ಕೊಪ್ಪಳ: ಚಿಕ್ಕಂದಿನಲ್ಲೇ ಈಜು ಕಲಿಸುವ ಮೂಲಕ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸಬೇಕು. ಈಜು ಸ್ಪರ್ಧೆಯಿಂದ ಮಕ್ಕಳಲ್ಲಿ ಮಾನಸಿಕ ಸದೃಢತೆ ಹೆಚ್ಚಾಗುತ್ತದೆ ಎಂದು ಕೊಪ್ಪಳ ನಗರ ಠಾಣೆಯ ಪಿಐ ಸುರೇಶ ಡಿ. ಹೇಳಿದ್ದಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಸ್ವಿಮಿಂಗ್ ಕ್ಲಬ್ ಸಹಯೋಗದೊಂದಿಗೆ ಭಾನುವಾರ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಕ್ರೀಡಾಪಟು ಈಜು ಸ್ಪರ್ಧೆಯಲ್ಲಿ ಭಾಗವಹಿಸಿದಾಗ ದೈಹಿಕವಾಗಿ, ಮಾನಸಿಕವಾಗಿ ಸದೃಢವಾಗಲು ಸಾಧ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ್ ಮಾತನಾಡಿ, ಕ್ರೀಡೆ ಜೀವನದ ಒಂದು ಭಾಗವಾಗಿದೆ. ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸಿ, ತಮ್ಮ ಸಾಮರ್ಥ್ಯ ಹೆಚ್ಚಿಸುವ ಜತೆಗೆ ಆರೋಗ್ಯ ಸದೃಢವಾಗಿಟ್ಟುಕೊಳ್ಳಬೇಕು ಎಂದರು.ಅಂತಾರಾಷ್ಟ್ರೀಯ ಕ್ರೀಡಾಪಟು ಅಸ್ಮಿತಾಚಂದ್ರು ಮಾತನಾಡಿ, ಈಜು ತರಬೇತಿ ಪಡೆದು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಿ ಎಂದು ಸಲಹೆ ನೀಡಿದರು. ಅಂತಾರಾಷ್ಟ್ರೀಯ ಕ್ರೀಡಾಪಟು ವೃತಿ ಅಗರವಾಲ್ ಮಾತನಾಡಿ, ಹಿರಿಯರ ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ರಾಷ್ಟ್ರಮಟ್ಟದಲ್ಲಿ ಬೆಳೆಯಿರಿ ಎಂದು ಈಜುಪಟುಗಳಿಗೆ ಹಾರೈಸಿದರು.
50 ಕ್ರೀಡಾಪಟುಗಳು ಭಾಗಿ: ಈಜು ಸ್ಪರ್ಧೆಯಲ್ಲಿ 8ರಿಂದ 10 ವರ್ಷ ವಯೋಮಿತಿ, 10ರಿಂದ 12 ವರ್ಷ ವಯೋಮಿತಿ ಹಾಗೂ 12ರಿಂದ 14 ವರ್ಷ ವಯೋಮಿತಿ ಒಳಗಿನ ಬಾಲಕ ಮತ್ತು ಬಾಲಕಿಯರಿಗೆ ಅವಕಾಶ ಕಲ್ಪಿಸಲಾಗಿದ್ದು, ಈಜು ಸ್ಪರ್ಧೆಯಲ್ಲಿ ಒಟ್ಟು 50 ಬಾಲಕ-ಬಾಲಕಿಯರು ಭಾಗವಹಿಸಿದ್ದರು.ವಿಜೇತರು: 8ರಿಂದ 10 ವರ್ಷ ವಯೋಮಿತಿಯ ಸ್ಪರ್ಧೆಯಲ್ಲಿ ವಿರಾಟ್ ಪಾಟೀಲ್ ಪ್ರಥಮ ಸ್ಥಾನ, ಆದರ್ಶ ದ್ವಿತೀಯ, ಸುಫಿಯಾನ್ ಪಟೇಲ್ ತೃತೀಯ ಸ್ಥಾನ ಪಡೆದುಕೊಂಡರು. 10ರಿಂದ 12 ವರ್ಷ ವಯೋಮಿತಿಯ ಸ್ಪರ್ಧೆಯಲ್ಲಿ ಶೌರ್ಯ ಪಾಟೀಲ್ ಪ್ರಥಮ, ಅನುಷ್ ದ್ವಿತೀಯ, ಶ್ರೀಧರ್ ಭಟ್ ತೃತೀಯ ಸ್ಥಾನ ಪಡೆದುಕೊಂಡರೆ, 12ರಿಂದ 14 ವರ್ಷ ವಯೋಮಿತಿಯ ಸ್ಪರ್ಧೆಯಲ್ಲಿ ಗವಿಶ್ ಪ್ರಥಮ, ಶ್ರೇಯಸ್ ದ್ವಿತೀಯ ಮತ್ತು ತನಯ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ತರಬೇತುದಾರರಾದ ಜಾನ್ವಿ ಮತ್ತು ಎ.ಎನ್. ಯತಿರಾಜ್, ಕೊಪ್ಪಳ ತಾಲೂಕು ಕ್ರೀಡಾಧಿಕಾರಿಗಳಾದ ಶರಣಬಸವ ಬಂಡಿಹಾಳ ಉಪಸ್ಥಿತರಿದ್ದರು. ಬಸವಾಜು ಹನುಮಸಾಗರ ಕಾರ್ಯಕ್ರಮ ನಿರೂಪಿಸಿದರು.