ಟಿ.ಅಗ್ರಹಾರ ಕೆರೆ ಗ್ರಾಮಸ್ಥರಿಗೆ ಹಸ್ತಾಂತರ

| Published : Jul 22 2024, 01:25 AM IST

ಸಾರಾಂಶ

ಸೂಲಿಬೆಲೆ: ಕೆರೆಗಳ ಅಭಿವೃದ್ಧಿಯಿಂದ ಅಂತರ್ಜಲ ಮಟ್ಟ ವೃದ್ಧಿಯಾಗುತ್ತದೆ. ಇದರಿಂದ ಕೃಷಿ ಮತ್ತು ಪಶುಪಾಲನೆಗೆ ಸಹಕಾರಿಯಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಹರೀಶ್ ಆಭಿಪ್ರಾಯಪಟ್ಟರು.

ಸೂಲಿಬೆಲೆ: ಕೆರೆಗಳ ಅಭಿವೃದ್ಧಿಯಿಂದ ಅಂತರ್ಜಲ ಮಟ್ಟ ವೃದ್ಧಿಯಾಗುತ್ತದೆ. ಇದರಿಂದ ಕೃಷಿ ಮತ್ತು ಪಶುಪಾಲನೆಗೆ ಸಹಕಾರಿಯಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಹರೀಶ್ ಆಭಿಪ್ರಾಯಪಟ್ಟರು.

ಹೋಬಳಿಯ ದೊಡ್ಡಹರಳಗೆರೆ ಗ್ರಾಪಂ ವ್ಯಾಪ್ತಿಯ ಟಿ.ಅಗ್ರಹಾರ ಗ್ರಾಮದಲ್ಲಿ ಅಭಿವೃದ್ಧಿಪಡಿಸಿರುವ ಕೆರೆಯನ್ನು ಗ್ರಾಮಸ್ಥರಿಗೆ ಹಸ್ತಾಂತರಿಸಿ ಮಾತನಾಡಿದ ಅವರು, ಟಿ.ಅಗ್ರಹಾರ ಗ್ರಾಮದ ೨೮ ಎಕರೆ ವಿಸ್ತೀರ್ಣದ ಕೆರೆ ಅಭಿವೃದ್ಧಿ ಪಡಿಸಲಾಗಿದ್ದು, ಸುಮಾರು ೧೫.೯೦ ಲಕ್ಷ ಅನುದಾನವನ್ನು ಶ್ರೀ ಕ್ಷೇತ್ರ ನೀಡಿದೆ. ೧೧ ಲಕ್ಷ ಹಣವನ್ನು ಸ್ಥಳೀಯರು ದೇಣಿಗೆ ನೀಡಿದ್ದಾರೆ. ಒಟ್ಟಾರೆ ೨೬.೯೦ ಲಕ್ಷ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಮಾಡಲಾಗಿದೆ. ಸುಮಾರು ೮ ಹಳ್ಳಿಗಳಿಗೆ ಅಂತರ್ಜಲ ವೃದ್ಧಿಯಾಗಿ ಅನುಕೂಲವಾಗಲಿದೆ ಎಂದು ತಿಳಿಸಿದರು.

ಕೆರೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಆನಂದ್‌ಕುಮಾರ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ೨೬ ಲಕ್ಷಗಳ ವೆಚ್ಚದಲ್ಲಿ ಕೆರೆ ಅಭಿವೃದ್ಧಿಪಡಿಸಲಾಗಿದ್ದು, ಸ್ಥಳೀಯವಾಗಿ ಮಳೆಯ ನೀರು ಸಂಗ್ರಹವಾಗಿ ಕೃಷಿ ಮತ್ತು ಪಶುಪಾಲನೆಗೆ ಹೆಚ್ಚು ಅನುಕೂಲವಾಗಲಿದೆ. ಶ್ರೀ ಕ್ಷೇತ್ರದ ಸೇವಾಕೈಂಕರ್ಯ ಶ್ಲಾಘನೀಯ ಎಂದರು.

ಕೃಷಿ ಮೇಲ್ವಿಚಾರಕ ಚೇತನ್ ಮಾತನಾಡಿ, ನಮ್ಮೂರು, ನಮ್ಮ ಕೆರೆ ಯೋಜನೆಯು ಇಡೀ ರಾಜ್ಯದಲ್ಲಿ ಜಾರಿಯಲಿದ್ದು, ಟಿ.ಅಗ್ರಹಾರ ಕೆರೆ ೫೮೪ನೇ ಕೆರೆ ಅಭಿವೃದ್ಧಿಯಾಗಿದೆ. ನೀರಿನ ಮೂಲಗಳ ರಕ್ಷಣೆಗೆ ಅಂತರ್ಜಲ ವೃದ್ಧಿಯ ದೂರದೃಷ್ಟಿಯಿಂದ ಕೆರೆ ಅಭಿವೃದ್ಧಿ ಅವಶ್ಯವಾಗಿದೆ ಎಂದರು.

ಗ್ರಾಪಂ ಅಧ್ಯಕ್ಷೆ ನರಸಮ್ಮನರಸಿಂಹಮೂರ್ತಿ, ಕೆರೆ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳಾದ ಚನ್ನಕೇಶವ, ರಾಮೇಗೌಡ, ತಿಪ್ಪಯ್ಯ, ವಾಟರ್ ಮೆನ್ ಮಾರಪ್ಪ, ರವಿಕುಮಾರ್, ಕಿರಣ್, ಒಕ್ಕೂಟದ ಅಧ್ಯಕ್ಷೆ ನಾಗವೇಣಿ, ಸೇವಾಪ್ರತಿ ನಿಧಿ ಭಾಗ್ಯಲಕ್ಷ್ಮೀ ಮತ್ತಿತರರಿದ್ದರು.