ಜ.12ರಿಂದ ಏಪ್ರಿಲ್ 30ರವರೆಗೆ ಹದಿನೆಂಟು ದಿನಗಳ ಕಾಲ ನೀರು ಹರಿಸಿ ಹನ್ನೆರಡು ದಿನಗಳವರೆಗೆ ನೀರು ನಿಲ್ಲಿಸುವ ತೀರ್ಮಾನ ಅವೈಜ್ಞಾನಿಕ. ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿನ ಲಭ್ಯತೆ ಹೆಚ್ಚಿನ ಪ್ರಮಾಣದಲ್ಲಿದ್ದರೂ ಸಹ ಕಟ್ಟು ಪದ್ಧತಿಯಡಿ ನೀರು ಹರಿಸುವ ನಿರ್ಧಾರ ಮಾಡಿರುವುದು ಖಂಡನೀಯ.
ಕನ್ನಡಪ್ರಭ ವಾರ್ತೆ ಮಂಡ್ಯ
ಕಾವೇರಿ ನೀರಾವರಿ ಸಲಹಾ ಸಮಿತಿ ಕಾಲುವೆಗಳಿಗೆ ಕಟ್ಟು ಪದ್ಧತಿಯಡಿ ನೀರು ಹರಿಸುವ ಅವೈಜ್ಞಾನಿಕ ತೀರ್ಮಾನ ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಸೋಮವಾರ ನಗರದ ಕಾವೇರಿ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಮಾತನಾಡಿ, ಜ.12ರಿಂದ ಏಪ್ರಿಲ್ 30ರವರೆಗೆ ಹದಿನೆಂಟು ದಿನಗಳ ಕಾಲ ನೀರು ಹರಿಸಿ ಹನ್ನೆರಡು ದಿನಗಳವರೆಗೆ ನೀರು ನಿಲ್ಲಿಸುವ ತೀರ್ಮಾನ ಅವೈಜ್ಞಾನಿಕ. ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿನ ಲಭ್ಯತೆ ಹೆಚ್ಚಿನ ಪ್ರಮಾಣದಲ್ಲಿದ್ದರೂ ಸಹ ಕಟ್ಟು ಪದ್ಧತಿಯಡಿ ನೀರು ಹರಿಸುವ ನಿರ್ಧಾರ ಮಾಡಿರುವುದು ಖಂಡನೀಯ ಎಂದರು.
ಕೊನೇ ಭಾಗಕ್ಕೆ ನೀರು ಹರಿಸುವ ಕಾರ್ಯಕ್ಕೆ ಸ್ಥಳೀಯ ಇಲಾಖೆ ಅಧಿಕಾರಿಗಳು ಮುಂದಾಗಬೇಕು. ಮುಂದಿನ ತಿಂಗಳಿಂದ ಬೇಸಿಗೆ ಪ್ರಾರಂಭವಾಗುವುದರಿಂದ ಬೆಳೆಗಳು ಒಣಗಿ ನಷ್ಟವಾಗುತ್ತವೆ. ಆದ್ದರಿಂದ ನಾಲೆಗಳಿಗೆ ಹರಿಸುವ ನೀರಿನ ದಿನಾಂಕವನ್ನು ವಿಸ್ತರಿಸಬೇಕೆಂದು ಆಗ್ರಹಿಸಿದರು.ಮೈಸೂರು ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ ಮಾತನಾಡಿ, ತುರುಗನೂರು ಶಾಖಾ ನಾಲೆಗಳಿಗೆ ನೀರು ನಿಲ್ಲಿಸುತ್ತೇವೆ ಎಂಬ ಸಚಿವರ ಹೇಳಿಕೆ ಖಂಡಿಸಿದರು. ನಾಲೆಗಳ ಆಧುನೀಕರಣ ನೆಪದಲ್ಲಿ ನೀರು ನಿಲ್ಲಿಸಿದ್ದರೆ ಬೆಳೆಗಳ ರಕ್ಷಣೆ ಹಾಗೂ ಅಂತರ್ಜಲ ಕುಸಿದು ಹೋಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ನೀರು ಹರಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ, ಜಿಲ್ಲಾ ಪತ್ರಿಕಾ ಕಾರ್ಯದರ್ಶಿ ಸೊ.ಸಿ.ಪ್ರಕಾಶ್ ಮದ್ದೂರು ತಾಲೂಕು ಅಧ್ಯಕ್ಷ ಎಚ್.ಜಿ.ಪ್ರಭುಲಿಂಗ, ಮುಖಂಡರಾದ ಶಿವಳ್ಳಿ ಚಂದ್ರಶೇಖರ್, ಕೋಣಸಾಲೆ ಲಿಂಗರಾಜು, ಪಣ್ಣೇದೊಡ್ಡಿ ವೆಂಕಟೇಶ್, ಜಗದೀಶ್, ಮರಲಿಂಗ, ಕೀಳಘಟ್ಟ ನಂಜುಂಡಯ್ಯ, ನಾಗರಾಜು, ರಾಮಸ್ವಾಮಿ, ಗುಡಿದೊಡ್ಡಿ ಶಿವಲಿಂಗಯ್ಯ ಇತರರು ಹಾಜರಿದ್ದರು.