ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ತಹಸೀಲ್ದಾರ್ ಎಂ.ಜಿ. ಸಂತೋಷ್ ಕುಮಾರ್ ಅನಿರೀಕ್ಷಿತ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಕಲ್ಪಿಸಲಾಗಿರುವ ಮೂಲಸೌಲಭ್ಯಗಳು ಹಾಗೂ ಆಹಾರದ ಗುಣಮಟ್ಟವನ್ನು ಪರಿಶೀಲಿಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.ಪರಿಶೀಲನೆ ವೇಳೆ ಅಡುಗೆ ಮನೆ, ವಿದ್ಯಾರ್ಥಿಗಳ ಮಲಗುವ ಕೊಠಡಿಗಳು, ಶೌಚಾಲಯ, ಸ್ನಾನಗೃಹ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಹಾಸ್ಟೆಲ್ ಆವರಣದ ಸ್ವಚ್ಛತೆಯನ್ನು ವೀಕ್ಷಿಸಿದ ಅವರು, ಆಹಾರ ಮೆನು, ಧಾನ್ಯಗಳ ಗುಣಮಟ್ಟ ಮತ್ತು ಲಭ್ಯವಿರುವ ಸೌಲಭ್ಯಗಳ ಕುರಿತು ಅಡುಗೆ ಸಿಬ್ಬಂದಿಯಿಂದ ಮಾಹಿತಿ ಪಡೆದರು.''''''''ವಿದ್ಯಾರ್ಥಿಗಳ ಆರೋಗ್ಯ ಕಾಪಾಡುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಬಡ ಹಾಗೂ ಮಧ್ಯಮ ವಿದ್ಯಾರ್ಥಿಗಳ ಶಿಕ್ಷಣದ ಅನುಕೂಲಕ್ಕಾಗಿ ವಸತಿ ನಿಲಯಗಳನ್ನು ಸ್ಥಾಪಿಸಿ ಅವರ ವಿದ್ಯಾಭ್ಯಾಸದ ಅಭಿವೃದ್ಧಿಗಾಗಿ ವಿವಿಧ ಸವಲತ್ತುಗಳನ್ನು ಒದಗಿಸಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು'''''''' ಎಂದು ಸಂತೋಷ್ ಕುಮಾರ್ ತಿಳಿಸಿದರು.ಅಕ್ಕಿ, ಬೇಳೆ ಮತ್ತು ಅಡುಗೆಗೆ ಬಳಸುವ ಪದಾರ್ಥಗಳು ಹುಳ ಹಿಡಿಯದಂತೆ ನೋಡಿಕೊಳ್ಳಬೇಕು. ನಿರ್ಧರಿಸಿದ ದಿನಗಳಂದು ಪೌಷ್ಟಿಕ ಆಹಾರ ಪೂರೈಸಬೇಕು. ಕುಡಿಯುವ ನೀರನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಶೌಚಾಲಯ, ಸ್ನಾನಗೃಹ, ಹಾಸ್ಟೆಲ್ ಆವರಣ ಹಾಗೂ ವಸತಿ ನಿಲಯಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಕ್ರಮವಹಿಸಬೇಕು ಎಂದು ಸೂಚಿಸಿದರು.ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾದರೆ ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಿ ಪೋಷಕರಿಗೆ ಮಾಹಿತಿ ನೀಡಬೇಕು. ಹಾಸ್ಟೆಲ್ ನಿರ್ವಹಣೆ ಹಾಗೂ ಸೌಲಭ್ಯಗಳಿಗೆ ಸಂಬಂಧಿಸಿದ ಯಾವುದೇ ಕುಂದುಕೊರತೆಗಳಿದ್ದರೆ ಇಲಾಖಾ ಅಧಿಕಾರಿಗಳ ಅಥವಾ ತಮ್ಮ ಗಮನಕ್ಕೆ ತರಬೇಕು ಎಂದು ಅವರು ತಿಳಿಸಿದರು.