ಶೇಷನಾರಾಯಣ- ಬಾಲ್ಯದ ಕೆಲವು ನೆನಹುಗಳು

| Published : Mar 14 2024, 02:01 AM IST

ಸಾರಾಂಶ

ಮೂಗು ಚುಚ್ಚಿದರು- ದನಗಳಿಗೆ ಮೂಗುದಾರ ಹಾಕುವ ಘಟನೆ. ಸುಂದರಿ- ಹುಣಸೆ ಮರವೇರಿದ್ದ ಕೋತಿಗಳನನ್ನು ಓಡಿಸುವಾಗ ತಾಯಿಯಿಂದ ಬೇರ್ಪಟ್ಟು ಉಳಿದುಕೊಂಡ ಮರಿಕೋತಿಯನ್ನು ಮನೆಯವರು ಹಾಗೂ ಊರಿನವರು ಹಚ್ಚಿಕೊಂಡಿದ್ದ ಪ್ರಸಂಗ ಕುರಿತದ್ದು. ಬುಕ್ಕಚ್ಚಿ- ಮಗುವಿಗೆ ಸ್ನಾನ ಮಾಡಿಸುವ ಕಥೆ. ಕುಂಬಳಕಾಯಿ ಹಲ್ವಾ- ಮಕ್ಕಳೆಲ್ಲಾ ಸೇರಿ ಒಂದೊಂದು ಪದಾರ್ಥ ತಂದು, ಹಳ್ಳದ ಬಳಿ ಸಿದ್ಧಪಡಿಸಿದರೂ ಅದು ಬೇರೆಯವರ ಪಾಲಾದ ಕಥೆ!. ಅಮ್ಮ ಅತ್ತಳು- ಎದ್ದ ಕೂಡಲೇ ಕೋಡುಬಳೆ ಕೊಡದ ಅಮ್ಮನನ್ನು ಕಂದ ಅಳಿಸಿದ ಪ್ರಸಂಗ. ಜೇನುತುಪ್ಪ- ಮಕ್ಕಳೆಲ್ಲಾ ಸೇರಿ ಜೇನು ಇಳಿಸಿದ ಸಾಹಸ ಕಥನ. ದೆವ್ವ ಬಂತು ದೆವ್ವ- ಬಂದಿದ್ದು ದೆವ್ವವಲ್ಲ ಆನೆ ಎಂದು ಲೇಖನದ ಕೊನೆಯಲ್ಲಿ ಗೊತ್ತಾಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ವಿಶ್ವವಿದ್ಯಾನಿಲಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿನಿ ಟಿ.ಸಿ. ಧನಲಕ್ಷ್ಮಿ ಅವರು ಶೇಷನಾರಾಯಣ ಅವರ ಬಾಲ್ಯದ ಕೆಲವು ನೆನಹುಗಳನ್ನು ಗ್ರಂಥರೂಪದಲ್ಲಿ ಪ್ರಕಟಿಸಿದ್ದಾರೆ.

1960-66 ರ ಅವಧಿಯಲ್ಲಿ ಶೇಷನಾರಾಯಣರು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ನೇತೃತ್ವದ ಜೀವನ ಪತ್ರಿಕೆಗೆ ಬರೆದ ಹದಿನೈದು ಸ್ವಾರಸ್ಯಕರ ಪ್ರಸಂಗಗಳ ಸಂಗ್ರಹವಿದು.

ಮೂಗು ಚುಚ್ಚಿದರು, ಸುಂದರಿ, ಬುಕ್ಕಜ್ಜಿ, ಕುಂಬಳಕಾಯಿ ಹಲ್ವಾ, ಅಮ್ಮ ಅತ್ತಳು, ಜೇನುತುಪ್ಪ, ದೆವ್ವ ಬಂತು ದೆವ್ವ, ಕಳ್ಳ ಸಿಕ್ಕಿದ, ಪಂಜಿನ ದೀಪಾವಳಿ, ನಮ್ಮ ಮನೆಯ ಗೌರಿ ಹಬ್ಬ, ರಂಗನ ಮದುವೆ, ದೇವರು ಬಂದಿತು, ಸಂತೆಯ ದಾರಿಯಲ್ಲಿ ರಂಗ, ರಂಗನ ಕನಕತಂಬಟ್ಟೆ, ಬೆಳದಿಂಗಳಿನಲ್ಲಿ ಬಿಳಿಯಾನೆಯ ಮರಿ- ಇವು ಈ ಸಂಕಲನದಲ್ಲಿರುವ ಲೇಖನಗಳು.

ಮೂಗು ಚುಚ್ಚಿದರು- ದನಗಳಿಗೆ ಮೂಗುದಾರ ಹಾಕುವ ಘಟನೆ. ಸುಂದರಿ- ಹುಣಸೆ ಮರವೇರಿದ್ದ ಕೋತಿಗಳನನ್ನು ಓಡಿಸುವಾಗ ತಾಯಿಯಿಂದ ಬೇರ್ಪಟ್ಟು ಉಳಿದುಕೊಂಡ ಮರಿಕೋತಿಯನ್ನು ಮನೆಯವರು ಹಾಗೂ ಊರಿನವರು ಹಚ್ಚಿಕೊಂಡಿದ್ದ ಪ್ರಸಂಗ ಕುರಿತದ್ದು. ಬುಕ್ಕಚ್ಚಿ- ಮಗುವಿಗೆ ಸ್ನಾನ ಮಾಡಿಸುವ ಕಥೆ. ಕುಂಬಳಕಾಯಿ ಹಲ್ವಾ- ಮಕ್ಕಳೆಲ್ಲಾ ಸೇರಿ ಒಂದೊಂದು ಪದಾರ್ಥ ತಂದು, ಹಳ್ಳದ ಬಳಿ ಸಿದ್ಧಪಡಿಸಿದರೂ ಅದು ಬೇರೆಯವರ ಪಾಲಾದ ಕಥೆ!. ಅಮ್ಮ ಅತ್ತಳು- ಎದ್ದ ಕೂಡಲೇ ಕೋಡುಬಳೆ ಕೊಡದ ಅಮ್ಮನನ್ನು ಕಂದ ಅಳಿಸಿದ ಪ್ರಸಂಗ. ಜೇನುತುಪ್ಪ- ಮಕ್ಕಳೆಲ್ಲಾ ಸೇರಿ ಜೇನು ಇಳಿಸಿದ ಸಾಹಸ ಕಥನ. ದೆವ್ವ ಬಂತು ದೆವ್ವ- ಬಂದಿದ್ದು ದೆವ್ವವಲ್ಲ ಆನೆ ಎಂದು ಲೇಖನದ ಕೊನೆಯಲ್ಲಿ ಗೊತ್ತಾಗುತ್ತದೆ.

ಕಳ್ಳ ಸಿಕ್ಕಿದ ಕತೆ ಕೂಡ ಸ್ವಾರಸ್ಯವಾಗಿದೆ. ಜಮೀನಿನಲ್ಲಿ ಮೇವು ಕದಿಯುತ್ತಿದ್ದುದು ಕಳ್ಳನಲ್ಲ, ಮೇಯುತ್ತಿದ್ದುದು ತಮ್ಮದೇ ಹುಲುಗಿ ಎಂಬ ಹಸು ಎಂದು ತಿಳಿಯುತ್ತದೆ.

ಪಂಜಿನ ದೀಪಾವಳಿ, ನಮ್ಮ ಮನೆಯ ಗೌರಿ ಹಬ್ಬ ಪ್ರಸಂಗಗಳು ಹಿಂದೆ ಹಬ್ಬಗಳ ಆಚರಣೆ ಹೇಗಿತ್ತು ಎಂಬುದನ್ನು ತಿಳಿಸಿಕೊಡುತ್ತವೆ. ರಂಗ- ಕೆಂಪಿ ಮದುವೆಯ ಪ್ರಸಂಗವೂ ಸ್ವಾರಸ್ಯಕರವಾಗಿದೆ. ದೇವರು ಬಂದಿತು ಪ್ರಕರಣವೂ ಗ್ರಾಮೀಣ ಪ್ರದೇಶಗಳಲ್ಲಿ ದೇವರ ಹೆಸರಿನಲ್ಲಿ ನಡೆಯುವ ಕಂದಾಚಾರವನ್ನು ತಿಳಿಸಿಕೊಡುತ್ತದೆ. ಸಂತೆ ಹಾದಿಯಲ್ಲಿ ರಂಗ- ಪ್ರಸಂಗ ಮದ್ಯಪಾನದಿಂದ ಆಗುವ ಕೆಡಕನ್ನು ಕುರಿತದ್ದು. ರಂಗನ ಕನಕತಂಬಟ್ಟೆ- ಆಳು ಮಗ ಮತ್ತು ಯಜಮಾನನ ಮಗನ ನಡುವಿನ ಮಾನವೀಯತೆಯನ್ನು ಪ್ರತಿಂಬಿಸುತ್ತದೆ. ಬೆಳುದಿಂಗಳಿನಲ್ಲಿ ಬಿಳಿಯಾನೆಯ ಮರಿ ಕೂಡ ಚೆನ್ನಾಗಿದೆ.

ಈ ಸಂಕಲನದಲ್ಲಿರುವ ಎಲ್ಲಾ ಹದಿನೈದು ಪ್ರಸಂಗಗಳು ಕೂಡ ಸ್ವಾರಸ್ಯಕರವಾಗಿವೆ. ಗ್ರಾಮೀಣ ಜನಜೀವನ ಹೇಗಿರುತ್ತದೆ ಎಂಬದನ್ನು ತಿಳಿಸಿಕೊಡುತ್ತವೆ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಹಳ್ಳಿಯ ಚಿತ್ರಗಳು, ನಮ್ಮ ಊರಿನ ರಸಿಕರು ಮಾದರಿಯಲ್ಲಿವೆ. ಧನಲಕ್ಷ್ಮಿ ಅವರು ಶೇಷನಾರಾಯಣರ ಈ ಲೇಖನಗಳನ್ನು ಸಂಗ್ರಹಿಸಿ, ಕುಟುಂಬದವರ ಸಹಕಾರದೊಂದಿಗೆ ಕೃತಿ ರೂಪದಲ್ಲಿ ಹೊರತಂದು ಉತ್ತಮ ಕೆಲಸ ಮಾಡಿದ್ದಾರೆ.ಎಲ್ಲವೂ ಅಷ್ಟೊಂದು ಅದ್ಭುತವಾಗಿವೆ.ಸ್ವಾರಸ್ಯಕರವಾಗಿವೆ.

ಮೈಸೂರಿನ ಚಿಂತನ ಚಿತ್ತಾರ ಈ ಕೃತಿಯನ್ನು ಪ್ರಕಟಿಸಿದ್ದು, ಈಶ್ವರಚಂದ್ರ ಅವರ ಮುನ್ನುಡಿ, ಬಾ.ವೇ.ಶ್ರೀಧರ ಅವರ ಬೆನ್ನುಡಿ ಇದೆ. ಶೇಷನಾರಾಯಣರ ಕುಟುಂಬದ ಹಿನ್ನೋಟವನ್ನು ಪುತ್ರಿ ಸುಭದ್ರಾ ಶೇಷನಾರಾಯಣ ಕಟ್ಟಿಕೊಟ್ಟಿದ್ದಾರೆ. ಧನಲಕ್ಷ್ಮಿ ಅವರು ಶೇಷನಾರಾಯಣ ಅವರ ಸಾಹಿತ್ಯವನ್ನು ಕುರಿತು ಸಂಶೋಧನೆ ಮಾಡುತ್ತಿದ್ದು, ಮಾರ್ಗದರ್ಶಕರಾದ ಪ್ರೊ.ಎಂ. ನಂಜಯ್ಯ ಹೊಂಗನೂರು ಅವರ ಈ ಕೃತಿಯನ್ನು ಅನುಭವಗಳ ಕಣಜ ಎಂದು ಶ್ಲಾಘಿಸಿದ್ದಾರೆ. ಶೇಷನಾರಾಯಣರ ಅವರ ಜೀವನ ಮತ್ತು ಸಾಹಿತ್ಯದ ಕಿರುಪರಿಚಯವೂ ಇದೆ. ಆಸಕ್ತರು ಪ್ರಕಾಶಕ ನಿಂಗರಾಜ ಚಿತ್ತಣ್ಣನವರ್, ಮೊ.99456 68082 ಅಥವಾ ಟಿ.ಸಿ. ಧನಲಕ್ಷ್ಮಿ, ಮೊ. 97410 58560 ಸಂಪರ್ಕಿಸಬಹುದು.