ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಾಯಕರ ವಿರುದ್ಧ ಟೀಕಿಸಿದರೆ ಯತ್ನಾಳ ಮಾತ್ರವಲ್ಲ ನಾನೇ ಇದ್ದರೂ ಕಠಿಣ ಕ್ರಮ ಕೈಗೊಳ್ಳಬೇಕು. ಪಕ್ಷದ ರಾಜ್ಯಾಧ್ಯಕ್ಷರು, ಶಿಸ್ತು ಮಂಡಳಿ ಅಶಿಸ್ತು ಪ್ರದರ್ಶಿಸುವರರ ವಿಷಯದಲ್ಲಿ ಸೈಲೆಂಟ್ ಆಗದೇ ಕ್ರಮ ಕೈಗೊಳ್ಳಬೇಕು ಎಂದು ನವದೆಹಲಿಯ ವಿಶೇಷ ಪ್ರತಿನಿಧಿಯಾಗಿದ್ದ ಶಂಕರಗೌಡ ಪಾಟೀಲ ಆಗ್ರಹಿಸಿದರು.ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಲು ಶ್ರಮಿಸುತ್ತೇನೆ ಎನ್ನುವ ಬಸನಗೌಡ ಪಾಟೀಲ ಯತ್ನಾಳ, ಪಕ್ಷದ ನಾಯಕರು, ಅಭ್ಯರ್ಥಿಗಳ ವಿರುದ್ಧವೇ ಮಾತನಾಡುವುದು ಯಾವ ಪಕ್ಷ ನಿಷ್ಠೆ ಎಂದು ಪ್ರಶ್ನಿಸಿದರು.
ವಿಜಯಪುರ ಜಿಲ್ಲೆಯಲ್ಲ ಮೂಲದವನಾದ ನಾನು ಸಂಘ ಪರಿವಾರ ಹಾಗೂ ಪಕ್ಷದ ಸಂಘಟನೆ ಮೂಲಕ ಪಕ್ಷಕ್ಕೆ ನಮ್ಮನ್ನು ತೊಡಗಿಸಕೊಂಡವನು. ಮನೋಹರ ಪರ್ರಿಕರ್, ಅನಂತಕುಮಾರ ಅವರೊಂದಿಗೆ ಕೆಲಸ ಮಾಡಿದ್ದೆ. ಸದಾನಂದಗೌಡ ಅವರನ್ನು ಪಕ್ಷಕ್ಕೆ ಕರೆ ತಂದುದು ನಾನೇ. ಅವರೆಲ್ಲ ಮುಖ್ಯಮಂತ್ರಿಯಾದರು, ಕೇಂದ್ರದಲ್ಲಿ ಮಂತ್ರಿಯಾದರು. ಆದರೆ ನನಗೆ ಅಧಿಕಾರ ಸಿಗಲಿಲ್ಲ. ಹಾಗಂತ ನಾನು ಯಾರನ್ನಾದರೂ ದೂರಿಲ್ಲ ಎಂದರು.ಈ ಹಿಂದೆ ನನಗೆ ಸಿಕ್ಕಿದ್ದ ರಾಜ್ಯಸಭಾ ಟಿಕೆಟ್‍ನ್ನು ಈರಣ್ಣ ಕಡಾಡಿ ಅವರಿಗೆ ಕೊಡಿಸಿದ್ದೆ. ಬೆಳಗಾವಿಯಲ್ಲಿ ಮೂರು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತಿದ್ದ ನನ್ನನ್ನು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ರಾಜಕೀಯ ಕಾರ್ಯದರ್ಶಿ, ನವದೆಹಲಿ ವಿಶೇಷ ಪ್ರತಿನಿಧಿ ಮಾಡಿದ್ದರು ಎಂದು ವಿವರಿಸಿದರು.
ಪಕ್ಷದಿಂದ ಉಚ್ಚಾಟಿತವಾಗಿದ್ದ ಯತ್ನಾಳ್ ಮರಳಿ ಪಕ್ಷಕ್ಕೆ ಸೇರುವುದಕ್ಕಾಗಿ ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರಿದ್ದರು. ಅವರ ಶಿಷ್ಯ ಎಂ.ಎಸ್.ರುದ್ರಗೌಡರ ಮೂಲಕ ಪಕ್ಷಕ್ಕೆ ಮರಳುವಾಗ ನಾನೇ ಅವರೊಂದಿಗೆ ಮಾತನಾಡಿದ್ದೆ. ಇದನ್ನೆಲ್ಲ ಯತ್ನಾಳ್ ಅರ್ಥ ಮಾಡಿಕೊಳ್ಳಬೇಕು ಎಂದರು.ಯಡಿಯೂರಪ್ಪ ಪಕ್ಷ ಬಿಟ್ಟು ಹೋಗಿದ್ದರು ಎಂದು ಟೀಕಿಸುವ ಮುನ್ನ, ಆಗ ಪಕ್ಷ ನಿಮ್ಮ ಕೈಯಲ್ಲೇ ಇತ್ತು. ನೀವೇನು ಮಾಡಿದಿರಿ ಎಂದು ಪ್ರಶ್ನಿಸಿದರೆ ಆ ಜಾಗದಲ್ಲಿ ಇದ್ದವರು ಅರಿಯಬೇಕು. ಕೆ.ಎಸ್.ಈಶ್ವರಪ್ಪ ಪಕ್ಷದ ಅಧ್ಯಕ್ಷರಾಗಿದ್ದವರು, ಪಕ್ಷದಲ್ಲಿ ಹಿರಿಯರು, ಉನ್ನತ ಸ್ಥಾನದಲ್ಲಿ ಇರುವವರು ಪಕ್ಷಕ್ಕೆ ಧಕ್ಕೆ ಆಗುವಂತೆ ಮಾತನಾಡುವುದು, ನಡೆದುಕೊಳ್ಳುವುದು ಸರಿಯಾದ ಕ್ರಮವಲ್ಲ ಎಂದರು.
ಇದೀಗ ಜಗದೀಶ ಶೆಟ್ಟರ ಬೆಳಗಾವಿವೆ ಬರುತ್ತಿರುವುದರಿಂದ ಸ್ಪರ್ಧಿಸುವ ಅರ್ಹತೆ ಇದ್ದರೂ ಅವಕಾಶ ವಂಚಿತನಾದೆ. ರಾಷ್ಟ್ರೀಯ ಪಕ್ಷದ ಶಿಸ್ತಿನ ಸಿಪಾಯಿಯಾಗಿ ನಾನು ಹೈಕಮಾಂಡ್ ನಿರ್ಧಾರ ಒಪ್ಪಬೇಕಿದೆ ಎಂದ ಅವರು, ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಪ್ರಸ್ತುತ ರಾಜಕೀಯ ಸಂದರ್ಭದಲ್ಲಿ ಆತ್ಮವಂಚನೆ ಮಾಡಿಕೊಂಡಂತೆ. ಆತ್ಮವಂಚನೆ ಮಾಡಿಕೊಂಡರೆ ಸಮಾಜ ಕಲ್ಯಾಣ ಕೆಲಸಗಳು ಆಗಲ್ಲ, ಸತ್ಯವನ್ನು ಮಾತನಾಡಬೇಕು. ರಾಜಕೀಯದಲ್ಲಿ ಇರುವವರು ಮುಂದಿನ ಪೀಳಿಗೆಗೆ ಅನುಕರಣೀಯ ನಡೆ ಅನುಸರಿಸಬೇಕು ಎಂದು ಸಲಹೆ ನೀಡಿದರು.ಪ್ರಸ್ತುತ ಸಂದರ್ಭದ ರಾಜಕೀಯ ಪರಿಸ್ಥಿತಿಯನ್ನು ಅರಿತುಕೊಂಡು ಯಡಿಯೂರಪ್ಪ ಟೀಕಾಕಾರರು ಅರ್ಥೈಸಿಕೊಳ್ಳಬೇಕು. ಕೆಲವು ಕಡೆಗಳಲ್ಲಿ ಹಲವು ಆಕಾಂಕ್ಷಿಳಿರುತ್ತಾರೆ. ಅವಕಾಶ ಒಬ್ಬರಿಗೆ ಮಾತ್ರ ಕೊಡಲು ಸಾಧ್ಯ. ಹಾಗಂತ ಇತರರನ್ನು ವಿರೋಧಿಸಿದರು, ಕಡೆಗಣಿಸಿದರು ಎಂದು ಯಡಿಯೂರಪ್ಪ ಅವರನ್ನು ಟೀಕಿಸುವುದು ಅರ್ಥಹೀನ ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ಮುಖಂಡ ವಿಜುಗೌಡ ಪಾಟೀಲ, ಮಂಜುನಾಥ ವಂದಾಲ, ಗುರುಶಾಂತ ನಿಡೋಣಿ ಸೇರಿದಂತೆ ಮುಂತಾದವರು ಇದ್ದರು.