ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಸುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ನಮ್ಮ ಕನ್ನಡಿಗರ ವಿಜಯಸೇನೆ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಸುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ನಮ್ಮ ಕನ್ನಡಿಗರ ವಿಜಯಸೇನೆ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀಚಾಮರಾಜೇಶ್ವರ ಉದ್ಯಾನವನ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿ ಅಕ್ರಮ ಖಾಸಗಿ ಶಾಲೆಗಳ ಭೂತ, ಬಡವರ ರಕ್ತ ಹೀರುವ ಧೂತ ಎಂದು ಬರೆದಿದ್ದ ಬ್ಯಾನರ್ ಸುಟ್ಟರು. ನಂತರ ಜಿಲ್ಲಾಡಳಿತ ಭವನಕ್ಕೆ ತೆರಳಿ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.ನಮ್ಮ ಕನ್ನಡಿಗರ ವಿಜಯಸೇನೆ ಜಿಲ್ಲಾಧ್ಯಕ್ಷ ಎಂ. ಮಂಜು ಎಂ.ನಾಯಕ ಮಾತನಾಡಿ, ಖಾಸಗಿ ಶಾಲೆಗಳನ್ನು ನಡೆಸಲು ಸಂಬಂಧಪಟ್ಟ ಇಲಾಖೆಗಳಿಂದ ಅನ್ಯಕ್ರಾಂತ, ಭೂ ಪರಿವರ್ತನೆ ಹಾಗೂ ಅಗ್ನಿ ಶಾಮಕದಳದ ವತಿಯಿಂದ ಯಾವುದೇ ಅನುಮತಿ ಪಡೆಯದೇ ಕಾನೂನು ಬಾಹಿರವಾಗಿ ಶಾಲೆಗಳನ್ನು ನಡೆಸುತ್ತಿರುವವ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಈ ಅಕ್ರಮ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿದ್ದ ಹಿನ್ನಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಜಿಲ್ಲೆಯಲ್ಲಿ ಶೇ. ೭೦ ರಷ್ಟು ಖಾಸಗಿ ಶಾಲೆಗಳು ಅಕ್ರಮವಾಗಿ ನಡೆಯುತ್ತಿದ್ದು, ಇವುಗಳಿಗೆ ಅನುಮತಿ ನೀಡಿದ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮಜರುಗಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವಿಧಾನಸೌಧ ಮುಂಭಾಗದಲ್ಲಿ ನಮ್ಮ ಸಂಘಟನೆಯ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಮ್ಮ ಕನ್ನಡಿಗರ ವಿಜಯಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ವಿಜಯಕುಮಾರ್ ಮಾತನಾಡಿದರು. ಪ್ರತಿಭಟನೆಯಲ್ಲಿ ನಮ್ಮ ಕನ್ನಡಿಗರ ವಿಜಯ ಸೇನೆಯ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನವೀನ್ ಕುಮಾರ್, ಸಂಘಟನೆಯ ಕಾರ್ಯದರ್ಶಿ ಶಿವು ಕೆಲ್ಲಂಬಳ್ಳಿ,ರಾಜ್ಯ ಪ್ರಧಾನ ಕಾರ್ಯದರ್ಶಿ ವಿನೋದ್ ಕುಮಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜಶೇಖರ, ನಗರಸಭಾ ಮಾಜಿ ಸದಸ್ಯ ಶಿವರಾಜ್, ಕೆಲ್ಲಂಬಳ್ಳಿ ಶಿವು, ಗಿರೀಶ್, ರಂಗಸ್ವಾಮಿ, ಎಸ್.ಪಿ.ಮಹೇಶ್, ವಾಸು ಹೊಂಡರಬಾಳು ಇತರರು ಭಾಗವಹಿಸಿದ್ದರು.