ಸಾರಾಂಶ
ಕಾರ್ಕಳ ತಾಲೂಕಿನ ಕನ್ನಡ ಸಂಘ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕಾರ್ಕಳ ಸಮಿತಿ ಮತ್ತು ಅಲ್ಲಮಪ್ರಭು ಪೀಠ ಕಾಂತಾವರ ಸಹಯೋಗದಲ್ಲಿ ಇತ್ತೀಚೆಗೆ ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ತಿಂಗಳ ಉಪನ್ಯಾಸ ‘ಅರಿವು ತಿಳಿವು’ ಕಾರ್ಯಕ್ರಮದಲ್ಲಿ ‘ತೈತ್ತಿರೀಯ ಉಪನಿಷತ್’ ಕುರಿತು ಉಪನ್ಯಾಸ ನಡೆಯಿತು.
ಕನ್ನಡಪ್ರಭ ವಾರ್ತೆ ಕಾರ್ಕಳ
ಶೈಕ್ಷಣಿಕ ಮನೋವಿಜ್ಞಾನದ ನೆಲೆಯಲ್ಲಿ ಬಹಳ ಒಳನೋಟವನ್ನು ನೀಡುವ ಉಪನಿಷತ್ತೇ ‘ತೈತ್ತಿರೀಯ ಉಪನಿಷತ್’. ಲೌಕಿಕವನ್ನು ಅಲ್ಲಗಳೆಯದೆ ಅಲೌಕಿಕ ಚಿಂತನೆಗಳ ರಹಸ್ಯವನ್ನು ಪ್ರಾಚೀನ ಉಪನಿಷತ್ತುಗಳು ನಮಗೆ ತಿಳಿಸಿಕೊಡುತ್ತವೆ ಎಂದು ವಿದ್ವಾಂಸ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಹೇಳಿದರು.ಅವರು ಕಾರ್ಕಳ ತಾಲೂಕಿನ ಕನ್ನಡ ಸಂಘ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕಾರ್ಕಳ ಸಮಿತಿ ಮತ್ತು ಅಲ್ಲಮಪ್ರಭು ಪೀಠ ಕಾಂತಾವರ ಸಹಯೋಗದಲ್ಲಿ ಇತ್ತೀಚೆಗೆ ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ನಡೆದ ತಿಂಗಳ ಉಪನ್ಯಾಸ ‘ಅರಿವು ತಿಳಿವು’ ಕಾರ್ಯಕ್ರಮದಲ್ಲಿ ಅವರು ‘ತೈತ್ತಿರೀಯ ಉಪನಿಷತ್’ ಕುರಿತು ಉಪನ್ಯಾಸ ನೀಡಿದರು.ತೈತ್ತಿರೀಯ ಉಪನಿಷತ್ತಿನಲ್ಲಿ ಶಿಕ್ಷಾವಲ್ಲಿ, ಆನಂದವಲ್ಲಿ ಮತ್ತು ಭ್ರಗುವಲ್ಲಿ ಎಂಬ ಮೂರು ಪ್ರಮುಖ ಭಾಗಗಳಿವೆ. ಶಿಕ್ಷಾವಲ್ಲಿಯಲ್ಲಿ ಶಿಕ್ಷಣ ಎಂದರೆ ಏನು? ಗುರುಶಿಷ್ಯ ಸಂಬಂಧದ ವಿವರಣೆ, ಕಲಿಕಾ ವಿಧಾನದ ಬಗ್ಗೆ ಜ್ಞಾನವನ್ನು ಹೊಂದಿ ಅದನ್ನು ಮುಂದಿನ ಪೀಳಿಗೆಗೆ ದಾಟಿಸುವ ಬಗ್ಗೆ ಹೀಗೆ ಶಿಕ್ಷಣದ ಕುರಿತಾದ ಸಂಪೂರ್ಣ ಮಾಹಿತಿಯಿದೆ. ಆನಂದವಲ್ಲಿಯಲ್ಲಿ ಪರಬ್ರಹ್ಮ ಸ್ವರೂಪದ ಆಧ್ಯಾತ್ಮಿಕ ಚಿಂತನೆಯಿದ್ದು, ಭೃಗುವಲ್ಲಿಯಲ್ಲಿ ಪರಬ್ರಹ್ಮನನ್ನು ಅರಿತುಕೊಂಡು ಬ್ರಹ್ಮಾನಂದವನ್ನು ಹೊಂದುವ ಬಗ್ಗೆ ವಿವರಿಸಲಾಗಿದೆ ಎಂದರು.
ಅತಿಥಿಗಳನ್ನು ಮತ್ತು ಕಾರ್ಯಕ್ರಮದ ಪ್ರಾಯೋಜಕರಾದ ಕೆ. ಕಮಲಾಕ್ಷ ಕಾಮತ್ ಅವರನ್ನು ಸನ್ಮಾನಿಸಲಾಯಿತು. ಡಾ.ನಾ.ಮೊಗಸಾಲೆ, ನಿತ್ಯಾನಂದ ಪೈ ಹಾಗೂ ಮಿತ್ರಪ್ರಭಾ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಾರ್ವರಿ ಪ್ರಾರ್ಥಿಸಿದರು. ವೀಣಾ ರಾಜೇಶ್ ಅತಿಥಿಗಳನ್ನು ಪರಿಚಯಿಸಿದರು. ಶೈಲಜಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಸದಾನಂದ ನಾರಾವಿ ಸ್ವಾಗತಿಸಿದರು. ಗಣೇಶ್ ಜಾಲ್ಸೂರು ವಂದಿಸಿದರು.