಾರಂಭ ಮತ್ತು ಶ್ರೀ ಸಿದ್ಧಾಂತ ಶಿಖಾಮಣಿ ತತ್ವ ಪ್ರಸಾರ ಅಭಿಯಾನ ಸಮಿತಿಯ ಆಶ್ರಯದಲ್ಲಿ ಧರ್ಮ ಪ್ರಸಾರಕ್ಕಾಗಿ ಸಾಗುತ್ತಿರುವ "ಮನೆ-ಮನೆಗೆ ರೇಣುಕ ಮನ-ಮನಕೆ ರೇಣುಕ ಶ್ರೀ ಸಿದ್ಧಾಂತ ಶಿಖಾಮಣಿ ತತ್ತ್ವ ಪ್ರಸಾರ ಅಭಿಯಾನ ಕಾರ್ಯಕ್ರಮ 36 ಸಂಚಿಕೆಗಳನ್ನು ಪೂರೈಸಿ ಮುನ್ನಡೆಯುತ್ತಿರುವ ಶುಭ ಸಮಾರಂಭ ಅಭಿಯಾನದ 3ನೇ ವಾರ್ಷಿಕೋತ್ಸವ ಹಾಗೂ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಧರ್ಮದಲ್ಲಿ ದಾರಿಯಲ್ಲಿ ನಡೆದರೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಮಠ, ಮಂದಿರಗಳು ಭಕ್ತರಿಗೆ ಶ್ರದ್ಧಾಕೇಂದ್ರಗಳಾಗಿ ಅವರನ್ನು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಣೆ ನೀಡುತ್ತವೆ. ಮಠಗಳು ಮತ್ತು ಧಾರ್ಮಿಕ ಸಂಸ್ಥೆಗಳು ಮೂಲಭೂತವಾಗಿ ಭಕ್ತರ ಕಲ್ಯಾಣ ಮತ್ತು ಲೋಕೋಪಕಾರಕ್ಕಾಗಿ ಸ್ಥಾಪಿತವಾಗಿರುತ್ತವೆ. ಭಕ್ತರ ಆಧ್ಯಾತ್ಮಿಕ ಉದ್ಧಾರ, ನೈತಿಕ ಮೌಲ್ಯಗಳ ಬೋಧನೆ ಮತ್ತು ಸಮಾಜ ಸೇವೆಯೇ ಮಠಗಳ ಪ್ರಮುಖ ಉದ್ದೇಶವಾಗಿರುತ್ತದೆ. ಸಮಾಜದ ಏಳಿಗೆಗೆ ಸಮರ್ಪಿಸಿಕೊಂಡವರಿಗೆ ನೀಡುವ ಗೌರವಾದರ ಸಾಂಕೇತಿಕ ಮಾತ್ರ. ಗುರುವಿಗೆ ಅರ್ಪಣೆ ಮಾಡಿದರೆ ತಮ್ಮ ಜೀವನ ಸಾರ್ಥಕವಾಗುತ್ತದೆ ಎಂಬ ಭಾವನೆ ಭಕ್ತಾದಿಗಳಲ್ಲಿ ಮೂಡಬೇಕು ಎಂದು ಆಶೀರ್ವದಿಸಿದರು. ಕಾರ್ಯಕ್ರಮದಲ್ಲಿ ಶ್ರೀಮಠದ ಆಡಳಿತಾಧಿಕಾರಿ ಶಿವಮೂರ್ತಿ ಸಿದ್ಧಾಪುರ, ಆಲೂರು ತಾಲೂಕು ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ರೇಣುಕಾ ಪ್ರಸಾದ್, ಉಪಾಧ್ಯಕ್ಷ ಡಿ.ಎಸ್ ಜಯಣ್ಣ, ಖಜಾಂಚಿ ಟೀಕರಾಜು, ಸಹ ಕಾರ್ಯದರ್ಶಿ ಡಾ. ಜಯರಾಜ್, ವಕೀಲರ ಸಂಘದ ಅಧ್ಯಕ್ಷ ಎಂ.ಎಸ್ ಮಹೇಶ್, ಜಿಲ್ಲಾ ಹಿಂದುಳಿದ ವರ್ಗಗಳ ಹಿರಿಯ ಸಲಹೆಗಾರ ಬಿ.ಸಿ ಶಂಕರಾಚಾರ್ಯ, ಪುರೋಹಿತರಾದ ದೇವರಾಜ್ ಶಾಸ್ತ್ರೀಗಳು, ಯತೀಶ್ ಶಾಸ್ತ್ರೀಗಳು, ಜಸ್ವಂತ್ ಶಾಸ್ತ್ರೀಗಳು, ಮನೆಮನೆಗೆ ರೇಣುಕಾ ಸಮಿತಿ ನಿರ್ದೇಶಕರಾದ ಯಶ್ವಂತ್, ಇಂದ್ರೇಶ್, ಮಂಜುನಾಥ ಶ್ರೀಧರ್, ಆನಗಳಲೆ ಕುಮಾರ್‌, ವಿರುಪಾಕ್ಷಯ್ಯ ಸೇರಿದಂತೆ ಮುಂತಾದವರು ಹಾಜರಿದ್ದರು.