ಬೇಲೂರಿನಲ್ಲಿ ಸಾಂಕೇತಿಕ ಬಂದ್‌ ಪ್ರತಿಭಟನಾ ಮೆರವಣಿಗೆ

| Published : Sep 23 2025, 01:03 AM IST

ಸಾರಾಂಶ

ಪುರಸಭೆ ಗಣೇಶ ವಿಗ್ರಹಕ್ಕೆ ಅಪಚಾರ ಖಂಡಿಸಿ ಕರೆ ನೀಡಿದ್ದ ಸ್ವಯಂಪ್ರೇರಿತ ಬಂದ್ ಯಶಸ್ವಿಯಾಗಿ ನಡೆದಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ತನಿಖೆ ನಡೆಸಬೇಕೆಂದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗೆ ಸಂದರ್ಭದಲ್ಲಿ ಶ್ರೀ ಚನ್ನಕೇಶವ ಸ್ವಾಮಿ ದೇಗುಲದಿಂದ ವಿಶೇಷ ಪೂಜೆ ಸಲ್ಲಿಸಿ ಪೂರ್ಣ ಕಳಶದೊಂದಿಗೆ ಗಂಗಾತೀರ್ಥವನ್ನು ಮೆರವಣಿಗೆ ಮೂಲಕ ತರಲಾಯಿತು. ಬಸವೇಶ್ವರ ವೃತ್ತದಲ್ಲಿ ಮಾನವ ಸರಪಣಿ ನಿರ್ಮಿಸಿ ರಸ್ತೆ ತಡೆ ನಡೆಸಿ ಹಿಂದೂ ಪರ ಸಂಘಟನೆಗ ಕಾರ್ಯಕರ್ತರೊಂದಿಗೆ ಶಾಸಕ ಎಚ್ ಸುರೇಶ್, ಮಾಜಿ ಶಾಸಕ ಕೆ ಎಸ್ ಲಿಂಗೇಶ್ ಪ್ರತಿಭಟನೆ ನಡೆಸಿದರು‌.

ಕನ್ನಡಪ್ರಭ ವಾರ್ತೆ ಬೇಲೂರು

ಇಲ್ಲಿನ ಪುರಸಭೆ ಗಣೇಶ ವಿಗ್ರಹಕ್ಕೆ ಅಪಚಾರ ಖಂಡಿಸಿ ಕರೆ ನೀಡಿದ್ದ ಸ್ವಯಂಪ್ರೇರಿತ ಬಂದ್ ಯಶಸ್ವಿಯಾಗಿ ನಡೆದಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ತನಿಖೆ ನಡೆಸಬೇಕೆಂದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.

ಪಟ್ಟಣದ ಪುರಸಭೆ ಆವರಣದಲ್ಲಿದ್ದ ಗಣೇಶ ವಿಗ್ರಹಕ್ಕೆ ಚಪ್ಪಲಿ ಇಟ್ಟು ಅವಮಾನ ಮಾಡಿದ ಘಟನೆಗೆ ಪ್ರತಿಯಾಗಿ ಸೋಮವಾರ ವರ್ತಕರು ಸ್ವಯಂ ಪ್ರೇರಿತರಾಗಿ ಬಂದ್ ಮಾಡುವ ಮೂಲಕ ತಪ್ಪಿತಸ್ಥರನ್ನು ಕೂಡಲೇ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಇದರ ಹಿಂದಿರುವ ಕಾಣದ ಕೈಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಶ್ರೀ ಚನ್ನಕೇಶವ ದೇಗುಲದಿಂದ ಹೊರಟ ಪ್ರತಿಭಟನಾಕಾರರು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಬಸವೇಶ್ವರ ವೃತ್ತದವರೆಗೆ ಪ್ರತಿಭಟನೆ ನಡೆಸಿದರು. ಮೆರವಣಿಗೆ ಸಂದರ್ಭದಲ್ಲಿ ಶ್ರೀ ಚನ್ನಕೇಶವ ಸ್ವಾಮಿ ದೇಗುಲದಿಂದ ವಿಶೇಷ ಪೂಜೆ ಸಲ್ಲಿಸಿ ಪೂರ್ಣ ಕಳಶದೊಂದಿಗೆ ಗಂಗಾತೀರ್ಥವನ್ನು ಮೆರವಣಿಗೆ ಮೂಲಕ ತರಲಾಯಿತು. ಬಸವೇಶ್ವರ ವೃತ್ತದಲ್ಲಿ ಮಾನವ ಸರಪಣಿ ನಿರ್ಮಿಸಿ ರಸ್ತೆ ತಡೆ ನಡೆಸಿ ಹಿಂದೂ ಪರ ಸಂಘಟನೆಗ ಕಾರ್ಯಕರ್ತರೊಂದಿಗೆ ಶಾಸಕ ಎಚ್ ಸುರೇಶ್, ಮಾಜಿ ಶಾಸಕ ಕೆ ಎಸ್ ಲಿಂಗೇಶ್ ಪ್ರತಿಭಟನೆ ನಡೆಸಿದರು‌.ಪ್ರತಿಭಟನೆಯಲ್ಲಿ ಉದ್ದೇಶಿಸಿ ಮಾತನಾಡಿದ ಶಾಸಕ ಎಚ್.ಕೆ. ಸುರೇಶ್, ಭಾನುವಾರ ನಡೆದ ಘಟನೆ ಇಡೀ ರಾಜ್ಯಕ್ಕೆ ಅವಮಾನವಾಗಿದೆ. ಆದರೆ ಪ್ರತಿಭಟನೆಯನ್ನು ಇಂದು ಶಾಂತಿಯುತವಾಗಿ ನಡೆಸಿದ್ದೇವೆ. ೯೦೦ ವರ್ಷಗಳ ಇತಿಹಾಸ ಹೊಂದಿರುವ ಈ ಬೇಲೂರು ಐತಿಹಾಸಿಕ ದೇವಾಲಯ ಶ್ರೀ ಚನ್ನಕೇಶವ ಸ್ವಾಮಿ ದೇಗುಲ ಇದರ ಜೊತೆ ಅರವತ್ತು ವರ್ಷ ಇತಿಹಾಸ ಇರುವ ಭಕ್ತರ ದೈವ ವರಸಿದ್ದಿ ಗಣೇಶನಿಗೆ ಸುಮಾರು ೬೦ ವರ್ಷಗಳಿಂದ ಭಕ್ತರು ಪ್ರತಿದಿನ ಪೂಜೆ ನಡೆಸುತ್ತಾ ಬಂದಿದ್ದಾರೆ. ಆದರೆ ಕಿಡಿಗೇಡಿ ಮಹಿಳೆಯೊಬ್ಬರು ದೇವರಿಗೆ ಚಪ್ಪಲಿ ಹಾಕುವ ದುರುದ್ದೇಶದ ಹಿಂದೆ ಯಾರಿದ್ದಾರೆ ಎಂಬುದು ಬಯಲಿಗೆಳೆಯಬೇಕು . “ಲೀಲಮ್ಮ ಬಂಧನಕ್ಕೊಳಗಾದರೂ ಅವರ ಹಿಂದೆ ಯಾರದ್ದೋ ಶಕ್ತಿ ಕೆಲಸ ಮಾಡುತ್ತಿದೆ. ಹಾಸನದಿಂದ ಬಂದು ಬೇಲೂರಿನಲ್ಲಿ ದೇಗುಲ ಪ್ರವೇಶ ಮಾಡಿ ಚಪ್ಪಲಿ ಹಾರ ಹಾಕಿ ಅವಮಾನ ಮಾಡಿದ್ದಾರೆ. ಈ ರೀತಿಯ ಕೃತ್ಯ ಮಾಡಿದವರ ಉದ್ದೇಶವೇನು ಎಂಬುದು ತಿಳಿಯಬೇಕು. ಅವಳನ್ನು ಬಂಧಿಸಿದ ನಂತರ ಅವಳಿಗೆ ಹುಚ್ಚು ಅಂತೀರಾ? ಹಾಗಾದರೆ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪೊಲೀಸರು ತೋರಿಸಲಿ. ಯಾವುದೇ ದಾಖಲೆ ನಮಗೆ ಇದುವರೆಗೂ ಅದರ ಮಾಹಿತಿ ಇಲ್ಲ. ಇದು ಪ್ರತಿಯೊಬ್ಬ ಹಿಂದೂಗೆ ಅವಮಾನವಾಗಿದೆ. ಮೊದಲು ಪೊಲೀಸರು ಇದರ ಬಗ್ಗೆ ಸಮಗ್ರ ತನಿಖೆ ನಡೆಸಲಿ.ಇದರ ಸಂಪೂರ್ಣ ತನಿಖೆ ನಡೆಸಿ ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಡೆಯುವ ಸಮಸ್ಯೆಗಳಿಗೆ ಪೊಲೀಸರೆ ನೇರ ಹೊಣೆಯಾಗುತ್ತೀರ " ಎಂದರು.ಮಾಜಿ ಶಾಸಕ ಕೆ ಎಸ್ ಲಿಂಗೇಶ್ ಹಾಗು ಬಿಜೆಪಿ ಮುಖಂಡ ರೇಣುಕುಮಾರ್ ಮಾತನಾಡಿ, ಸರ್ಕಾರ ಇಂದು ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದೆ. ರಾಜಕೀಯ ದುರದ್ದೇಶ ಇಟ್ಟುಕೊಂಡು ಶಾಂತಿಯ ಸಂಕೇತವಾಗಿರುವ ಇಲ್ಲಿ ಅಶಾಂತಿ ತರುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾನೂನು ಸುವ್ಯವಸ್ಥೆ ಎನಾಗಿದೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ. ಇತ್ತೀಚಿನ ದಿನಗಳಲ್ಲಿ ಗಾಂಜಾ, ಬೈಕ್ ವ್ಹೀಲಿಂಗ್ ಮಾಡುವ ಹುಚ್ಚಾಟದ ಜೊತೆಗೆ ಇಂತಹ ಹೀನ ಕೃತ್ಯದಲ್ಲಿ ಭಾಗಿಯಾಗಿರುವ ಅನುಮಾನ ತರಿಸುವ ಒಂದು ತಂಡ ಇದೆ ಎಂದು ತಿಳಿದು ಬಂದಿದೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಹೋರಾಟ ಎನ್ನುವವರಿಗೆ ನಾಚಿಕೆಯಾಗಬೇಕು. ನಿಮ್ಮ ಪಕ್ಷದಲ್ಲಿ ಹಿಂದೂಗಳಿಲ್ಲವೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.ಪ್ರತಿಭಟನೆ ಉದ್ದೇಶಿಸಿ ವಿಶ್ವ ಹಿಂದೂಪರಿಷತ್ ಹಾಗೂ ಬಜರಂಗದಳದ ವಿಭಾಗೀಯ ಸಂಚಾಲಕ ರಘು ಸಕಲೇಶಪುರ ಹಾಗು ಶ್ಯಾಮ್ ಮಾತನಾಡಿ, ಮಾನಸಿಕ ಅಸ್ವಸ್ಥೆ ಎಂದು ಪೊಲೀಸ್ ಇಲಾಖೆ ದೃಢೀಕರಣ ಪತ್ರ ನೀಡುತ್ತಿದೆ ಎಂದರೆ ಇದರ ಹಿಂದಿನ ಮರ್ಮವೇನು. ಅಲ್ಲದೆ ನಿಜವಾಗಿಯೂ ಆಕೆ ಲೀಲಮ್ಮಳೊ ಅಥವ ಬೇರೆ ಯಾರು ಅನ್ನೋದನ್ನು ಬಹಿರಂಗಪಡಿಸಲಿ. ಆಕೆಯ ಬಗ್ಗೆ ಪೊಲೀಸ್ ಇಲಾಖೆ ಯಾವುದೇ ಮಾಹಿತಿ ನೀಡದೆ ಇರುವುದು ಅನುಮಾನ ತರಿಸುತ್ತಿದ್ದು ಇದರ ಹಿಂದಿನ ಸತ್ಯಾಸತ್ಯತೆ ತಿಳಿಸದಿದ್ದಲ್ಲಿ ಮುಂದೆ ಉಗ್ರಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ತಾಲೂಕು ವಿಶ್ವ ಹಿಂದೂ ಪರಿಷತ್ತು ಬಜರಂಗದಳದ ಸಂಚಾಲಕ ನಾಗೇಶ್ , ಜಿಲ್ಲಾ ಕಾರ್ಯದರ್ಶಿ ವಿಕಾಸ್, ಅಭಿ, ಶರತ್, ಹರೀಶ್, ಶಶಿ, ಮುಖಂಡರಾದ ಎಮ್ ಎ ನಾಗರಾಜು, ತೊ ಚ ಅನಂತಸುಬ್ಬರಾಯ್, ಅಮಿತ್ ಶೆಟ್ಟಿ‌, ಮೋಹನ್, ಸಂತೋಷ್, ಭರತ್, ಶ್ರೀನಿಧಿ,ಸೇರಿದಂತೆ ಇತರರು ಇದ್ದರು.

ಈ ವೇಳೆ ವರ್ತಕರು ವಕೀಲರ ಸಂಘ ಸೇರಿದಂತೆ ಇನ್ನು ಮುಂತಾದ ಸಂಘಟನೆಗಳು ಬಂದ್‌ಗೆ ಸಹಕಾರ ನೀಡಿದರು‌.ನಂತರ ಪುರಸಭೆಯ ಆವರಣದ ವರಸಿದ್ಧಿ ವಿನಾಯಕ ದೇಗುಲ ಪವಿತ್ರಗೊಳಿಸಿ ಪೂಜೆ ಸಲ್ಲಿಸಲಾಯಿತು.