ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ನಮ್ಮ ಸನಾತನ ಸಂಸ್ಕೃತಿ, ದೇವರುಗಳ ಬಗ್ಗೆ ವಿಕೃತವಾಗಿ ಟೀಕಿಸುವ ಮತ್ತು ಗಣೇಶ ಚತುರ್ಥಿ ಹಬ್ಬದಲ್ಲಿ ನದಿ, ಕೆರೆಗಳು ಪ್ರದೂಷಣವಾಗುತ್ತವೆಂದು ಬೊಬ್ಬೆ ಹೊಡೆಯುವ ಸ್ವಯಂಘೋಷಿತ ಬಸವ ತಾಲಿಬಾನಿಗಳು ಲವ್ ಜಿಹಾದ್, ಮತ ವಿಭಜನೆ, ಮತಾಂತರ, ಗೋಹತ್ಯೆ, ಕ್ರೈಸ್ತರ ಚಮತ್ಕಾರ ಪವಾಡ, ಬಕ್ರೀದ್ ಹಬ್ಬದಲ್ಲಿ ಕುರಿ ಬಲಿ ಬದಲಿಗೆ ಗೋವು ಬಲಿ ಕೊಡುತ್ತಿರುವವವರ ಬಗ್ಗೆ ಯಾಕೆ ಮಾತನಾಡುವುದಿಲ್ಲ ಎಂದು ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಪ್ರಶ್ನಿಸಿದ್ದಾರೆ.ನಮ್ಮ ಪವಾಡಗಳು ಮೂಢನಂಬಿಕೆಗಳಾದರೆ, ಪ್ರತಿ ರಾಜ್ಯದಲ್ಲಿ ಪ್ರರಿ ತಿಂಗಳು ಹಿಂದೂ ಧರ್ಮದ ಲಕ್ಷಾಂತರ ಬಾಲಕಿಯರು ಕಾಣೆಯಾಗುತ್ತಿರುವುದಕ್ಕೆ ಲವ್ ಜಿಹಾದ್ ಮುಖ್ಯ ಕಾರಣವಾಗಿದ್ದು, ಯಾವೊಬ್ಬ ಸ್ವಾಮಿಯೂ ಬಾಯ್ಬಿಡುವುದಿಲ್ಲ. ಯಾಕ್ರಪಾ ನಮ್ಮದು ತಿಂದು ನಮ್ಮನ್ನೇ ಬೈಯುವ ಕಾಂಟ್ರ್ಯಾಕ್ಟ್‌ ತಗೋಂಡಿದ್ದೀರೇನು ನೀವು ಎಂದು ಪ್ರಶ್ನಿಸಿದೆ, ಲಕ್ಷಾಂತರ ಲವ್ ಜಿಹಾದ್, ಮತಾಂತರಗಳಾದರೂ ಕಿಮಿಕ್ ಎನ್ನದ ಚರ್ಚ್‌ಗಳು ಕೊಡುವ ಬಾಲ ಏಸು ಪುರಸ್ಕಾರ ಪಡೆದುಕೊಳ್ಳುತ್ತ ಹಿಂದೂಗಳ ಬಗ್ಗೆ ಎಳ್ಳಷ್ಟೂ ಕಾಳಜಿ ತೋರುತ್ತಿಲ್ಲ. ಕುರಾನ್‌ನನ್ನು ಮರಾಠಿಗೆ ಭಾಷಾಂತರಿಸುವಲ್ಲಿ ಆಸಕ್ತಿ ತೋರುವ ಸ್ವಾಮೀಜಿಗಳು ಸನಾತನ ಹಿಂದೂ ಧರ್ಮ ವಿರೋಧಿಸುವುದಾದರೆ ಮೊದಲು ತಮ್ಮ ಖಾವಿವಸ್ತ್ರ ಮಠ, ಪಾದುಕೆ, ಪೀಠಗಳನ್ನು ಬಿಟ್ಟು ತಮಗಿಷ್ಟವಾದ ಬೇರೆ ವರ್ಣದ ಸನ್ಯಾಸ ಬಟ್ಟೆ ತೊಟ್ಟು, ಬೇರೆ ಮಠ ಕಟ್ಟಿಕೊಳ್ಳಲಿ ಎಂದು ಸವಾಲು ಹಾಕಿದರು.

ಬಸವಾದಿ ಶರಣರೆಂದರೆ ಹಿಂದೂಗಳಲ್ಲವೆಂದು ಕೆಲವು ಮುಠ್ಠಾಳರು ಪುಂಗಿ ಊದಲಾರಂಭಿಸಿದ್ದಲ್ಲದೇ ಬಸವಣ್ಣನವರ ವಚನ ಒಂದಾದರೆ ಇವರು ಹೇಳೋದು ಹನ್ನೊಂದು. ಬಸವಣ್ಣ ಯಾವ ಕರ್ಮ ಸಿದ್ಧಾಂತ ಒಪ್ಪಿಕೊಂಡಿಲ್ಲ, ಗುಡಿ ಸಂಸ್ಕೃತಿ ಒಪ್ಪಿಲ್ಲ, ಜಗುಲಿಯ ದೇವರನ್ನು ಹೊಳೆಗೆ ಕಾಣಿಸಿ, ಮಹಾಭಾರತದ ಕಥೆಯನ್ನು ವಿಕೃತಗೊಳಿಸಿ ಲೇವಡಿ ಮಾಡುವುದು, ಹಿಂದೂ ಧರ್ಮವನ್ನು ವಿಭಜಿಸಿ ಕ್ರಿಶ್ಚಿಯನ್ ಮತ್ತು ಇಸ್ಲಾಂ ಬೆಂಬಲಿಸುತ್ತಿರುವುದು ದುಷ್ಟತನದ ಪರಮಾವಧಿಯಾಗಿದೆ. ಇದೇ ಅಪಹಾಸ್ಯವನ್ನು ಪೈಗಂಬರ್ ಬಗ್ಗೆ ಮಾತಾಡೋ ಶೂರತನ, ಗಟ್ಟಿತನವಿದೆಯೇ ಇವರಿಗೆ? ಇದೆಲ್ಲ ಮಾಡುವವರಿಗೆ ನಾನು ಬೈಯ್ದೆ. ನಾನು ಬಳಸಿದ ಬೈಗುಳ ನೀವು ಎಂದಿಗೂ ಬಳಸಿಯೇ ಇಲ್ಲವೆಂದು ನಿಮ್ಮಪ್ಪ-ಅವ್ವನ ಮೇಲೆ ಆಣಿ ಮಾಡಿ, ನಾನು ಅಲ್ಲಿಯವರೆಗೆ ನನ್ನ ಶಬ್ಧ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಹನುಮಂತ ನಿರಾಣಿ, ಶ್ರೀಕಾಂತ ಕುಲಕರ್ಣಿ, ಮಹೇಶ ಕುಮಟಳ್ಳಿ, ಜಿ.ಎಸ್. ನ್ಯಾಮಗೌಡ, ರಬಕವಿ ಗುರುಸಿದ್ದೇಶ್ವರ ಶ್ರೀ, ಬನಹಟ್ಟಿಯ ಶರಣಬಸವ ಶಿವಾಚಾರ್ಯರು, ಜಮಖಂಡಿ ಕಲ್ಯಾಣಮಠ ಶ್ರೀ, ಶಿರೋಳ ಶಂಕರಾರೂಢ ಶ್ರೀ, ವಿಜಯಪುರ ಯೋಗೀಶ್ವರ ಮಾತಾಜಿ, ಶಹಾಪುರ ಸುಗುರೇಶ್ವರ ಶ್ರೀ, ಆರೂಢರು, ವಿರಕ್ತರು, ಗುರುಪೀಠಸ್ಥರು, ಶಿವಾಚಾರ್ಯರು ಸೇರಿದಂತೆ ೩೦೦ಕ್ಕೂ ಅಧಿಕ ಮಠಾಧೀಶರು ವೇದಿಕೆಯಲ್ಲಿದ್ದರು.