ಸಾರಾಂಶ
ಬರಗಾಲದ ಬೆಳೆಗಳು ಎಂದು ಪರಿಗಣಿಸಿದ ಗಡ್ಡೆ ಗೆಣಸುಗಳು ಪೋಷಕಾಂಶದ ಖಜಾನೆ. ಇಷ್ಟೊಂದು ಬಗೆಯ ಗಡ್ಡೆ-ಗೆಣಸು ಇರುವುದು ಹೆಚ್ಚಿನವರಿಗೆ ಗೊತ್ತೆ ಇಲ್ಲ.
ಹುಬ್ಬಳ್ಳಿ:
ಆಹಾರದ ಬಟ್ಟಲಿನಿಂದ ಗಡ್ಡೆ ಗೆಣಸು ಮಾಯವಾಗಿವೆ. ಆರೋಗ್ಯದ ಜೀವನಕ್ಕೆ ಗಡ್ಡೆ ಗೆಣಸುಗಳ ಬಳಕೆ ಪೂರಕ ಎಂದು ಆಹಾರ ತಜ್ಞೆ ಮತ್ತು ಬರಹಗಾರ್ತಿ ಮಾಲತಿ ಹೆಗಡೆ ಹೇಳಿದರು.ಇಲ್ಲಿನ ಮೂರುಸಾವಿರ ಮಠದ ಡಾ. ಮೂಜಗಂ ಸಭಾಭವನದಲ್ಲಿ ಸಹಜ ಸಮೃದ್ಧ, ಆರೋಗ್ಯಯುತ ಆಹಾರ ಸೇವನೆಗೆ ನಿರ್ಲಕ್ಷಿತ ಬೆಳೆ ಮತ್ತು ಉತ್ಪನ್ನಗಳು ಮತ್ತು ರೋಟರಿ ಕ್ಲಬ್ ಆಶ್ರಯದಲ್ಲಿ ಭಾನುವಾರ ನಡೆದ ಗಡ್ಡೆ ಗೆಣಸು ಮೇಳದ ಭಾಗವಾಗಿ ನಡೆದ ಮಕ್ಕಳ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಬರಗಾಲದ ಬೆಳೆಗಳು ಎಂದು ಪರಿಗಣಿಸಿದ ಗಡ್ಡೆ ಗೆಣಸುಗಳು ಪೋಷಕಾಂಶದ ಖಜಾನೆ. ಇಷ್ಟೊಂದು ಬಗೆಯ ಗಡ್ಡೆ-ಗೆಣಸು ಇರುವುದು ಹೆಚ್ಚಿನವರಿಗೆ ಗೊತ್ತೆ ಇಲ್ಲ. ಇಂತಹ ಮೇಳ ಆಯೋಜಿಸುವ ಮೂಲಕ, ಗ್ರಾಹಕರಲ್ಲಿ ಮರೆತು ಹೋದ ಆಹಾರಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ಬಾಪುಗೌಡ ಬಿರಾದಾರ ಮಾತನಾಡಿ, ಗಡ್ಡೆ-ಗೆಣಸುಗಳ ಮಹತ್ವದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದು ಮಕ್ಕಳಿಗಷ್ಟೇ ಅಲ್ಲದೆ ಅವರ ಪೋಷಕರಿಗೂ ಕೂಡ ಕಲಿಕೆಯಾಗಿದೆ. ಗಡ್ಡೆ ಗೆಣಸುಗಳು ನಮ್ಮ ದಿನನಿತ್ಯದ ಅಡುಗೆಯ ಭಾಗವಾಗಬೇಕು ಎಂದರು.
ರೋಟರಿ ಕ್ಲಬ್ ಕಾರ್ಯದರ್ಶಿ ಎ.ವಿ. ಸಂಕನೂರ ಮಾತನಾಡಿದರು. ಚಿತ್ರಕಲಾ ಸ್ಪರ್ಧೆಯ ತೀರ್ಪುಗಾರರಾದ ಶಿಲ್ಪಾ ಬಂಕಾಪುರ ಮತ್ತು ರತ್ನಾ ಮೂರ್ಶಿಲ್ಲಿ, ದೇವಧಾನ್ಯ ರೈತ ಉತ್ಪಾದಕರ ಕಂಪನಿಯ ಸೂರ್ಯಕಾಂತ್ ಶೇಗುಣಸೆ, ಮೇಳದ ಆಯೋಜಕ ಪ್ರಕಾಶ್ ಹಿರೇಮಠ್, ಶ್ರೀದೇವಿ, ಈಶ್ವರಪ್ಪ ಅಂಗಡಿ ಸೇರಿದಂತೆ ಹಲವರಿದ್ದರು.ವಿಜೇತ ಮಕ್ಕಳಿಗೆ ಬಹುಮಾನ
ಗಡ್ಡೆ ಗೆಣಸು ಚಿತ್ರಕಲಾ ಸ್ಪರ್ಧೆಯ 5-10 ವರ್ಷದ ಮಕ್ಕಳ ವಿಭಾಗದಲ್ಲಿ ಧ್ವನಿ ಕರ್ವಾ(ಪ್ರಥಮ), ಪಿಹು ಕಬಾಡೆ (ದ್ವಿತೀಯ), ಚಿತ್ರಾಲಿ ಶೇಟ್ (ತೃತೀಯ). 10-15 ವರ್ಷದ ಮಕ್ಕಳ ವಿಭಾಗದಲ್ಲಿ ಸಾನ್ವಿ ಯಾರಗುಪ್ಪ (ಪ್ರಥಮ), ಅಪೂರ್ವ ಶೇಟ್ (ದ್ವಿತೀಯ), ಯಶವಂತ ಮುಂಡರಗಿ (ತೃತೀಯ) ಬಹುಮಾನ ಪಡೆದರು.ಇದೇ ವೇಳೆ ಮಾಲತಿ ಹೆಗಡೆ ಅವರು ಗಡ್ಡೆ ಗೆಣಸಿನ ಖಾದ್ಯಗಳಾದ ನೀಲಿ ಗೆಣಸಿನ ಹಲ್ವಾ, ಕಿತ್ತಳೆ ಗೆಣಸಿನ ಚಿಪ್ಸ್, ಬಿಳಿ ಗೆಣಸಿನ ಬಜ್ಜಿ, ನೀಲಿ ಗೆಣಸಿನ ಬೋಂಡಾ, ಮತ್ತು ನೀಲಿ ಗೆಣಸಿನ ಪಾಯಸದ ಅಡುಗೆಗಳನ್ನು ಮಾಡಿ ತೋರಿಸಿದರು.