ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಕ್ಕೆ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಸಿ.ಸತ್ಯಭಾಮ

| Published : Jun 23 2024, 02:01 AM IST

ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಕ್ಕೆ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಸಿ.ಸತ್ಯಭಾಮ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಉತ್ತಮಪಡಿಸಿ ರಾಜ್ಯಮಟ್ಟದಲ್ಲಿ ಉನ್ನತ ಸ್ಥಾನ ಪಡೆಯುವ ನಿಟ್ಟಿನಲ್ಲಿ ಪ್ರಾರಂಭದಿಂದಲೇ ನಿಗಾ ವಹಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸತ್ಯಭಾಮ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹಾಸನದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ಅಧಿಕಾರಿಗಳಿಗೆ ಸೂಚನೆ । ಜಿಲ್ಲಾಮಟ್ಟದ ಅಧಿಕಾರಿಗಳ ಜತೆ ಸಭೆ । ಮಕ್ಕಳಿಗೆ ಅಗತ್ಯ ಪಠ್ಯ ಸಾಮಗ್ರಿ ನೀಡಿ

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಉತ್ತಮಪಡಿಸಿ ರಾಜ್ಯಮಟ್ಟದಲ್ಲಿ ಉನ್ನತ ಸ್ಥಾನ ಪಡೆಯುವ ನಿಟ್ಟಿನಲ್ಲಿ ಪ್ರಾರಂಭದಿಂದಲೇ ನಿಗಾ ವಹಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸತ್ಯಭಾಮ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿ, ಮಕ್ಕಳಿಗೆ ಪಠ್ಯ ಪುಸ್ತಕ ವಿತರಣೆ ಹಾಗೂ ಶೂ ಮತ್ತು ಸಾಕ್ಸ್ ಖರೀದಿಯಲ್ಲಿ ಗುಣಮಟ್ಟಕ್ಕೆ ಒತ್ತು ನೀಡುವಂತೆ ತಿಳಿಸಿದರಲ್ಲದೆ, ಯಾವುದೇ ದೂರುಗಳು ಬರದಂತೆ ನಿಗಾವಹಿಸಲು ಸೂಚನೆ ನೀಡಿದರು.

ಬಿಸಿಯೂಟದಲ್ಲಿ ಶಾಲಾ ಮಕ್ಕಳಿಗೆ ನಿಗದಿತ ಪ್ರಮಾಣದಲ್ಲಿ ಆಹಾರ ನೀಡುವಂತೆ ನಿರ್ದೇಶನ ನೀಡಿದರಲ್ಲದೆ, ಶಾಲಾ ಆವರಣದಲ್ಲಿ ಪೌಷ್ಟಿಕ ಕೈತೋಟ ನಿರ್ಮಾಣಕ್ಕೆ ಗಮನಹರಿಸಿ ಎಂದು ತಿಳಿಸಿದರು.

ಶಾಲೆಗಳಲ್ಲಿ ಮಕ್ಕಳಿಗೆ ಆಶುಭಾಷಣ, ಚರ್ಚಾಸ್ಪರ್ಧೆ ಏರ್ಪಡಿಸಿ ಎಂದು ತಿಳಿಸಿದ ಅವರು, ಶಾಲಾ ಆವರಣ, ಶೌಚಾಲಯ ಹಾಗೂ ಕೊಠಡಿಗಳ ಸ್ವಚ್ಛತೆಗೆ ಕ್ರಮವಹಿಸಲು ಸೂಚನೆ ನೀಡಿದರು. ಕೈಗಾರಿಕೆಗಳ ಸಿಎಸ್‌ಆರ್ ನಿಧಿಯಿಂದ ಶಾಲಾ ಕಟ್ಟಡಗಳ ದುರಸ್ತಿ ಮಾಡಿಸಲು ಶಾಲೆಗಳ ಪಟ್ಟಿ ನೀಡುವಂತೆ ತಿಳಿಸಿದರು.

ದುರಸ್ತಿ ಕಾರ್ಯಕ್ಕೆ ಸಹಕರಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ ಕೈಗಾರಿಕೆಗಳಿಗೆ ಆಗಸ್ಟ್ ೧೫ ಅಥವಾ ಜನವರಿ ೨೬ ರಂದು ಸನ್ಮಾನ ಮಾಡಲಾಗುವುದು. ಶಾಲಾ ಮತ್ತು ಅಂಗನವಾಡಿ ಕೇಂದ್ರದ ಮಕ್ಕಳ ಆರೋಗ್ಯ ತಪಾಸಣೆಯನ್ನು ನಿಗದಿತ ಸಮಯಕ್ಕೆ ನಡೆಸಲು ನಿಗಾವಹಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ತಿಳಿಸಿದರು.

ತಾಯಿ ಮತ್ತು ಶಿಶು ಮರಣ ಪ್ರಮಾಣ ತಡೆಯುವ ನಿಟ್ಟಿನಲ್ಲಿ ವೈದ್ಯರು ಹೆಚ್ಚಿನ ಕಾಳಜಿ ವಹಿಸಬೇಕು. ಹಾಸನಾಂಬ ಜಾತ್ರಾ ಮಹೋತ್ಸವವು ಅಕ್ಟೋಬರ್ ತಿಂಗಳಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಭಕ್ತಾದಿಗಳು ದೇವರ ದರ್ಶನದ ನಂತರ ಚನ್ನಪಟ್ಟಣ ಕೆರೆ ಅಂಗಳದಲ್ಲಿ ನಿರ್ಮಾಣವಾಗಿರುವ ವಿಹಾರ ಧಾಮದಲ್ಲಿ ಬೋಟ್ ಮೂಲಕ ವಿಹಾರ ಮಾಡಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ನೀರು ತುಂಬಿಸಲು ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಆಗಸ್ಟ್ ಮೊದಲ ವಾರದಲ್ಲಿ ಬೋಟ್ ವಿಹಾರಕ್ಕೆ ಚಾಲನೆ ನೀಡಬೇಕು ಎಂದು ನಿರ್ದೇಶನ ನೀಡಿದರು.

ನಗರದ ಸೌಂದರ್ಯಕ್ಕೆ ಒತ್ತು ನೀಡಬೇಕು ಈ ನಿಟ್ಟಿನಲ್ಲಿ ಮುಖ್ಯ ರಸ್ತೆಯಾದ ಬೂವನಹಳ್ಳಿಯಿಂದ ತಣ್ಣೀರುಹಳ್ಳದವರೆಗೆ ರಸ್ತೆ ಎರಡು ಬದಿಯಲ್ಲಿ ಹಾಗೂ ರಸ್ತೆ ಮದ್ಯಭಾಗದಲ್ಲಿ ತೋಟಗಾರಿಕೆ ಇಲಾಖೆಯವರು ಸೌಂದರ್ಯಿಕರಣಕ್ಕಾಗಿ ಹೂ ಗಿಡಗಳನ್ನು ನೆಟ್ಟು ಪೋಷಣೆಗೆ ಕ್ರಮವಹಿಸಿ ಎಂದು ತಿಳಿಸಿದರು.

ಸಮಾಜ ಕಲ್ಯಾಣ, ಬಿ.ಸಿ.ಎಂ ಹಾಸ್ಟೆಲ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಅಗತ್ಯವಿರುವ ಜಾಗವನ್ನು ಶೀಘ್ರವಾಗಿ ಗುರುತಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಬಿ.ಸಿ.ಎಂ ಇಲಾಖೆಗೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ಜಿಲ್ಲೆಗೆ ೨ ಬಾಲಕರ ಹಾಗೂ ೨ ಬಾಲಕಿಯರ ಹಾಸ್ಟೆಲ್ ಗಳು ಮಂಜೂರಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಜಾಗ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹಾಸನಾಂಬ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಭಕ್ತಾದಿಗಳು ದೇವರ ದರ್ಶನದ ನಂತರ ಹಾಸನ ಜಿಲ್ಲೆಯಲ್ಲಿರುವ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ ಬಸ್‌ಗಳ ವ್ಯವಸ್ಥೆಗೆ ಕ್ರಮ ವಹಿಸಲು ಕೆಎಸ್‌ಆರ್‌ಟಿಸಿ ವಿಭಾಗಾಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ಬಿ.ಆರ್., ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಉಪ ವಿಭಾಗಾಧಿಕಾರಿಗಳಾದ ಮಾರುತಿ, ಶೃತಿ, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.