ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಭಯ ಭೀತಿ ಬಿಟ್ಟು ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳು ನಿರಾತಂಕವಾಗಿ ಪರೀಕ್ಷೆ ಬರೆಯಲು ಸಕಲ ಸಿದ್ಧತೆ ಮಾಡಲಾಗಿದೆ ಎಂದು ತಹಸೀಲ್ದಾರ್ ಎಂ. ಮಮತಾ ತಿಳಿಸಿದರು.ಪರೀಕ್ಷಾ ಕೇಂದ್ರಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ, ವೃತ್ತ ನಿರೀಕ್ಷಕರ ಜೊತೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದ ಅವರು, ಈ ಬಾರಿಯ ೨೦೨೪- ೨೫ ನೇ ಸಾಲಿನ ಎಸ್ಎಸ್‌ಎಲ್ ಸಿ ಪರೀಕ್ಷೆಯನ್ನು ಬರೆಯಲು ವಿದ್ಯಾರ್ಥಿಗಳು ಉತ್ಸಾಹದಿಂದ ಪೂರ್ವ ಸಿದ್ಧತೆಯಲ್ಲಿದ್ದಾರೆ. ಎಲ್ಲಾ ಒಟ್ಟು ೭ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿಗಳ ಕಣ್ಗಾವಲಿನಲ್ಲಿ ಈ ಬಾರಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಯಾವುದೇ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ ಮಾಡಲಾಗಿದ್ದು, ತಾರೀಮರ ಹಾಗೂ ಅಂಬೇಡ್ಕರ್ ವಸತಿ ಶಾಲೆಗೆ ವಿಶೇಷ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ. ವಿದ್ಯಾರ್ಥಿಗಳು ಭಯ ಹಾಗೂ ಅಂಜಿಕೆ ಬಿಟ್ಟು ಧೈರ್ಯದಿಂದ ಪರೀಕ್ಷೆ ಬರೆಯುವಂತೆ ಶುಭ ಹಾರೈಸಿದರು.
ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಮಾತನಾಡಿ, ಈ ಬಾರಿ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ೨೦೮೧ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುತ್ತಿದ್ದು, ಇದರಲ್ಲಿ ೧೦೧೭ ಗಂಡು ಮಕ್ಕಳು, ೧೦೬೪ ಹೆಣ್ಣು ಮಕ್ಕಳಿದ್ದು, ಒಟ್ಟು ೭ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಈ ಬಾರಿ ೧೨ ವಿಶೇಷ ಚೇತನ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಅವರಿಗೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಒಟ್ಟು ತಾಲೂಕಿನಲ್ಲಿ ೫೫ ಶಾಲೆಗಳಿದ್ದು, ಮುಖ್ಯ ಅಧೀಕ್ಷಕರು ೮, ಪ್ರಶ್ನೆ ಪತ್ರಿಕೆ ಅಧೀಕ್ಷಕರು ೮, ಸ್ಥಾನಿಕ ಜಾಗೃತ ದಳ ೧೦, ಗೌಪ್ಯ ಮಾರ್ಗಾಧಿಕಾರಿಗಳು ೩, ಮೊಬೈಲ್ ಸ್ವಾಧೀನ ಅಧಿಕಾರಿಗಳು ೭ , ಕೊಠಡಿ ಮೇಲ್ವೀಚಾರಕರು ೧೬೦, ಸಿಸಿಟಿವಿ ಕಂಟ್ರೋಲರ್ ೭ , ಎಲ್ಲಾ ಕೇಂದ್ರಗಳಲ್ಲೂ ಒಟ್ಟು ೧೦೦ ಸಿಸಿ ಕ್ಯಾಮೆರಾಗಳು, ಆರೋಗ್ಯ ಕಾರ್ಯಕರ್ತರು ೧೪ , ಒಟ್ಟು ೩೩೦ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.ವೃತ್ತ ನಿರೀಕ್ಷಕ ರೇವಣ್ಣ ಮಾತನಾಡಿ, ಪ್ರತಿ ಪರೀಕ್ಷಾ ಕೇಂದ್ರಗಳಿಗೆ ೭ ಜನ ಪಿಸಿಗಳನ್ನು ನೇಮಕ ಮಾಡಿದ್ದು, ಎಲ್ಲಾ ಕೇಂದ್ರಗಳಿಗೂ ಗಸ್ತು ವಾಹನವನ್ನು ಬಿಡಲಾಗಿದೆ. ಪರೀಕ್ಷೆ ಪ್ರಾರಂಭವಾದಾಗ ಕೊನೆವರೆಗೂ ಸಂಪೂರ್ಣ ಬಂದೋಬಸ್ತ್ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ
ಯಾವುದೇ ರೀತಿಯ ಟ್ರಾಫಿಕ್ ಸಮಸ್ಯೆ ಆಗದಂತೆ ಸಂಚಾರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದರು. ಎಸ್ಎಸ್ಎಲ್ ಸಿ ನೋಡಲ್ ಅಧಿಕಾರಿ ಗೋಪಾಲ್, ಜಗದೀಶ್, ಪ್ರಾಂಶುಪಾಲ ಹರೀಶ್ ಇತರರು ಇದ್ದರು.