ಚಿಕ್ಕಮಗಳೂರಿನಲ್ಲಿ ಟಿ- 20 ಕ್ರಿಕೆಟ್‌ ಪಂದ್ಯಾವಳಿ

| Published : Nov 12 2023, 01:03 AM IST

ಸಾರಾಂಶ

ಚಿಕ್ಕಮಗಳೂರಿನಲ್ಲಿ ಟಿ- 20 ಕ್ರಿಕೆಟ್‌ ಪಂದ್ಯಾವಳಿ

ಚಿಕ್ಕಮಗಳೂರು: ರಾಜ್ಯ ಪ್ರಶಸ್ತಿ ಪುರಸ್ಕೃತರಾದ ದಿ.ಗೌರಮ್ಮ ಬಸವೇಗೌಡರ ಸ್ಮರಣಾರ್ಥ ಇಲ್ಲಿನ ರಾಣಾ ಸ್ಪೋರ್ಟ್ಸ್ ಕ್ಲಬ್ ನಿಂದ ನ.20 ರಿಂದ 26 ರವರೆಗೆ ನಗರದ ಸುಭಾಷ್ ಚಂದ್ರ ಬೋಸ್ ಆಟದ ಮೈದಾನದಲ್ಲಿ 6ನೇ ಆವೃತ್ತಿಯ ಟಿ-20 ವೈಟ್ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್‌ ಆಯೋಜಿಸಲಾಗಿದೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಕ್ಲಬ್ ಖಜಾಂಚಿ ನಟರಾಜ್ ಈ ವಿಷಯ ತಿಳಿಸಿ, ಸುಮಾರು 150 ಕ್ಕಿಂತ ಹೆಚ್ಚು ಶಿವಮೊಗ್ಗ ವಲಯದ (ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ) ಆಟಗಾರರು ಹೆಸರು ನೋಂದಣಿ ಮಾಡಿಕೊಂಡಿದ್ದು, ಅದರಲ್ಲಿ 5 ತಂಡದ ಮಾಲೀಕರು ಆಟಗಾರರನ್ನು ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಿಕೊಂಡು, ಈಗಾಗಲೇ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ ಎಂದರು.

ಐಪಿಎಲ್‌ ಮಾದರಿಯ ಈ ಟೂರ್ನಮೆಂಟ್‌ನಲ್ಲಿ ವಿಜೇತರಾದ ತಂಡಕ್ಕೆ ಪ್ರಥಮ ಬಹುಮಾನ ಒಂದು ಲಕ್ಷ ಹಾಗೂ ಆಕರ್ಷಕ ಪಾರಿತೋಷಕ, ದ್ವಿತೀಯ ಬಹುಮಾನ 50 ಸಾವಿರ ಹಾಗೂ ಆಕರ್ಷಕ ಪಾರಿತೋಷಕ ನೀಡಲಾಗುವುದು ಎಂದು ಹೇಳಿದರು. ತಂಡದ ಮಾಲೀಕರು ಅಕ್ಷಯ ಬ್ಲಾಸ್ಟರ್ ಶರದ್, ರೈಸಿಂಗ್ ಸ್ಟಾರ್ ತಾಮ್ಸನ್, ವಸಿಷ್ಠ ಇ-ಸ್ಪೋರ್ಟ್ಸ್ ಸಂದೀಪ್, ಆಲ್-ರೆಹಮಾನ್ ವಾರಿಯರ್ಸ್‌ ಅಫೀಜ್, ರಕೀನ್ ಇ- ಸ್ಪೋರ್ಟ್ಸ್ ರಕೀನ್ ಎಂದರು. ಪಂದ್ಯಾವಳಿ ಉದ್ಘಾಟನೆ ನ.20 ರಂದು ಬೆಳಿಗ್ಗೆ 8.30 ಕ್ಕೆ ನಗರದ ಸುಭಾಷ್ ಚಂದ್ರ ಬೋಸ್ ಆಟದ ಮೈದಾನದಲ್ಲಿ ನೆರವೇರಲಿದ್ದು, ಸಮಾರೋಪ ಸಮಾರಂಭ ನ.26ರ ಸಂಜೆ 5.30ಕ್ಕೆ ನಡೆಯಲಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಹರೀಶ್‌, ಸುನೀಲ್‌, ಅಭಿಷೇಕ್, ಸಂತೋಷ್‌ ಇದ್ದರು.