ಬಿಲ್‌ ಪಾವತಿಸದ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಿ: ರೈತ ಮುಖಂಡರ ಆಗ್ರಹ

| Published : Jul 29 2025, 02:08 AM IST

ಬಿಲ್‌ ಪಾವತಿಸದ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಿ: ರೈತ ಮುಖಂಡರ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಮುಧೋಳ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಸೋಮವಾರ ಜಿಲ್ಲಾಧಿಕಾರಿ ಸಂಗಪ್ಪ ಅಧ್ಯಕ್ಷತೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಗೋಯಲ್ ಉಪಸ್ಥಿತಿಯಲ್ಲಿ ಪ್ರಮುಖ ಇಲಾಖೆ ಅಧಿಕಾರಿಗಳ ಜೊತೆಗೂಡಿ ಮುಧೋಳ‌ ರೈತ ಸಂಘ ಹಾಗೂ ರೈತ ಮುಖಂಡರ ಜೊತೆಗೆ ಸಭೆ ನಡೆಸಿದರು.

ಕನ್ನಡ ಪ್ರಭವಾರ್ತೆ ಮುಧೋಳ

ಮುಧೋಳ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಸೋಮವಾರ ಜಿಲ್ಲಾಧಿಕಾರಿ ಸಂಗಪ್ಪ ಅಧ್ಯಕ್ಷತೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಗೋಯಲ್ ಉಪಸ್ಥಿತಿಯಲ್ಲಿ ಪ್ರಮುಖ ಇಲಾಖೆ ಅಧಿಕಾರಿಗಳ ಜೊತೆಗೂಡಿ ಮುಧೋಳ‌ ರೈತ ಸಂಘ ಹಾಗೂ ರೈತ ಮುಖಂಡರ ಜೊತೆಗೆ ಸಭೆ ನಡೆಸಿದರು.

ರೈತ ಮುಖಂಡರಾದ ಬಸವಂತಪ್ಪ ಕಾಂಬಳೆ, ಸುಭಾಸ ಶಿಬರೂರ ಮಾತನಾಡಿ, ಜಿಲ್ಲೆಯಲ್ಲಿರುವ 14 ಸಕ್ಕರೆ ಕಾರ್ಖಾನೆಗಳ ಪೈಕಿ 13 ಕಾರ್ಖಾನೆಗಳು 2024-25ನೇ ಹಂಗಾಮಿಗೆ 1,52,37,243 ಮೆಟ್ರಿಕ್ ಟನ್ ಸಕ್ಕರೆ ನುರಿಸಿದ್ದು, ಕಬ್ಬು ಕಳುಹಿಸಿ 14 ದಿನದೊಳಗೆ ಬಿಲ್‌ ಪಾವತಿಸಬೇಕೆಂಬ ನಿಯಮ ಇದ್ದರೂ ಕೆಲ ಕಾರ್ಖಾನೆಗಳು ನಾಲ್ಕೈದು ತಿಂಗಳಾದರೂ ಪೂರ್ಣ ಪ್ರಮಾಣದಲ್ಲಿ ಬಿಲ್‌ ಪಾವತಿಸಿಲ್ಲ ಇಂತಹ ಕಾರ್ಖಾನೆ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲು ಒತ್ತಾಯಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಈಗಾಗಲೇ ಜಿಲ್ಲೆಯ 12 ಸಕ್ಕರೆ ಕಾರ್ಖಾನೆಯವರು ಎಫ್.ಆರ್.ಪಿ ಪ್ರಕಾರ ಶೇ.100ರಷ್ಟು ಪಾವತಿ ಮಾಡಿದ್ದು, ಕೇವಲ ಜಮಖಂಡಿ ಶುಗರ್ ಮಾತ್ರ ₹18.50 ಕೋಟಿ ರೈತರ ಬಾಕಿ ಕೊಡಬೇಕಿದೆ. ಶೀಘ್ರ ಈ ಹಣ ಪಾವತಿಸಲು ಕ್ರಮವಹಿಸಲು ಕಾರ್ಖಾನೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ, ಹೈಕೋರ್ಟ್ ದಲ್ಲಿ ಸ್ಟೇ ಇದ್ದು, ತೆರುವುಗೊಳಿಸಲು ಸಕ್ಕರೆ ಆಯುಕ್ತರು ಹಾಗೂ ಅಡ್ವೋಕೇಟ್ ಜನರಲ್ ಅವರಿಗೂ ವಿನಂತಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ರೈತ ಮುಖಂಡರು ಮಾತನಾಡಿ, ರಿಕವರಿ ಆಧರಿಸಿ ಎಫ್‌.ಆರ್.ಪಿ ದರ ನಿಗದಿ, ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚ ಅನವಶ್ಯಕ ಕಡಿತ, ವೇ ಬ್ರಿಡ್ಜ್‌ದಲ್ಲಿ ತೂಕದಲ್ಲಿ ಮೋಸ, ರೈತರ ಜೊತೆಗೆ ಕರಾರು ಒಪ್ಪಂದ, ರೈತರಿಂದ ಅನವಶ್ಯಕ ಲಗಾಣಿ ವಸೂಲಿ, ಸರ್ಕಾರದಿಂದಲೇ ವೇ ಬ್ರಿಡ್ಜ್‌ ಸ್ಥಾಪಿಸಬೇಕು.ಬಿಲ್‌ ತಡವಾಗಿ ಪಾವತಿಸಿದ ಕಾರ್ಖಾನೆಯಿಂದ ಬಡ್ಡಿ ವಸೂಲಿ ಮಾಡಬೇಕು. ಸಕ್ಕರೆ ದರದಲ್ಲಿ ಗೃಹೋಪಯೋಗಿ ಹಾಗೂ ವಾಣಿಜ್ಯ ದರ ನಿಗದಿ, ಸೀನಿಯಾರಿಟಿ‌ ಆಧರಿಸಿ ಕಬ್ಬು ನುರಿಸಲು ಅನುಮತಿ ಇತ್ಯಾದಿ ವಿಷಯಗಳ ಬಗ್ಗೆ ಸಕ್ಕರೆ ಸಚಿವರ ಹಾಗೂ ಸಕ್ಕರೆ ಆಯುಕ್ತರ ಅಧ್ಯಕ್ಷತೆಯಲ್ಲಿ ನಮ್ಮ ಜಿಲ್ಲೆಯಲ್ಲಿ ಸಭೆ ನಡೆಸಿ ಚರ್ಚೆ ಮಾಡಲು ಒತ್ತಾಯಿಸಿದರು. ಬರುವ ಹಂಗಾಮಿನಲ್ಲಿ‌ ಕಾರ್ಖಾನೆ ಮಾಲೀಕರು, ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಲು ಮನವಿ ಮಾಡಿದರು.

ನಿಯಮಾನುಸಾರ ಸರ್ಕಾರ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಸಕಾರಾತ್ಮಕವಾಗಿ ಪರಿಹಾರ ಕಂಡುಕೊಳ್ಳುವುದಾಗಿ ಜಿಲ್ಲಾಧಿಕಾರಿಗಳು, ಪೋಲಿಸ್ ವರಿಷ್ಠಾಧಿಕಾರಿಗಳು ಭರವಸೆ ನೀಡಿದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ರೈತರನ್ನುದ್ದೇಶಿಸಿ ಮಾತನಾಡಿ, ರೈತರ ಕಬ್ಬಿಣ ಹಾಗೂ ಇತರೆ ಸಮಸ್ಯೆಗಳ ಬಗ್ಗೆ ಸಂಪೂರ್ಣ ಅಂಶಗಳನ್ನು ಆಲಿಸಲಾಗಿದ್ದು, ಕಾನೂನು ಸುವ್ಯವಸ್ಥಿತ ಕಾಪಾಡಲು ನಮ್ಮ ಇಲಾಖೆ ಸದಾ ಸಿದ್ಧರಿದ್ದು, ಜಿಲ್ಲಾಡಳಿತ ಜೊತೆಗೆ ತಮ್ಮ ಬೇಡಿಕೆ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು.

ರೈತ ಮುಖಂಡರು ಮಾತನಾಡಿ, ಜಿಲ್ಲೆಯಲ್ಲಿ ಕಳಪೆ ಗೊಬ್ಬರ, ಬೀಜ ವಿತರಣೆ ಹಾಗೂ ಅನಧಿಕೃತವಾಗಿ ಸಂಗ್ರಹ ಮಾಡಿ ಹೆಚ್ಚಿನ ದರದಲ್ಲಿ ಬೀಜ ಗೊಬ್ಬರ ಮಾರಾಟ ಮಾಡುವ ಬಗ್ಗೆ ಪ್ರಸ್ತಾಪಿಸಿದಾಗ ಜಿಲ್ಲಾಧಿಕಾರಿ ಸಭೆಯಲ್ಲಿದ್ದ ಜಂಟಿ ನಿರ್ದೇಶಕರು ಕೃಷಿ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿದರಲ್ಲದೆ .ತಪ್ಪಿತಸ್ಥ ಮಾರಾಟಗಾರರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದರು. ಈ ಹಿಂದೆ ನೆರೆ ಪ್ರವಾಹದ ಸಮಯದಲ್ಲಿ ಬೆಳೆ ಹಾನಿ ಪರಿಹಾರ, ರೈತರ ಪ್ರಮುಖ ಸಮಸ್ಯೆ ಹಾಗೂ ವಿಷಯಗಳ ಬಗ್ಗೆ ಪ್ರಸ್ತಾಪಿಸಿದಾಗ ಜಿಲ್ಲಾಧಿಕಾರಿಗಳು ರೈತರ ಪರವಾಗಿ ಕಾನೂನು ಪ್ರಕಾರ ಸೌಲಭ್ಯ ಒದಗಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳು ಶೀಘ್ರದಲ್ಲೇ ಜಿಲ್ಲೆಯ ಎಲ್ಲಾ ಕಾರ್ಖಾನೆ ಮಾಲೀಕರ ಸಭೆ ಕರೆದು ತಮ್ಮ ಸಮಸ್ಯೆ ಹಾಗೂ ಬೇಡಿಕೆ ಬಗ್ಗೆ ಚರ್ಚೆ ಮಾಡುವುದಾಗಿ ಎಂದು ರೈತರಿಗೆ ತಿಳಿಸಿದರು. ಜಿಲ್ಲಾಧಿಕಾರಿಗಳು, ಪೋಲಿಸ್ ವರಿಷ್ಠಾಧಿಕಾರಿಗಳು, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು‌, ಜಂಟಿ ನಿರ್ದೇಶಕರು, ಕೃಷಿ ಇಲಾಖೆ ಜಂಟಿ ನಿರ್ದೇಶಕರು ಆಹಾರ ಇಲಾಖೆ ಹಾಗೂ ತಹಸೀಲ್ದಾರ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು. ರೈತ ಮುಖಂಡರರಾದ ಬಸವಂತಪ್ಪ ಕಾಂಬಳೆ, ಸುಭಾಷ ಶಿಬರೂರು, ಮುತ್ತಪ್ಪ ಕೋಮಾರ, ಈರಪ್ಪ ಹಂಚಿನಾಳ, ಎ.ಜಿ‌. ಪಾಟೀಲ, ರಮೇಶ ಸಾಳುಂಕೆ, ನಾರಾಯಣ ಹವಾಲ್ದಾರ ಹಾಗೂ ವಿವಿಧ ತಾಲೂಕಿನ ರೈತ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.