ಕನ್ನಡಪ್ರಭ ವಾರ್ತೆ ಕಮತಗಿ

ಮಲಪ್ರಭೆಯ ನದಿಯು ನೀರಿಲ್ಲದೆ ಬತ್ತಿ ಬರಿದಾಗಿ ನೀರಿಗಾಗಿ ಹಾತೊರೆಯುತ್ತಿದ್ದರೆ, ಮತ್ತೊಂದೆಡೆ ರೈತರು ಮಳೆರಾಯನ ಆಗಮನಕ್ಕಾಗಿ ಆಕಾಶದತ್ತ ಮುಖಮಾಡಿ ನೋಡುತ್ತ ಕುಳಿತ್ತಿದ್ದಾರೆ. ಇತ್ತ ಅಕ್ರಮ ಮರಳು ದಂದೆಕೋರರು ಎಗ್ಗಿಲ್ಲದೆ ಅಕ್ರಮ ಮರಳು ದಂಧೆಯಲ್ಲಿ ಸಕ್ರಿಯರಾಗಿದ್ದಾರೆ. ಮಲಪ್ರಭಾ ನದಿ ಪಾತ್ರದ ಕೈರವಾಡಗಿ, ಮೂಗನೂರ ಮತ್ತು ಸೂರಳಿಕಲ್ ಗ್ರಾಮಗಳಲ್ಲಿ ಅಕ್ರಮ ಮರಳು ಸಂಗ್ರಹಿಸಿ ರಾತ್ರಿ ವೇಳೆಯಲ್ಲಿ ಟ್ರ್ಯಾಕ್ಟರ್‌, ಟಿಪ್ಪರಗಳ ಮೂಲಕ ಮರಳನ್ನು ಬಾಗಲಕೋಟೆ ಸೇರಿ ವಿವಿಧ ಗ್ರಾಮಗಳಿಗೆ ಸಾಗಿಸಲಾಗುತ್ತಿದೆ.

ಇತ್ತೀಚೆಗೆ ಲೋಕಾಯುಕ್ತ ಅಧಿಕಾರಿಗಳು ಮಲಪ್ರಭಾ ನದಿಯ ದಡದಲ್ಲಿ ಪಟ್ಟಾ ಜಮೀನುಗಳಲ್ಲಿ ಸರ್ಕಾರದ ಅನುಮತಿ ಇಲ್ಲದೆ ಅಕ್ರಮವಾಗಿ ಮರಳನ್ನು ಸಂಗ್ರಹಿಸಿ ಸಾಗಿಸುತ್ತಿದ್ದ ಪಟ್ಟಾ ಜಮೀನುಗಳ ಮೇಲೆ ದಾಳಿ ನಡೆಸಿ, ಹಲವರ ಮೇಲೆ ಪ್ರಕರಣ ದಾಖಲಿಸಿದರೂ ದಂಧೆಕೋರರು ಪಾಠ ಕಲಿತಿಲ್ಲ. ಅಕ್ರಮವಾಗಿ ಸಂಗ್ರಹಿಸಿದ ಮರಳನ್ನು ಆಯಾ ಗ್ರಾಮಗಳಲ್ಲಿ ಸಂಗ್ರಹಿಸಲಾಗುತ್ತಿದೆ. ಆದರೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾತ್ರ ಇತ್ತ ಕಡೆ ಗಮನ ಹರಿಸದಿರುವುದು ಗ್ರಾಮಸ್ಥರಲ್ಲಿ ಅನುಮಾನ ಹುಟ್ಟು ಹಾಕಿದೆ.ಹೆಚ್ಚಿನ ದರಕ್ಕೆ ಮರಳು ಮಾರಾಟ:

ಅಕ್ರಮವಾಗಿ ಸಂಗ್ರಹಿಸಿ ಮಾರುತ್ತಿರುವ ದಂಧೆಕೋರರು ಮರಳನ್ನು ಒಂದು ಟ್ರ್ಯಾಕ್ಟರ್‌ ಮರಳಿಗೆ 8 ರಿಂದ 10 ಸಾವಿರ, ಇನ್ನೂ ಒಂದು ಟಿಪ್ಪರ ಮರಳಿಗೆ 25 ರಿಂದ 30 ಸಾವಿರ ರೂ.ಗಳಿಗೆ ಮಾರುತ್ತಿದ್ದಾರೆ ಎಂಬ ಮಾಹಿತಿಯಿದೆ. ಕೈರವಾಡಗಿ ಹಾಗೂ ಗಂಗೂರ ಗ್ರಾಮಗಳ ಮಧ್ಯೆ ಇರುವ ಮಲಪ್ರಭಾ ನದಿಯಲ್ಲಿ ಹಗಲಲ್ಲಿಯೇ ಜೆಸಿಬಿ ಮೂಲಕ ಹತ್ತಾರು ಟ್ರ್ಯಾಕ್ಟರಗಳನ್ನು ಬಳಸಿ ರಾಜಾರೋಷವಾಗಿ ಅಕ್ರಮ ಮರಳನ್ನು ಸಾಗಾಣಿಕೆ ಮಾಡು ದೃಶ್ಯ ಸೋಮವಾರವು ಕಂಡು ಬಂದಿತು.

ಮೂಗನೂರ ಗ್ರಾಮದ ಹತ್ತಿರ ಜಮೀನೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳು ಅಡ್ಡಾ ಮೇಲೆ ಹುನಗುಂದ ತಹಸೀಲ್ದಾರ್‌ ಪ್ರದೀಪಕುಮಾರ ಹಿರೇಮಠ ದಾಳಿ ಮಾಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಕೈರವಾಡಗಿ, ಮೂಗನೂರ, ಸೂರಳಿಕಲ್ ಗ್ರಾಮಗಳ ಹತ್ತಿರ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಮರಳು ಸಾಗಣೆ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮಗಳನ್ನು ತಗೆದುಕೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.


ಮೂಗನೂರ ಗ್ರಾಮದಲ್ಲಿ ರೈತರೊಬ್ಬರ ಜಮೀನಿನ (ಸರ್ವೇ ನಂ.2/3ರಲ್ಲಿ) ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳನ್ನು ದಾಳಿ ನಡೆಸಿ ವಶಕ್ಕೆ ಪಡೆಯಲಾಗಿದೆ. ಜಮೀನಿನ ಮಾಲೀಕನ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

- ಪ್ರದೀಪಕುಮಾರ ಹಿರೇಮಠ, ತಹಸೀಲ್ದಾರ್‌ ಹುನಗುಂದ