ನಿಯಮ ಉಲ್ಲಂಘಿಸುವ ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳಿ

| Published : Feb 11 2024, 01:49 AM IST

ನಿಯಮ ಉಲ್ಲಂಘಿಸುವ ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಜನರು-ಜಾನುವಾರಿಗೆ ಕುಡಿಯಲು ನೀರು ಇಲ್ಲದಿರುವಾಗ ಕೃಷಿ ಜಮೀನಿನಲ್ಲಿ ಬೋರ್‌ವೆಲ್‌ ಕೊರೆದು ಕೈಗಾರಿಕೆಗಳಿಗೆ ನೀರು ಸಾಗಿಸುತ್ತಿರುವ ಕುರಿತು ಕುಡತಿನಿ ಪಪಂ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಜೆಟ್‌ ಮಂಡನೆ ಸಭೆಯಲ್ಲಿ ಈ ಕುರಿತು ಚರ್ಚಿಸಿ, ನಿಯಮ ಉಲ್ಲಂಘಿಸುವ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಕುರುಗೋಡು: ಬರದ ನಡುವೆ ಬೋರ್‌ವೆಲ್‌ ಕೊರೆದು ಕಾರ್ಖಾನೆಗಳಿಗೆ ನೀರು ಸಾಗಿಸಲಾಗುತ್ತಿದೆ. ಕಾನೂನು ಉಲ್ಲಂಘಿಸುವ ಕಾರ್ಖಾನೆಗಳ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಕುಡತಿನಿ ಪಪಂ ಸದಸ್ಯರು ಆಗ್ರಹಿಸಿದ್ದಾರೆ.ಸಮೀಪದ ಕುಡತಿನಿ ಪಟ್ಟಣ ಪಂಚಾಯಿತಿಯ ಸಭಾಂಗಣದಲ್ಲಿ ಗುರುವಾರ ನಡೆದ 2024-25ನೇ ಸಾಲಿನ ಬಜೆಟ್ ಮಂಡನೆ ಸಭೆಯಲ್ಲಿ ಈ ಕುರಿತು ಚರ್ಚಿಸಲಾಯಿತು. ಬೇಸಿಗೆ ಆರಂಭವಾಗುತ್ತಿದೆ. ಕುಡಿಯುವ ನೀರಿಗೂ ಬರ ಆವರಿಸುತ್ತಿದೆ. ನಿತ್ಯ ಪಟ್ಟಣದ ಜನರು ತತ್ತರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದರೋಜಿ ಕೆರೆ ಪಕ್ಕದಲ್ಲಿ 4 ಹಾಗೂ ತಿಮ್ಮಲಾಪುರದಲ್ಲಿ 4 ಬೋರ್‌ವೆಲ್ ಕೊರೆಯಿಸಿ ಕುರುಗೋಡು ರಸ್ತೆಯಲ್ಲಿ ಇರುವ ಕಾರ್ಖಾನೆಗಳಿಗೆ ನೀರು ಪೂರೈಸಲಾಗುತ್ತಿದೆ. ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಪಪಂ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ರಾಜಶೇಖರ್ ಆಗ್ರಹಿಸಿದರು.ನೀರಾವರಿ ಇಲಾಖೆ ಹಾಗೂ ಜಿಲ್ಲಾಧಿಕಾರಿ ಆದೇಶವಿಲ್ಲದೆ ಕೃಷಿ ಜಮೀನಿನ ನೀರನ್ನು ಕೈಗಾರಿಕೆಗಳಿಗೆ ಸಾಗಿಸುವುದು ಕಾನೂನುಬಾಹಿರ. ಆದ್ದರಿಂದ ಪಪಂ ಆಡಳಿತಾತ್ಮಕ ಅಧಿಕಾರಿಗಳು ನೋಟಿಸ್‍ ಜಾರಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.ಕುಡತಿನಿ ಪಟ್ಟಣದ ಸುತ್ತ ಎಂಟಕ್ಕೂ ಅಧಿಕ ಬೃಹತ್, ಸಣ್ಣ ಪ್ರಮಾಣದ ಕೈಗಾರಿಕೆಗಳಿವೆ. ಇವು ಹೆಚ್ಚಿನ ಧೂಳು, ಕಪ್ಪು ಹೊಗೆಯನ್ನು ಹೊರ ಬಿಡುವುದರಿಂದ ಜನರು ರೋಗಗಳಿಗೆ ಒಳಗಾಗುತ್ತಿದ್ದಾರೆ ಎಂದು ಪಪಂ ಸದಸ್ಯರಾದ ಬಾಬು ರಾಮಲಿಂಗಪ್ಪ, ಹಾಲಪ್ಪ ಆರೋಪಿಸಿದರು.

15ನೇ ವಾರ್ಡ್‌ ಸದಸ್ಯೆ ರತ್ನಮ್ಮ, ಇಂದಿರಾ ನಗರದಲ್ಲಿನ ಮಹಿಳೆಯರ ಸಾಮೂಹಿಕ ಶೌಚಾಲಯಕ್ಕೆ ಕಳೆದ 5 ವರ್ಷಗಳಿಂದ ನೀರು, ವಿದ್ಯುತ್ ಇತರ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಪಪಂ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದಲ್ಲಿನ ಸಾರ್ವಜನಿಕರ ಮನೆ, ನಿವೇಶನ ಇತರ ಆಸ್ತಿಗಳ ನೋಂದಣಿ ಕಾರ್ಯವನ್ನು ಪಂಚಾಯಿತಿ ಅಧಿಕಾರಿಗಳು ಹಲವು ವರ್ಷಗಳಿಂದ ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದರಿಂದ ಜನರು ಪರದಾಡುತ್ತಿದ್ದಾರೆ. ಜನರ ಅನುಕೂಲಕ್ಕಾಗಿ ನೋಂದಣಿ ಕಾರ್ಯವನ್ನು ತ್ವರಿತವಾಗಿ ಆರಂಭಿಸಬೇಕು ಎಂದು ಸದಸ್ಯ ಸುನೀಲ್‍ಕುಮಾರ್ ಒತ್ತಾಯಿಸಿದರು.

ಮಾಲಿನ್ಯಕಾರಕ ಕೈಗಾರಿಕೆಗಳಿಗೆ ನೋಟಿಸ್‍ ಜಾರಿ ಮಾಡಿ ಫೆ. 20ರಂದು ಎಲ್ಲ ಕೈಗಾರಿಕೆಗಳ ಮಾಲೀಕರ ಸಾರ್ವಜನಿಕರ ಸಮ್ಮುಖದಲ್ಲಿ ಸಭೆ ನಡೆಸಿ ಕಾನೂನು ಉಲ್ಲಂಘನೆ ಮಾಡುವ ಕೈಗಾರಿಕೆಗಳ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾಗುವುದು. ಪಟ್ಟಣದಲ್ಲಿನ ಎಲ್ಲ ವಾರ್ಡ್‌ಗಳಲ್ಲಿನ ನೀರಿನ ಸಮಸ್ಯೆಯ ನಿವಾರಣೆಗೆ ತಕ್ಷಣ ಕ್ರಮ ವಹಿಸಲಾಗುವುದು ಎಂದು ಪಪಂ ಆಡಳಿತಾಧಿಕಾರಿ ಗುರುರಾಜ್‌ ಪ್ರತಿಕ್ರಿಯಿಸಿದರು.

ಪಪಂ ಆಡಳಿತಾತ್ಮಕ ಅಧಿಕಾರಿ ಗುರುರಾಜ್, ಮುಖ್ಯಧಿಕಾರಿ ತೀರ್ಥಪ್ರಸಾದ್, ಸದಸ್ಯರಾದ ರಾಜಶೇಖರ್, ಮಂಜುನಾಥ, ಪಂಪಾಪತಿ, ಶಂಕ್ರಮ್ಮ, ಸದಸ್ಯರಾದ ದುಗ್ಗಪ್ಪ, ಎಂಜಿನಿಯರ್ ಶಾರದಾ, ಪಂಚಾಯಿತಿ ಸಿಬ್ಬಂದಿ ಇದ್ದರು.