ಸಾರಾಂಶ
ಬರಗಾಲ ಎಫೆಕ್ಟ್ । 1901 ರಲ್ಲಿ ಬಿಟ್ರಿಷರಿಂದ 9 ಕಮಾನುಗಳ ಕಲ್ಲಿನ ಸೇತುವೆ ನಿರ್ಮಾಣ । ನರಸಿಂಹರಾಜಪುರ- ತರೀಕೆರೆಗೆ ಸಂಪರ್ಕ ।
- ಮುಳುಗಡೆಯಾದ ನಂತರ 2005ರಲ್ಲಿ ಪ್ರಥಮ ಬಾರಿ ದರ್ಶನ- 2013ರಲ್ಲಿ 2ನೇ ಬಾರಿ ಕಂಡು ಬಂದಿತ್ತು
- 2016- 2017 ರಲ್ಲಿ ಮತ್ತೆ ತಡಸಾ ಸೇತುವೆ ಕಂಡಿತ್ತು- ಸೇತುವೆ ಮೇಲೆ ನಟ ಸುದೀಪ್ ಚಿತ್ರದ ಶೂಟಿಂಗ್ ಯಡಗೆರೆ ಮಂಜುನಾಥ್,
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ1960ರ ಸುಮಾರಿಗೆ ಲಕ್ಕವಳ್ಳಿ ಡ್ಯಾಂ ಆದ ನಂತರ ಭದ್ರಾ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ಬ್ರಿಟಿಷರ ಕಾಲದಲ್ಲಿ 1901 ರಲ್ಲಿ ಕಟ್ಟಿದ್ದ ಇತಿಹಾಸ ಪ್ರಸಿದ್ಧ ತಡಸಾ ಸೇತುವೆ ಅರ್ಧ ಭಾಗ ಈಗ ಗೋಚರಿಸುತ್ತಿದೆ. ನರಸಿಂಹರಾಜಪುರ ಪಟ್ಟಣದ ಪ್ರವಾಸಿ ಮಂದಿರ ಸಮೀಪದಿಂದ ಜೈಲ್ ರಸ್ತೆ ಮಾರ್ಗವಾಗಿ 4 ಕಿ.ಮೀ. ದೂರ ಸಾಗಿದರೆ ಭದ್ರಾ ಹಿನ್ನೀರು ಕಾಣಿಸುತ್ತದೆ. ಈ ಮಾರ್ಗವಾಗಿ ತರೀಕೆರೆಗೆ ಕೇವಲ 16 ಕಿ.ಮೀ.ಗೆ ತಲುಪಬಹುದಿತ್ತು. 1901ರಲ್ಲಿ ಈ ಮಾರ್ಗ ಮಧ್ಯೆ ಬರುವ ತಡಸ ಎಂಬ ಊರಿನಲ್ಲಿ ಹರಿಯುತ್ತಿದ್ದ ಬಕ್ರಿಹಳ್ಳಕ್ಕೆ ಬ್ರಿಟಿಷರು 9 ಕಮಾನು ಉಳ್ಳ ಸೇತುವೆ ನಿರ್ಮಾಣ ಮಾಡಿದ್ದರು. ಸಿಮೆಂಟಿನ ಗಾರೆ ಇಲ್ಲದೆ ಕೀ ಸ್ಟೋನ್ ತಂತ್ರಜ್ಞಾನ ಬಳಸಿ ಕಲ್ಲುಗಳಿಂದಲೇ ಸೇತುವೆ ನಿರ್ಮಿಸಿದ್ದರು. ತರೀಕೆರೆಯಿಂದ - ನರಸಿಂಹ ರಾಜಪುರಕ್ಕೆ ತಡಸ ಸೇತುವೆ ಮೇಲೆ ವಾಹನಗಳು ಹಾಗೂ ರೈಲು ಬರುತ್ತಿದ್ದವು. ಇದಕ್ಕೆ ಸಾಕ್ಷಿ ಎಂಬಂತೆ ಈಗಲೂ ರೇಲ್ವೆ ಹಳಿ ಹಾಕಿದ್ದ ಗುರುತುಗಳು ಕಂಡು ಬರುತ್ತಿದೆ.
ಮುಳುಗಡೆ:1960ರ ಸುಮಾರಿಗೆ ಲಕ್ಕವಳ್ಳಿಯಲ್ಲಿ ಭದ್ರಾ ಡ್ಯಾಂ ನಿರ್ಮಾಣವಾಯಿತು. ಇದರ ಪರಿಣಾಮ ಭದ್ರಾ ಹಿನ್ನೀರು ನರಸಿಂಹ ರಾಜಪುರದ ಅರ್ಧಭಾಗವನ್ನು ಆಪೋಷಣೆ ತೆಗೆದುಕೊಂಡಿತು. ಲಿಂಗಾಪುರ, ಜೇಡಿಕೊಪ್ಪ, ಕೆರೆ ಕೊಪ್ಪ, ಹೆರಂದೂರು, ಗುಬ್ಬಿ ಕೆರೆ, ಕೆರೆಕೊಪ್ಪ, ಗೇರ್ ಬೈಲು ಸೇರಿದಂತೆ ಅನೇಕ ಗ್ರಾಮಗಳು ಭದ್ರಾ ಹಿನ್ನೀರಿನಲ್ಲಿ ಮುಳುಗಿ ಹೋಯಿತು. ಭದ್ರಾ ಹಿನ್ನೀರಿ ನಲ್ಲಿ ಇತಿಹಾಸ ಪ್ರಸಿದ್ಧ ತಡಸಾ ಸೇತುವೆ, ಇಲ್ಲಿಂದ 3 ಕಿ.ಮೀ.ದೂರದ 3 ಕಣ್ಣಿನ ಲಿಂಗಾಪುರ ಸೇತುವೆ, ಬಾಳೆಕೊಪ್ಪ ಸೇತುವೆ ಸಹ ಮುಳುಗಿ ಹೋಯಿತು. ಜೊತೆಗೆ ವಿವಿಧ ಗ್ರಾಮಗಳಲ್ಲಿ ಬಾಳಿ ಬದುಕಿದ್ದ ನೂರಾರು ಕುಟುಂಬಗಳು ತಮ್ಮ ತೋಟ, ಗದ್ದೆ ಬಿಟ್ಟು ಭದ್ರಾವತಿ, ಶಿವಮೊಗ್ಗ ಲಕ್ಕವಳ್ಳಿ ಹಾಗೂ ನರಸಿಂಹರಾಜಪುರ ತಾಲೂಕಿನ ವಿವಿಧ ಗ್ರಾಮಗಳಿಗೆ ಸ್ಥಳಾಂತರಗೊಂಡರು.
2005ರಲ್ಲಿ ಪ್ರಥಮ:ಭದ್ರಾ ಆಣೆಕಟ್ಟಿನಿಂದ ಭದ್ರಾ ಹಿನ್ನೀರಿನಲ್ಲಿ ಮನೆ, ಜಮೀನು ಕಳೆದುಕೊಂಡ ಜನರು ಕೆಲವು ವರ್ಷಗಳ ನಂತರ ಇತಿಹಾಸದ ಕಹಿ ನೆನಪನ್ನು ಮರೆತು ಕಾಲ ಕಳೆಯುತ್ತಿದ್ದರು. ಆದರೆ, 2005ರಲ್ಲಿ ಬರಗಾಲ ಬಂದು ಭದ್ರಾ ಡ್ಯಾಂನಲ್ಲಿ ನೀರು ಕಡಿಮೆ ಯಾದಾಗ ಭದ್ರಾ ಹಿನ್ನೀರು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಆಗ ನರಸಿಂಹರಾಜಪುರಕ್ಕೆ ಕೇವಲ 4 ಕಿ.ಮೀ ದೂರದ ಲಿಂಗಾಪುರ ಗ್ರಾಮದಲ್ಲಿ ತಡಸಾ ಸೇತುವೆ ಕಾಣಿಸಿತ್ತು. ಆಗ ಮುಳುಗಡೆ ಪ್ರದೇಶದ ಜನರಿಗೆ ನೆನಪುಗಳು ಮರು ಕಳಿಸಿ ತಾವು ಬಾಳಿ ಬದುಕಿದ ಜಾಗ, ತಡಸಾ ಸೇತುವೆ, 3 ಕಣ್ಣಿನ ಲಿಂಗಾಪುರ ಸೇತುವೆ ನೋಡಲು ತಂಡೋಪ, ತಂಡವಾಗಿ ಬಂದರಲ್ಲದೆ, ಬ್ರಿಟಿಷರು ಕಟ್ಟಿದ್ದ ನೂರಾರು ವರ್ಷಗಳ ಹಳೆ ತಂತ್ರಜ್ಞಾನ ಆಧಾರಿತ ಸೇತುವೆಯನ್ನು ಪ್ರವಾಸಿಗರು ಬಂದು ವೀಕ್ಷಿಸಿದರು. ನಟ ಸುದೀಪ್ ತಮ್ಮ ಪಾರ್ಥ ಸಿನಿಮಾದ ಶೂಟಿಂಗ್ ನ್ನು ತಡಸಾ ಸೇತುವೆ ಮೇಲೆ ನಡೆಸಿದರು. ಆ ವರ್ಷವೇ ತಡಸಾ ಸೇತುವೆ ಜನಪ್ರಿಯತೆ ಗಳಿಸಿತು.
5 ಬಾರಿ ಸೇತುವೆ ಗೋಚರ:1901ರಲ್ಲಿ ನಿರ್ಮಾಣಗೊಂಡ ತಡಸಾ ಸೇತುವೆ. 1960ರಲ್ಲಿ ನೀರಿನಲ್ಲಿ ಮುಳುಗಿದ್ದರೂ ಇನ್ನೂ ಗಟ್ಟಿಮುಟ್ಟಾಗಿದ್ದು ಆಗಿನ ತಂತ್ರಜ್ಞಾನ ಎಷ್ಟೊಂದು ಶಕ್ತಿಶಾಲಿ ಎಂಬುದಕ್ಕೆ ನಿದರ್ಶನ. 2005ರಲ್ಲಿ ಪ್ರಥಮ ಬಾರಿಗೆ ತಡಸಾ ಸೇತುವೆ ಗೋಚರ ವಾಗಿತ್ತು. ನಂತರ 2013ರಲ್ಲಿ 2ನೇ ಬಾರಿ ಕಂಡು ಬಂದಿತ್ತು. ನಂತರ 2016, 2017ರಲ್ಲಿ ಮತ್ತೆ ತಡಸಾ ಸೇತುವೆ ಕಂಡಿತ್ತು. 7 ವರ್ಷದ ನಂತರ ಈ ವರ್ಷ ಮತ್ತೆ ಅರ್ಧ ತಡಸಾ ಸೇತುವೆ ಕಂಡು ಬಂದಿದೆ.
ಪ್ರಸ್ತುತ ತಡಸಾ ಸೇತುವೆ ಸಮೀಪದಲ್ಲಿ 8 ರಿಂದ 10ಅಡಿ ನೀರು ನಿಂತಿದೆ. ಸೇತುವೆ ಜಾಗಕ್ಕೆ ಹೋಗಲು ನರಸಿಂಹ ರಾಜಪುರ ಪ್ರವಾಸಿ ಮಂದಿರ ಸಮೀಪದಿಂದ ಜೈಲ್ ರೋಡ್ ಮಾರ್ಗವಾಗಿ 4 ಕಿ.ಮೀ. ರಸ್ತೆಯಲ್ಲೇ ಬಂದರೆ ಭದ್ರಾ ಹಿನ್ನೀರಿನ ಖಾಲಿ ಜಾಗ ಕಾಣಿಸುತ್ತದೆ. ಅಲ್ಲಿಂದ 1-2 ಕಿ.ಮೀ.ಮುಂದೆ ಸಾಗಿದರೆ ತಡಸಾ ಸೇತುವೆ ಕಾಣುತ್ತದೆ. ಅರ್ಧ ಕಿಮೀ ಭದ್ರಾ ಹಿನ್ನೀರಿನಲ್ಲಿ ಉಕ್ಕಡದಿಂದ ಹೋದರೆ 10 ನಿಮಿಷಕ್ಕೆ ತಡಸಾ ಸೇತುವೆ ತಲುಪಬಹುದು. ಮುಂದಿನ 10 ದಿನದಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಇಳಿದರೆ ತಡಸಾ ಸೇತುವೆ ಸಮೀಪದವರೆಗೆ ವಾಹನಗಳಲ್ಲಿ ಹೋಗಬಹುದು.-- ಕೋಟ್--
ಬರಗಾಲ ಬಂದ ವರ್ಷಗಳಲ್ಲಿ ಭದ್ರಾ ಹಿನ್ನೀರು ಹಿಂದಕ್ಕೆ ಹೋಗಿ ತಡಸಾ ಸೇತುವೆ ಕಾಣುತ್ತದೆ. ಈ ವರ್ಷ ಅರ್ಧ ತಡಸಾ ಸೇತುವೆ ಕಾಣುತ್ತಿದೆ. ಈಗಾಗಲೇ ಸಂಜೆ ಹೊತ್ತಿಗೆ ಪ್ರವಾಸಿಗರು ನೋಡಲು ಬರುತ್ತಿದ್ದಾರೆ. ಹಿಂದೆ ತಡಸಾ ಸೇತುವೆ ಕಂಡಾಗ ನಟ ಸುದೀಪ್ ಸೇತುವೆ ಮೇಲೆ ಶೂಟಿಂಗ್ ನಲ್ಲಿ ಭಾಗವಹಿಸಿದ್ದರು. ಕೆಲವು ಪ್ರವಾಸಿಗರು ಭದ್ರಾ ಹಿನ್ನೀರಿನ ಕಾಲಿ ಜಾಗದಲ್ಲಿ ಮದ್ಯಪಾನ ಮಾಡಿ ಬಾಟಲಿಗಳನ್ನು ಎಲ್ಲಾ ಕಡೆ ಎಸೆದು ಹೋಗುತ್ತಿದ್ದಾರೆ ಇದು ಸರಿಯಲ್ಲ.ಎನ್.ಡಿ.ಪ್ರಸಾದ್,
ಮೆಣಸೂರು ಗ್ರಾಮ ಪಂಚಾಯಿತಿ ಸದಸ್ಯರು, ನರಸಿಂಹರಾಜಪುರ--- ಕೋಟ್---
ತಡಸಾ ಸೇತುವೆ ನಮ್ಮೂರಿನಲ್ಲಿದೆ ಎಂಬುದು ನಮಗೆ ಹೆಮ್ಮೆ. ಸೇತುವೆ ಮೇಲೆ ವಾಹನ, ರೈಲು ಒಟ್ಟಿಗೆ ಹೋಗುತ್ತಿದ್ದವು. 1917ರ ಮೇ 13ರಂದು ಮೊದಲ ಬಾರಿಗೆ ಟ್ರಾಂಬೆ ರೈಲು ತರೀಕೆರೆಯಿಂದ ನರಸಿಂಹರಾಜಪುರಕ್ಕೆ ಬಂದಿದೆ. ತಡಸಾದಿಂದ ಹೆಬ್ಬೆಗೆ 1921ರಲ್ಲಿ ಎರಡನೇ ರೈಲು ಸಂಚರಿಸಿದೆ ಎಂಬುದಕ್ಕೆ ದಾಖಲೆ ಇದೆ. ತಮಿಳುನಾಡಿನ ಸಿದ್ದಪ್ಪ ಎಂಬ ವಿಕಲಚೇತನರು ಈ ಸೇತುವೆ ನಿರ್ಮಾಣದಲ್ಲಿ ಪ್ರಮುಖರಾಗಿದ್ದರು ಎಂದು ನಮ್ಮ ಪೂರ್ವಜರಿಂದ ತಿಳಿದಿದೆ. 2005 ರಲ್ಲಿ ಮೊದಲ ಬಾರಿಗೆ ಭದ್ರಾ ನೀರು ಬಿಟ್ಟಾಗ ಸೇತುವೆ ನೋಡಲು ಬಂದ ಪುಂಡ ಪೋಕರು ವಿಕೃತಿ ಮೆರೆದು ಸೇತುವೆ ಕೈಪಿಡಿ ಕಿತ್ತು ಕೆಳಗೆ ಹಾಕಿದ್ದಾರೆ. ಸುಂದರವಾದ ಭದ್ರಾ ಹಿನ್ನೀರಿಗೆ ಕೆಲವು ಪುಂಡರು ಬಂದು ಬಾಟಲಿ, ಪ್ಲಾಸ್ಟಿಕ್ ಹಾಕಿ ಮಲಿನ ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ, ಸ್ಥಳೀಯ ಆಡಳಿತ ಕಠಿಣ ಕ್ರಮ ಕೈಗೊಳ್ಳಬೇಕು.ಸುನೀಲ್ ತೋಟಕೆರೆ,
ಸ್ಥಳೀಯರು, ಲಿಂಗಾಪುರ ಗ್ರಾಮ, ನರಸಿಂಹರಾಜಪುರ