ಟಿ.ತುಂಬಿಗೇರಿ ವಾಂತಿಭೇದಿ ಪ್ರಕರಣ: ಪಿಡಿಒ ಸಸ್ಪೆಂಡ್

| Published : Oct 23 2024, 01:54 AM IST

ಟಿ.ತುಂಬಿಗೇರಿ ವಾಂತಿಭೇದಿ ಪ್ರಕರಣ: ಪಿಡಿಒ ಸಸ್ಪೆಂಡ್
Share this Article
  • FB
  • TW
  • Linkdin
  • Email

ಸಾರಾಂಶ

ವಾಂತಿ-ಭೇದಿ ಪ್ರಕರಣದಿಂದಲೇ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲಾ ಪಂಚಾಯ್ತಿ ಸಿಇಒ ತುಂಬಿಗೇರಿ ಗ್ರಾಮ ಒಳಪಡುವ ರಾಗಿಮಸಲವಾಡ ಅಭಿವೃದ್ಧಿ ಅಧಿಕಾರಿ ಎಸ್‌.ಶ್ರೀನಿವಾಸ ಅವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.

ಹರಪನಹಳ್ಳಿ: ತಾಲೂಕಿನ ಟಿ.ತುಂಬಿಗೇರಿ ಗ್ರಾಮದಲ್ಲಿನ ವಾಂತಿ-ಭೇದಿ ಪ್ರಕರಣದಿಂದಲೇ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲಾ ಪಂಚಾಯ್ತಿ ಸಿಇಒ ತುಂಬಿಗೇರಿ ಗ್ರಾಮ ಒಳಪಡುವ ರಾಗಿಮಸಲವಾಡ ಅಭಿವೃದ್ಧಿ ಅಧಿಕಾರಿ ಎಸ್‌.ಶ್ರೀನಿವಾಸ ಅವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.

ಮಂಗಳವಾರ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಕೂಡಲೇ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಸಂಬಂಧಪಟ್ಟ ಅಧಿಕಾರಿಗಳ ಬಳಿ ಚರ್ಚೆ ನಡೆಸಿದ ಹಿನ್ನೆಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಸಾಮಗ್ರಿಗಳು ಗ್ರಾಮಕ್ಕೆ ಆಗಮಿಸಿದವು.

ಪೈಪ್‌ಲೈನ್‌ ಬದಲಾವಣೆಗೆ ಸೂಚಿಸಿದ ಶಾಸಕರು 2-3 ಕಡೆ ಸಿಸಿ ರಸ್ತೆ, ಚರಂಡಿ ಕಾಮಗಾರಿಯನ್ನು ಅತಿ ಶೀಘ್ರದಲ್ಲಿ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.

ಹೊಸ ಸಾರಿಗೆ ಬಸ್‌ಗಳನ್ನು ಈ ಗ್ರಾಮಕ್ಕೆ ಬಿಡಿಸಲಾಗುವುದು ಎಂದು ಹೇಳಿದ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರು ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಮನೆ ಮನೆಗೆ ತೆರಳಿ ಜನರಿಗೆ ಸ್ವಚ್ಛತೆ ಕುರಿತು ಅರಿವು ಮೂಡಿಸಬೇಕು ಎಂದು ಸೂಚಿಸಿದರು. ಬ್ಲೀಚಿಂಗ್‌ ಪೌಡರ್ ಸಿಂಪರಣೆ, ತಿಪ್ಪೆಗಳನ್ನು ತೆಗೆಸಲು ಗ್ರಾಮ ಪಂಚಾಯ್ತಿಗೆ ಸೂಚಿಸಿದರು.

ಮೃತ ವ್ಯಕ್ತಿಗಳ ಕುಟುಂಬಕ್ಕೆ ಪರಿಹಾರ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದಾಗ ಶಾಸಕರು ವೈದ್ಯಕೀಯ ವರದಿ ನೋಡಿ ಅಧಿಕಾರಿಗಳ ಬಳಿ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಪುರಸಭಾ ಸದಸ್ಯರಾದ ವೆಂಕಟೇಶ, ಗಣೇಶ, ಲಾಟಿ ದಾದಾಪೀರ, ಮುಖಂಡರಾದ ವಸಂತಪ್ಪ, ಎಲ್‌. ಮಂಜನಾಯ್ಕ ತಹಸೀಲ್ದಾರ್ ಗಿರೀಶಬಾಬು, ತಾಪಂ ಇಒ ಚಂದ್ರಶೇಖರ, ಪೊಲೀಸ್‌ ವೃತ್ತ ನಿರೀಕ್ಷಕ ನಾಗರಾಜ ಎಂ. ಕಮ್ಮಾರ, ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಎಇಇ ಕಿರಣಕುಮಾರನಾಯ್ಕ, ಶಂಭುಲಿಂಗ ಹಿರೇಮಠ, ಕಿರಣಕುಮಾರ, ನರೇಗಾ ಸಹಾಯಕ ನಿರ್ದೆಶಕ ಸೋಮಶೇಖರ ಶಾಸಕರ ಜೊತೆ ಉಪಸ್ಥಿತರಿದ್ದರು.

ಕಲುಷಿತ ನೀರು ಪ್ರಕರಣ ಗಂಭೀರವಾಗಿ ಪರಿಗಣಿಸಲಾಗಿದೆ

ಹೊಸಪೇಟೆ: ಹರಪನಹಳ್ಳಿಯ ಟಿ. ತುಂಬಿಗೆರೆ ಗ್ರಾಮದಲ್ಲಿ ಕಲುಷಿತ ನೀರಿನಿಂದ ಇಬ್ಬರು ಮೃತಪಟ್ಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಈಗಾಗಲೇ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಾವಿಗೆ ನಿಖರ ಕಾರಣ ಹುಡುಕಲು ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರಂಭದಲ್ಲಿ ಇದು ವಾಂತಿ-ಭೇದಿ ಪ್ರಕರಣ ಎಂದು ಪ್ರಾಥಮಿಕ ವರದಿಯಿಂದ ತಿಳಿದಿದೆ. ವೈದ್ಯರ ತಂಡದ ಪರಿಶೀಲನೆ ಬಳಿಕವಷ್ಟೇ ನಿಖರ ಕಾರಣ ತಿಳಿಸಲಾಗುವುದು ಎಂದರು.ಟಿ. ತುಂಬಿಗೆರೆ ಗ್ರಾಮದ 15 ಜನರು ಬೇರೆ ಬೇರೆ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ ಎಂಬುದು ಈಗಷ್ಟೇ ತಿಳಿದಿದೆ. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕ್ರಮವಹಿಸಲಿದೆ. ಆರೋಗ್ಯ ಇಲಾಖೆಯ ತಂಡ ಗ್ರಾಮದಲ್ಲಿ ಬೀಡು ಬಿಟ್ಟು ಚಿಕಿತ್ಸೆ ನೀಡಲಿದ್ದಾರೆ ಎಂದರು. ವಿಜಯನಗರದಲ್ಲಿ ಜಿಲ್ಲಾಸ್ಪತ್ರೆ ವೇಗವಾಗಿ ಕಟ್ಟಲಾಗುತ್ತಿದೆ. ಕಟ್ಟಡ ನಿರ್ಮಾಣಗೊಂಡ ಬಳಿಕ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ನೇಮಕ ಮಾಡಲಾಗುವುದು.

ಅಗತ್ಯ ಮೂಲಭೂತ ಸೌಲಭ್ಯ ಒದಗಿಸಲಾಗುವುದು. ಹಾರ್ಟ್ ಕೇರ್ ಸೆಂಟರ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ಜಿಲ್ಲಾಸ್ಪತ್ರೆಗೆ ಒದಗಿಸಲಾಗುತ್ತದೆ ಎಂದರು.ಶಾಸಕರಾದ ಎಚ್.ಆರ್. ಗವಿಯಪ್ಪ, ಡಾ. ಎನ್‌.ಟಿ. ಶ್ರೀನಿವಾಸ್‌, ಕೃಷ್ಣ ನಾಯ್ಕ ಇದ್ದರು.