ಸಾರಾಂಶ
ಜನಾಕ್ರೋಶದ ಬಿಸಿ ಸರ್ಕಾರಕ್ಕೆ ತಟ್ಟಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಬೆಂಗಳೂರನ್ನು ಬಿಟ್ಟು, ಬೆಳಗಾವಿ ಸೇರಿದಂತೆ ಬೇರೆ ಬೇರೆ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.
ದಾವಣಗೆರೆ: ಮೂರನೇ ಹಂತದ ಜನಾಕ್ರೋಶ ಯಾತ್ರೆ ದಾವಣಗೆರೆಯಿಂದ ಆರಂಭವಾಗಿ ಹಾವೇರಿ ಸೇರಿದಂತೆ ಹತ್ತು ಜಿಲ್ಲೆಯಲ್ಲಿ ಸಂಚರಿಸಲಿದೆ. ಜನಾಕ್ರೋಶದ ಬಿಸಿ ಸರ್ಕಾರಕ್ಕೆ ತಟ್ಟಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಬೆಂಗಳೂರನ್ನು ಬಿಟ್ಟು, ಬೆಳಗಾವಿ ಸೇರಿದಂತೆ ಬೇರೆ ಬೇರೆ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವ್ಯಂಗ್ಯವಾಡಿದರು.
ನಗರದ ಹೊರವಲಯದ ಅಪೂರ್ವ ರೆಸಾರ್ಟ್‌ನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಜನಾಕ್ರೋಶ ಯಾತ್ರೆ ಕುರಿತಂತೆ ಅವರು ಮಾತನಾಡಿದರು. ದಾವಣಗೆರೆ ಯಾತ್ರೆಯಲ್ಲೂ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಉಳಿದ 10 ಜಿಲ್ಲೆಗಳಲ್ಲೂ ಇದೇ ರೀತಿ ಸ್ಪಂದನೆ ಸಿಗುವ ವಿಶ್ವಾಸವಿದೆ ಎಂದರು.
ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಸಿ, ಅಪಮಾನ ಮಾಡಿದ್ದು ರಾಜ್ಯಾದ್ಯಂತ, ದೇಶಾದ್ಯಂತ ಗಂಭೀರ ಚರ್ಚೆಯಾಗುತ್ತಿದೆ. ಮುಖ್ಯಮಂತ್ರಿ ಈ ವಿಚಾರ ಹುಡುಗಾಟಿಕೆ ಮಾಡದೇ, ಗಂಭೀರವಾಗಿ ಪರಿಗಣಿಸಬೇಕು. ಯಾರೋ ಇಬ್ಬರು ವಿದ್ಯಾರ್ಥಿಗಳ ಮೇಲೆ ಆಗಿರುವ ವಿಚಾರ ಇದಲ್ಲ. ಇಡೀ ಸಮುದಾಯ ಬೇಸರಗೊಂಡಿದ್ದು, ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ಎಲ್ಲ ಜಿಲ್ಲೆಗಳಿಗೆ ಭೇಟಿ:
ನಮ್ಮ ನಮ್ಮಲ್ಲೇ ಇರುವ ಭಿನ್ನಾಭಿಪ್ರಾಯ ಬದಿಗಿಟ್ಟು, ಬಿಜೆಪಿಯನ್ನು ಬಲಗೊಳಿಸಲು ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ ಪ್ರತಿ ಜಿಲ್ಲೆಗೂ ಪ್ರವಾಸ ಮಾಡಿ, ನಾಯಕರನ್ನು ಭೇಟಿ, ಗೊಂದಲ, ಸಮಸ್ಯೆ ಪರಿಹರಿಸಿಕೊಳ್ಳುವ ಕೆಲಸ ಮಾಡುತ್ತೇನೆ ವಿಜಯೇಂದ್ರ ಸಭೆಯಲ್ಲಿ ಹೇಳಿದರು.
ಯಾತ್ರೆ ಬಳಿಕ ಸ್ವತಃ ನಾನೇ ದಾವಣಗೆರೆ ಸೇರಿದಂತೆ ರಾಜ್ಯದ ಪ್ರತಿ ಜಿಲ್ಲೆಗೂ ಭೇಟಿ ನೀಡಿ, ನಾಯಕರ ಮಧ್ಯೆ ಇರುವ ಸಮಸ್ಯೆ ಪರಿಹರಿಸುವ ಕೆಲಸ ಮಾಡುತ್ತೇನೆ. ನಮ್ಮೆಲ್ಲರ ಗುರಿ ರಾಜ್ಯದಲ್ಲಿ ಬಿಜೆಪಿಯನ್ನು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ತರುವುದಾಗಿದೆ ಎನ್ನುತ್ತಿದ್ದಂತೆ ಸಭೆಯಲ್ಲಿ ಕರತಾಡನ ಮೊಳಗಿತು.
ದಾವಣಗೆರೆ ಜಿಲ್ಲೆ ಅಭಿವೃದ್ಧಿಗೆ ಬಿಜೆಪಿ ಸರ್ಕಾರವಿದ್ದಾಗ, ಕಾಂಗ್ರೆಸ್ ಆಳ್ವಿಕೆಯಲ್ಲಿ ಯಾರು ಎಷ್ಟು ಅನುದಾನ ನೀಡಿದ್ದರು, ಯಾವೆಲ್ಲಾ ಯೋಜನೆಗಳನ್ನು ಕೊಟ್ಟಿದ್ದರು, ಎಷ್ಟರಮಟ್ಟಿಗೆ ಜಿಲ್ಲೆಯನ್ನು ಅಭಿವೃದ್ಧಿಪಡಿಸಿದ್ದರೆಂಬ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ಸಿನ ಯಾರೇ ಆಗಿದ್ದರೂ ಬಹಿರಂಗ ಚರ್ಚೆಗೆ ಬರಲಿ. ನಾವೂ ಎಲ್ಲಾ ಮಾಹಿತಿ ಸಮೇತ ಚರ್ಚೆಗೆ ಬರುತ್ತೇವೆ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಸವಾಲು ಹಾಕಿದರು.
ಚಿತ್ರದುರ್ಗ ಸಂಸದ, ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಮುಖಂಡರಾದ ಮಾಡಾಳ್ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ, ಚಂದ್ರಶೇಖರ ಪೂಜಾರ, ಬಿ.ಎಂ.ಸತೀಶ ಕೊಳೇನಹಳ್ಳಿ, ಪಿ.ಸಿ.ಶ್ರೀನಿವಾಸ ಭಟ್ ಇತರರು ಇದ್ದರು.