ಗೋಕರ್ಣ ಪಾವಿತ್ರ್ಯಕ್ಕೆ ಧಕ್ಕೆ ಬಾರದಂತೆ ಅಭಿವೃದ್ಧಿಯಾಗಲಿ: ರಾಮ ಕಾಮೇಶ್ವರ

| Published : Mar 14 2024, 02:01 AM IST

ಗೋಕರ್ಣ ಪಾವಿತ್ರ್ಯಕ್ಕೆ ಧಕ್ಕೆ ಬಾರದಂತೆ ಅಭಿವೃದ್ಧಿಯಾಗಲಿ: ರಾಮ ಕಾಮೇಶ್ವರ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾಬಲೇಶ್ವರ ಮಂದಿರದಲ್ಲಿ ಶಿವರಾತ್ರಿ ಮಹೋತ್ಸವದ ಪ್ರಯುಕ್ತ ಮುಖ್ಯ ಕಡಲ ತೀರದಲ್ಲಿ ಸಾಗರದಾರತಿ ಕಾರ್ಯಕ್ರಮ ನಡೆಯಿತು.

ಗೋಕರ್ಣ: ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳುವ ಜತೆಗೆ ಪುಣ್ಯಕ್ಷೇತ್ರದ ಪವಿತ್ರತೆಗೆ ಧಕ್ಕೆ ಬರದಂತೆ ಗೋಕರ್ಣ ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಊರಿನ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಹಾಲಿ ಮುಂಬೈ ನಿವಾಸಿಯಾಗಿರುವ ಇಲ್ಲಿನ ರಾಮ ಕಾಮೇಶ್ವರ ತಿಳಿಸಿದರು.

ಮಹಾಬಲೇಶ್ವರ ಮಂದಿರದ ಶಿವರಾತ್ರಿ ಮಹೋತ್ಸವದದ ಪ್ರಯುಕ್ತ ಮುಖ್ಯ ಕಡಲ ತೀರದಲ್ಲಿ ನಡೆದ ಸಾಗರದಾರತಿ ಕಾರ್ಯಕ್ರಮದ ಕೊನೆಯ ದಿನವಾದ ಸೋಮವಾರ ಸಂಜೆ ನಡೆದ ಸಮಾರೋಪ ಸಮಾರಂಭ ಹಾಗೂ ಅಂಗನವಾಡಿ ಮಕ್ಕಳಿಗೆ ಕುಡಿಯುವ ನೀರಿಗಾಗಿ ಸ್ವತಃ ಬಾವಿ ತೆಗೆದ ನೀರು ನೀಡಿದ ಶಿರಸಿಯ ಗೌರಿ ನಾಯ್ಕ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಮಾತನಾಡಿದರು.

ಐದು ದಶಕಗಳ ಹಿಂದೆ ಜೀವನೋಪಾಯಕ್ಕಾಗಿ ಬೇರೆ ಊರಿಗೆ ಹೋಗುವ ಅನಿವಾರ್ಯತೆ ಎದುರಾಗಿತ್ತು. ಹೀಗೇ ಹೋದ ಇಲ್ಲಿನ ಹಲವರು ಬೇರೆ ಬೇರೆ ಕಡೆ ಉನ್ನತ ಉದ್ಯೋಗದಲ್ಲಿ ಇದ್ದೇವೆ. ಅಂದು ಕೇವಲ ಧಾರ್ಮಿಕತೆಯ ಉದ್ದೇಶದಿಂದ ಮಾತ್ರ ಯಾತ್ರಿಕರು ಆಗಮಿಸುತ್ತಿದ್ದರು. ಇದರಿಂದ ಪೂಜನೀಯ ಭಾವದೊಂದಿಗೆ ಪರಿಸರ ಸ್ವಚ್ಛವಾಗಿರುತ್ತಿತ್ತು. ಆದರೆ ಇಂದು ಪ್ರವಾಸೋದ್ಯಮ ಎಂಬ ಹಣೆಪಟ್ಟಿಯಿಂದ ಊರೇ ಸಂಪೂರ್ಣ ತ್ಯಾಜ್ಯಮಯವಾಗಿರುವುದು ವಿಷಾದಕರ ಸಂಗತಿ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಗೌರಿ ನಾಯ್ಕ ಅವರು, ನನಗೆ 40ಅಡಿ ಆಳ ಬಾವಿ ತೆಗೆಯುವ ಶಕ್ತಿ ನೀಡಿದವನು ಶಿವ. ಅದೆಷ್ಟೆ ಅಡ್ಡಿ ಬಂದರೂ ದೂರ ಮಾಡಿದ ದೇವರ ಸನ್ನಿಧಿಯಲ್ಲಿ ನನಗೆ ಗೌರವಿಸುತ್ತಿರುವುದು ಸಂತಸ ತಂದಿದೆ ಎಂದರು.

ಅಂಕೋಲಾ ತಾಲೂಕು ವೈದ್ಯಾಧಿಕಾರಿ ಡಾ. ಜಗದೀಶ್ ನಾಯ್ಕ ಮಾತನಾಡಿ, ಎಲ್ಲ ಜೀವಸಂಕುಲಗಳಲ್ಲಿ ಪರಿಸರಕ್ಕೆ ತೊಂದರೆ ನೀಡುತ್ತಿರುವವರು ಮನುಷ್ಯರು. ಪ್ರಕೃತಿ ನಮಗೆ ಸಕಲವನ್ನು ನೀಡಿದೆ. ಆದರೆ ಅದಕ್ಕೆ ನಾವು ಮಾರಕವಾಗಬಾರದು. ಈ ನಿಟ್ಟಿನಲ್ಲಿ ಎಲ್ಲರೂ ಜತೆಯಾಗಿ ಸ್ವಚ್ಛತೆಯ ಕೆಲಸ ಮಾಡಬೇಕೆಂದರು.

ಲಯನ್ಸ್ ಕ್ಲಬ್ ಅಧ್ಯಕ್ಷರಾದ ಎನ್.ಎಸ್. ಲಮಾಣಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಹೇಶ್ ಶೆಟ್ಟಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಮನಾ ಗೌಡ ಹಾಗೂ ವೇ. ಮಹಾಬಲ ಉಪಾಧ್ಯ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪಹರೆ ವೇದಿಕೆ ನಾಗೇಶ ಗೌಡ ಉಪಸ್ಥಿತರಿದ್ದರು. ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯರಾದ ವೇ. ಪರಮೇಶ್ವರ ಮಾರ್ಕಾಂಡೆ ಸ್ವಾಗತಿಸಿದರು. ವೇ. ದತ್ತಾತ್ರೇಯ ಹಿರೇಗಂಗೆ ವಂದಿಸಿದರು.

ನಂತರ ಸಾಗರ ಆರತಿ ಕಾರ್ಯಕ್ರಮ ನಡೆಯಿತು. ಮಹಾಬಲೇಶ್ವರ ದೇವರ ಉತ್ಸವ ಕಡಲತೀರದ ಮಾರ್ಗವಾಗಿ ಆಶ್ರಮಕ್ಕೆ ತೆರಳುವ ವೇಳೆ ಸಮುದ್ರ ಆರತಿ ಸ್ವೀಕರಿಸಿ ತೆರಳಿದ್ದು ವಿಶೇಷವಾಗಿತ್ತು.