ಸಾರಾಂಶ
ಬೆಂಗಳೂರು : ಏಳನೇ ವೇತನ ಆಯೋಗದ ಶಿಫಾರಸು ಜಾರಿ ಮಾಡುವಂತೆ ಆಗ್ರಹಿಸಿ ಸರ್ಕಾರಿ ನೌಕರರು ಶುಕ್ರವಾರ ವಿಧಾನಸೌಧದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದ್ದು, ಜು.28ರ ಒಳಗಾಗಿ ಶಿಫಾರಸು ಜಾರಿ ಮಾಡದಿದ್ದರೆ ಜು.29ರಿಂದ ಕರ್ತವ್ಯ ಬಹಿಷ್ಕರಿಸಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ವಿಧಾನಸೌಧ ಆವರಣದ ಗಾಂಧಿ ಪ್ರತಿಮೆ ಬಳಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ನೌಕರರು, ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್‌ರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಷಡಕ್ಷರಿ ಅವರು, 7ನೇ ವೇತನ ಆಯೋಗ ಜಾರಿಯಾಗದಿದ್ದರೆ ಜು.29ರಿಂದ ಮುಷ್ಕರ ಮಾಡಲಾಗುವುದು. ನಮ್ಮ ಬೇಡಿಕೆ ಈಡೇರಿಸಿದರೆ ಮಾತ್ರ ಕೆಲಸಕ್ಕೆ ಹಾಜರಾಗುತ್ತೇವೆ. ಬೇಡಿಕೆ ಈಡೇರಿಸದಿದ್ದರೆ ಕೆಲಸ ಮಾಡದೇ ಮನೆಯಲ್ಲಿರುತ್ತೇವೆ ಎಂದು ಹೇಳಿದರು.
ಜೂ.20ರಂದು ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 7ನೇ ವೇತನ ಆಯೋಗ ಜಾರಿ ಅಧಿಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಲಾಗಿತ್ತು. ಈ ಮೂಲಕ ಏಳನೇ ವೇತನ ಆಯೋಗ ಜಾರಿ ಮಾಡಬೇಕೆಂಬ ಸರ್ಕಾರಿ ನೌಕರರ ಬಹು ದಿನಗಳ ಬೇಡಿಕೆಗೆ ಕಾಲ ಸನ್ನಿಹಿತ ಆಗಿದೆ ಎಂದು ಭಾವಿಸಿದ್ದೆವು. ಆದರೆ ಈವರೆಗೆ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಸರ್ಕಾರ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬೇಡಿಕೆಗಳೇನು?:
ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸಿದ ಅವರು, 2022ರಿಂದ ಅನ್ವಯವಾಗುವಂತೆ ಏಳನೇ ವೇತನ ಆಯೋಗ ಜಾರಿ ಮಾಡಬೇಕು. 2024ರ ಏ.1 ರಿಂದ ಅನ್ವಯವಾಗುವಂತೆ ಆರ್ಥಿಕ ಸೌಲಭ್ಯ ನೀಡಬೇಕು. ಜತೆಗೆ ಎನ್‌ಪಿಎಸ್ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಜಾರಿ ಮಾಡಬೇಕು. ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಮನವಿ ಮಾಡಿದರು.