ದಾಳಿ ನಡೆಸಿದ ಆನೆ ಸೆರೆಗೆ ಶೀಘ್ರ ಕಾರ್ಯಾಚರಣೆ: ರಾಜೇಗೌಡ

| Published : Dec 02 2024, 01:16 AM IST

ಸಾರಾಂಶ

ಬಾಳೆಹೊನ್ನೂರು, ಎನ್.ಆರ್.ಪುರ ತಾಲೂಕಿನ ಸೀತೂರಿನಲ್ಲಿ ಮನುಷ್ಯನ ಮೇಲೆ ದಾಳಿ ನಡೆಸಿ ಸಾಯಿಸಿದ ಆನೆ ಸೆರೆಗೆ ಶೀಘ್ರ ಕಾರ್ಯಾಚರಣೆ ನಡೆಸಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಆನೆ ಸೆರೆ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸುಚನೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಎನ್.ಆರ್.ಪುರ ತಾಲೂಕಿನ ಸೀತೂರಿನಲ್ಲಿ ಮನುಷ್ಯನ ಮೇಲೆ ದಾಳಿ ನಡೆಸಿ ಸಾಯಿಸಿದ ಆನೆ ಸೆರೆಗೆ ಶೀಘ್ರ ಕಾರ್ಯಾಚರಣೆ ನಡೆಸಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.ಆನೆ ಸೆರೆ ಕಾರ್ಯಾಚರಣೆ ಶೀಘ್ರ ಮಾಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಈ ಬಗ್ಗೆ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ, ಅರಣ್ಯ ಸಚಿವರು, ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.ಆನೆ ದಾಳಿಯಿಂದ ಮೃತರಾದ ಕೆರೆಗದ್ದೆ ಉಮೇಶ್ ಕುಟುಂಬಕ್ಕೆ ತಕ್ಷಣ ಸರ್ಕಾರದಿಂದ ₹15 ಲಕ್ಷದ ಚೆಕ್ ವಿತರಿಸಿದ್ದು, ವೈಯುಕ್ತಿಕವಾಗಿ ನಾನು ₹1 ಲಕ್ಷ ನೀಡುವ ಭರವಸೆಯಂತೆ ಶೀಘ್ರ ಹಣ ಕಳುಹಿಸಿ ಕೊಡಲಿದ್ದೇನೆ. ಅರಣ್ಯ ಇಲಾಖೆ ಗ್ರಾಮ ಅರಣ್ಯ ಸಮಿತಿಯಿಂದ ₹5 ಲಕ್ಷ ನೀಡುವ ಭರವಸೆ ನೀಡಿದ್ದಾರೆ. ಅವರ ಕುಟುಂಬದ ಓರ್ವ ವ್ಯಕ್ತಿಗೆ ಅರಣ್ಯ ಇಲಾಖೆಯಲ್ಲಿ ಕೆಲಸದ ಅವಕಾಶ ಕೊಡುವ ಬಗ್ಗೆ ಈಗಾಗಲೇ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದರು.ಮಲೆನಾಡು ಭಾಗದಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಿದ್ದು, ಅರಣ್ಯ ಇಲಾಖೆಯವರು ಕೆಲವು ಭಾಗದಲ್ಲಿ ಅಕೇಶಿಯಾ, ಸಾಗುವಾನಿ ಮರಗಳನ್ನು ಹೆಚ್ಚಾಗಿ ಹಾಕಿದ್ದು, ಹಂತ ಹಂತವಾಗಿ ಇದನ್ನು ತೆಗೆದು, ಹಣ್ಣಿನ ಮರಗಳನ್ನು ನೆಡುವ ಕೆಲಸ ಮಾಡಬೇಕಿದೆ. ಆನೆ ಬ್ಯಾರಿಕೇಡ್ ಹಾಕುವ ಕಾರ್ಯವನ್ನು ಹಂತವಾಗಿ ಮಾಡುತ್ತಿದ್ದು, ರೇಲ್ವೇ ಬ್ಯಾರಿಕೇಡ್ ಹಾಕುವ ಬಗ್ಗೆ ಅಧಿವೇಶನದಲ್ಲಿ ಒತ್ತಡ ತರಲಾಗುವುದು. ಇಂತಹ ಯೋಜನೆಗಳಿಂದ ಮಾತ್ರ ಆನೆ ಹಾವಳಿಗೆ ಶಾಶ್ವತ ಪರಿಹಾರ ಸಾಧ್ಯವಿದೆ ಎಂದರು.

ಆನೆ ಬಿಡಾರ ಆರಂಭಗೊಳ್ಳುತ್ತಿರುವ ತನೂಡಿ ಸ್ಥಳೀಯರು, ಅಧಿಕಾರಿಗಳೊಂದಿಗೆ ಚರ್ಚಿಸಿ ಸಾಧಕ, ಬಾಧಕಗಳನ್ನು ತಿಳಿದುಕೊಳ್ಳಲಾಗುವುದು. ಆನೆ ಬಿಡಾರ ಆರಂಭವಾದರೆ ಮಲೆನಾಡಿನ ಜನರಿಗೆ ಯಾವುದೇ ತೊಂದರೆಯಿಲ್ಲ. ಬಿಡಾರ ಆರಂಭಿಸಿದರೆ ಆನೆಗಳನ್ನು ಬೇಕಾಬಿಟ್ಟಿಯಾಗಿ ಬಿಡುವುದಿಲ್ಲ. ನಿರ್ಧಿಷ್ಟ ಜಾಗದಲ್ಲಿ ಇರುವಂತೆ ಕ್ರಮ ವಹಿಸುತ್ತಾರೆ.ಆನೆ ಬಿಡಾರದಿಂದ ಈ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಆಗಲಿದೆ, ಪ್ರವಾಸಿ ತಾಣವಾಗಿ ಬಿಡಾರ ಕಾರ್ಯ ನಿರ್ವಹಿಸಲಿದೆ. ಜನರಿಗೆ ಆನೆ ಸವಾರಿ, ವೀಕ್ಷಣೆ ಅವಕಾಶ ದೊರೆಯಲಿದೆ. ಮಲೆನಾಡು ಭಾಗದಲ್ಲಿ ಕಾಡಾನೆ ದಾಳಿ, ಹಾವಳಿ ಉಂಟಾದ ಸಂದರ್ಭದಲ್ಲಿ ಕಾಡಾನೆಗಳನ್ನು ಕಾಡಿಗೆ ಅಟ್ಟಿಸುವ ಕಾರ್ಯಾಚರಣೆಗೆ, ಸೆರೆ ಹಿಡಿದ ಆನೆಗಳನ್ನು ಪಳಗಿಸಿ ಕೊಳ್ಳಲು ಬಿಡಾರದಿಂದ ಸಾಧ್ಯವಾಗಲಿದೆ ಎಂದರು.೦೧ಬಿಹೆಚ್‌ಆರ್ ೩: ಟಿ.ಡಿ.ರಾಜೇಗೌಡ