ಕನ್ನಡಪ್ರಭ ವಾರ್ತೆ ಮಂಡ್ಯ
ಅನಧಿಕೃತವಾಗಿ ಮದ್ಯ ಮಾರಾಟ ಮಾಡುವ ಅಂಗಡಿಗಳ ಮೇಲೆ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಪಿ.ರವಿಕುಮಾರ್ ಸೂಚನೆ ನೀಡಿದರು.ನಗರದ ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ) ಅಧ್ಯಕ್ಷತೆ ವಹಿಸಿ ಮಾತನಾಡಿ, ಅಕ್ರಮ ಮದ್ಯ ಮಾರಾಟದ ಬಗ್ಗೆ ದೂರುಗಳು ಬರುತ್ತಿವೆ. ಸಾರ್ವಜನಿಕರ ಹಿತದೃಷ್ಟಿಯಿಂದ ಅಂತಹ ಅಂಗಡಿಗಳಿಗೆ ಕಡಿವಾಣ ಹಾಕಬೇಕು ಎಂದರು.
ಜಿಲ್ಲೆಯಲ್ಲಿ ಬಿರು ಬಿಸಿಲಿನ ಬೇಸಿಗೆಯಿಂದ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಕುಡಿಯುವ ನೀರಿಗೆ ತೊಂದರೆ ಆಗದಂತೆ ಪ್ರತಿ ಗ್ರಾಮಗಳಲ್ಲೂ ಪರಿಶೀಲನೆ ನಡಸಿ ಅಗತ್ಯ ಉಸದ್ಧ ಕುಡಿಯುವ ನೀರು ಗ್ರಾಮಸ್ಥರಿಗೆ ಒದಗಿಸಬೇಕು ಎಂದು ಸೂಚಿಸಿದರು.ಸರ್ಕಾರಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಔಷಧಿಗಳ ಕೊರತೆ ಆಗದಂತೆ ಕಲ್ಪಿಸಬೇಕು. ರಾತ್ರಿ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಬಸರಾಳು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರನ್ನು ನೇಮಿಸಬೇಕು. ಆಂಬುಲೆನ್ಸ್ ವ್ಯವಸ್ಥೆಯನ್ನು 24*7 ಕಲ್ಪಿಸುವುದಾಗಿ ತಿಳಿಸಿದರು.
ಹೆಚ್ಚು ಬಿಸಿಲು ಇರುವುದರಿಂದ ಶಾಲಾ ಮಕ್ಕಳಿಗೆ ಬೇಸಿಗೆ ಶಿಬಿರ ಆಯೋಜಿಸಿ ಮಕ್ಕಳನ್ನು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸುವಂತೆ, ಸರ್ಕಾರಿ ಶಾಲಾ- ಕಾಲೇಜುಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವಂತೆ ಕಾರ್ಯಕ್ರಮ ಆಯೋಜಿಸುವಂತೆ ಅಧಿಕಾರಿಗಳಿಗೆ ತಿಳಿ ಹೇಳಿದರು.
ವಿದ್ಯ ವಿಕಾಸ ಯೋಜನೆಯಡಿ 2025-26ನೇ ಸಾಲಿನ ಶಾಲಾ ಮಕ್ಕಳಿಗೆ ಸಮವಸ್ತ್ರ ನೀಡಬೇಕು. ತಾಪಂ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಗಳ ದಾಖಲೆ ಪರಿಶೀಲಿಸಿ ಶಾಲೆಗಳ ಖಾತೆ ಮಾಡಿಸಬೇಕು. ಶಾಲಾ-ಕಾಲೇಜು ಮಕ್ಕಳಿಗೆ ತೊಂದರೆ ಆಗದಂತೆ ಬೆಳಗ್ಗೆ ಹಾಗೂ ಸಂಜೆ ರೂಟ್ ಬಸ್‌ಗಳನ್ನು ಹೆಚ್ಚುವರಿಯಾಗಿ ಬಿಡಬೇಕುವಂತೆ ಸಾರಿಗೆ ಅಧಿಕಾರಿಗಳಿಗೆ ತಿಳಿಸಿದರು.
ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮದಡಿ ಗರ್ಭಿಣಿಯರು, ಬಾಣಂತಿಯರಿಗೆ ಮತ್ತು ಅಂಗನವಾಡಿ ಮಕ್ಕಳಿಗೆ ಉತ್ತಮ ಹಾಗೂ ಗುಣಮಟ್ಟ ಆಹಾರ ಒದಗಿಸಬೇಕು. ಬಾಣಂತಿಯರಿಗೆ ಮನೆ ಮನೆಗೆ ಆಹಾರ ಪದಾರ್ಥಗಳು ತಲುಪುವಂತೆ ಕ್ರಮವಹಿಸಬೇಕು. ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಕುರಿತು ಪ್ರತಿ ತಿಂಗಳು ಸಭೆ ನಡೆಸಿ ಯೋಜನೆಗಳ ನ್ಯೂನತೆಗಳನ್ನು ಅಧಿಕಾರಿಗಳ ಗಮನಕ್ಕೆ ತರುವಂತೆ ಸೂಚಿಸಿದರು.ಕೃಷಿ ಇಲಾಖೆಯು ಜಿಲ್ಲೆಯ ರೈತರಿಗೆ ರಸ ಗೊಬ್ಬರದ ಕೊರತೆ ಉಂಟಾಗದಂತೆ ಅಗತ್ಯ ಕ್ರಮವಹಿಸಬೇಕು. ಬಿತ್ತನೆ ಬೀಜ ವ್ಯವಸ್ಥೆ ಕಲ್ಪಿಸಬೇಕು. ಇಲಾಖೆಯಿಂದ ರೈತರಿಗೆ ಸಿಗುವ ಯೋಜನೆಗಳ ಮಾಹಿತಿ ತಿಳಿಸಲು ಪ್ರಚಾರ ಆಯೋಜನೆ ಮಾಡುವಂತೆ ಸೂಚನೆ ನೀಡಿದರು.
ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸರ್ಕಾರದ ಯೋಜನೆಯಡಿ ಜಾನುವಾರುಗಳು ಮರಣ ಹೊಂದಿದ ನಂತರ ದಾಖಲಾತಿ ಪರಿಶೀಲಿಸಿ ಸಹಾಯಧನ ನೀಡುವ ಬಗ್ಗೆ ಜನರಿಗೆ ಮಾಹಿತಿ ಹಾಗೂ ಜಾಗೃತಿ ಕಾರ್ಯಕ್ರಮ ಮಾಡಬೇಕು ಎಂದರು.ಬೇಸಿಗೆ ಸಮಯದಲ್ಲಿ ವಿದ್ಯುತ್ ಕಡಿತಗೊಳಿಸದಂತೆ ಕಾಮಗಾರಿಯನ್ನು ಕಡಿಮೆ ಸಮಯದಲ್ಲಿ ಕಾರ್ಯಗತಗೊಳಿಸಲು ಕ್ರಮ ವಹಿಸಬೇಕು. ರೈತರ ಜಮೀನಿಗೆ ವಿದ್ಯುತ್ ಕೊರತೆಯಾಗದಂತೆ ಗಮನ ಹರಿಸುವಂತೆ ತಿಳಿ ಹೇಳಿದರು.
ಸಭೆಯಲ್ಲಿ ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಜಿಪಂ ಉಪ ಕಾರ್ಯದರ್ಶಿ ಡಾ.ಶಿವಲಿಂಗಯ್ಯ, ಎಎಸ್ಪಿ ಲಕ್ಷ್ಮೀನಾರಾಯಣ್ ಪ್ರಸಾದ್ ತಹಸೀಲ್ದಾರ್ ವಿಶ್ವನಾಥ್, ತಾಪಂ ಇಒ ಲೋಕೇಶ್ ಮೂರ್ತಿ, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಸದಸ್ಯರಾದ ಎಚ್.ಕೆ.ರುದ್ರಪ್ಪ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.