ಕೃಷಿ ಕೂಲಿಕಾರರ ಸಂಘದ ನೂತನ ಅಧ್ಯಕ್ಷರಾಗಿ ಟಿ.ಎಚ್.ಆನಂದ್ ಆಯ್ಕೆ

| Published : Nov 10 2025, 01:00 AM IST

ಸಾರಾಂಶ

ಪ್ರತಿ ಟನ್ ಕಬ್ಬಿಗೆ 3500 ರು. ನಿಗದಿ ಮಾಡಬೇಕೆಂದು ಬೆಳಗಾವಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಪ್ರಾಂತ ಕೃಷಿ ಕೂಲಿಕಾರರ ಸಂಘ ಸಂಪೂರ್ಣ ನೀಡಲಿದೆ. ಮದ್ದೂರು ತಾಲೂಕಿನ ಕೆ.ಎಂ ದೊಡ್ಡಿ ಸಕ್ಕರೆ ಕಾರ್ಖಾನೆಗೆ ಕಬ್ಬು ಕಡಿಯಲು ಬಂದಿದ್ದ ರೈತ ಕಾರ್ಮಿಕ ಮಹಿಳೆ ಹಾವು ಕಚ್ಚಿ ಸಾವನ್ನಪ್ಪಿದ್ದು, ಕೂಡಲೇ ಸರ್ಕಾರ 20 ಲಕ್ಷ ರು. ಪರಿಹಾರ ನೀಡಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ತಾಲೂಕು ಸಮ್ಮೇಳನದ ತೀರ್ಮಾನದಂತೆ ನೂತನ ಅಧ್ಯಕ್ಷರಾಗಿ ಟಿ.ಎಚ್.ಆನಂದ್, ಕಾರ್ಯದರ್ಶಿಯಾಗಿ ಎಸ್‌.ಪಿ.ಲಕ್ಷ್ಮಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಪುಟ್ಟಮಾದು ಘೋಷಣೆ ಮಾಡಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಾಧ್ಯಕ್ಷರಾಗಿ ಕಪಿನಿಗೌಡ ಪಾಪಣ್ಣ, ರಾಮಯ್ಯ, ಮಲ್ಲೇಶ್, ಜ್ಯೋತಿ, ಲಕ್ಷ್ಮಿ, ಸಹಕಾರ್ಯದರ್ಶಿಯಾಗಿ ಪುಟ್ಟಮಾದೇಗೌಡ, ಶಿವಕುಮಾರ್, ಮಂಜುಳ, ಮಹಾಲಿಂಗು, ಲಕ್ಷ್ಮಿ, ತಾಲೂಕು ಸದಸ್ಯರಾಗಿ ಜವರಯ್ಯ, ಗೌರಮ್ಮ, ವಸಂತ, ಸವಿತ, ಸ್ವಾಮಿ, ಪ್ರಮೀಳ, ಜಯಮ್ಮ, ಲಕ್ಷ್ಮಮ್ಮ, ಸಾಕಮ್ಮ, ಸುಧಾ ಅವರನ್ನು ನೇಮಿಸಲಾಗಿದೆ ಎಂದರು.

ಸಮ್ಮೇಳನದಲ್ಲಿ ಅರಣ್ಯ ಇಲಾಖೆ ಹಾಗೂ ತಾಲೂಕು ಆಡಳಿತದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ರಾಜೇಗೌಡರ ಕುಟುಂಬಕ್ಕೆ ಮತ್ತಷ್ಟು ಪರಿಹಾರ ನೀಡಬೇಕು. ಈಗಾಗಲೇ ಕೃಷಿ ಮಾಡುತ್ತಿರುವ ರೈತರಿಗೆ ಅರಣ್ಯ ಇಲಾಖೆ ತೊಂದರೆ ಕೊಡಬಾರದೆಂದು ಆಗ್ರಹಿಸಿದರು.

ಪ್ರತಿ ಟನ್ ಕಬ್ಬಿಗೆ 3500 ರು. ನಿಗದಿ ಮಾಡಬೇಕೆಂದು ಬೆಳಗಾವಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಪ್ರಾಂತ ಕೃಷಿ ಕೂಲಿಕಾರರ ಸಂಘ ಸಂಪೂರ್ಣ ನೀಡಲಿದೆ. ಮದ್ದೂರು ತಾಲೂಕಿನ ಕೆ.ಎಂ ದೊಡ್ಡಿ ಸಕ್ಕರೆ ಕಾರ್ಖಾನೆಗೆ ಕಬ್ಬು ಕಡಿಯಲು ಬಂದಿದ್ದ ರೈತ ಕಾರ್ಮಿಕ ಮಹಿಳೆ ಹಾವು ಕಚ್ಚಿ ಸಾವನ್ನಪ್ಪಿದ್ದು, ಕೂಡಲೇ ಸರ್ಕಾರ 20 ಲಕ್ಷ ರು. ಪರಿಹಾರ ನೀಡಬೇಕು. ಕಬ್ಬು ಕಟಾವು ಮಾಡುವ ಕಾರ್ಮಿಕರಿಗೆ ಮೂಲ ಸೌಲಭ್ಯವನ್ನು ಒದಗಿಸಬೇಕೆಂದು ತಿಳಿಸಿದರು.

ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಮಲ್ಲಯ್ಯ ಮಾತನಾಡಿ, ತಾಲೂಕಿನ ಕೃಷಿಕೂಲಿಕಾರರಿಗೆ ಸಮರ್ಪಕ ಕೂಲಿ ನೀಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಸಮರ್ಪಕ ಕೆಲಸ ಹಾಗೂ ಕೂಲಿ ನೀಡುವವರೆಗೂ ನಿರಂತರ ಹೋರಾಟ ಮಾಡಲಾಗುವುದು ಎಂದರು.

ತಾಲೂಕು ಅಧ್ಯಕ್ಷ ತಳಗವಾದಿ ಆನಂದ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಲಭ್ಯ ಸಿಗದೇ ಪರದಾಡುತ್ತಿದ್ದಾರೆ. ಪ್ರತಿ ಹಳ್ಳಿಗೂ ಕುಡಿಯುವ ನೀರು, ರಸ್ತೆ, ಶ್ಮಶಾನ, ಸಮರ್ಪಕ ಉದ್ಯೋಗ ಕಲ್ಪಿಸಬೇಕೆಂದು ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.