ಸಾರಾಂಶ
ಕೆಲವು ಪಿಡಿಒಗಳು ಸಾರ್ವಜನಿಕರ ಕೈಗೆ ಸಿಗುತ್ತಿಲ್ಲ. ಪ್ರತಿದಿನ ಬೆಳಗ್ಗೆ ೧೦ರಿಂದ ಮಧ್ಯಾಹ್ನ ೧೨ ಗಂಟೆ ವರೆಗೆ ಕಚೇರಿಯಲ್ಲಿ ಸಾರ್ವಜನಿಕರ ಭೇಟಿಗೆ ಸಮಯ ನಿಗದಿ ಪಡಿಸಿದ್ದರೂ ಸಾರ್ವಜನಿಕರ ಭೇಟಿ ಮಾಡುತ್ತಿಲ್ಲ. ಇದರಿಂದ ಸಮಸ್ಯೆ, ದೂರು ಹೇಳಿಕೊಳ್ಳಲು ಕಚೇರಿಗೆ ಅಲೆಯುವಂತಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಹಾನಗಲ್ಲ: ಕೆಲವು ಪಿಡಿಒಗಳು ತಮ್ಮ ಕರ್ತವ್ಯ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎನ್ನುವ ದೂರುಗಳಿದ್ದು, ಅಂಥ ಪಿಡಿಒಗಳಿಗೆ ಸಮರ್ಪಕ ಕರ್ತವ್ಯ ನಿರ್ವಹಣೆ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಸೂಚನೆ ನೀಡಿ. ತಪ್ಪಿದರೆ ಶಿಸ್ತುಕ್ರಮ ಜರುಗಿಸಿ ಎಂದು ಶಾಸಕ ಶ್ರೀನಿವಾಸ ಮಾನೆ ಅವರು ತಾಪಂ ಇಒ ಎಸ್. ದೇವರಾಜ ಅವರಿಗೆ ಸೂಚಿಸಿದರು.
ಪಟ್ಟಣದಲ್ಲಿ ತಾಪಂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕೆಲವು ಪಿಡಿಒಗಳು ಸಾರ್ವಜನಿಕರ ಕೈಗೆ ಸಿಗುತ್ತಿಲ್ಲ. ಪ್ರತಿದಿನ ಬೆಳಗ್ಗೆ ೧೦ರಿಂದ ಮಧ್ಯಾಹ್ನ ೧೨ ಗಂಟೆ ವರೆಗೆ ಕಚೇರಿಯಲ್ಲಿ ಸಾರ್ವಜನಿಕರ ಭೇಟಿಗೆ ಸಮಯ ನಿಗದಿ ಪಡಿಸಿದ್ದರೂ ಸಾರ್ವಜನಿಕರ ಭೇಟಿ ಮಾಡುತ್ತಿಲ್ಲ. ಇದರಿಂದ ಸಮಸ್ಯೆ, ದೂರು ಹೇಳಿಕೊಳ್ಳಲು ಕಚೇರಿಗೆ ಅಲೆಯುವಂತಾಗಿದೆ. ಯಾವುದೇ ಕಾರಣಕ್ಕೂ ಹೀಗಾಗದಂತೆ ನೋಡಿಕೊಳ್ಳಬೇಕು. ನಿಗದಿತ ಸಮಯದಲ್ಲಿ ಕಡ್ಡಾಯವಾಗಿ ಕಚೇರಿಯಲ್ಲಿ ಹಾಜರಿದ್ದು ಸಾರ್ವಜನಿಕರನ್ನು ಭೇಟಿ ಮಾಡಬೇಕು ಎಂದರು.ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಸಾಧ್ಯವಾಗಿಲ್ಲ. ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಗಮನ ಹರಿಸಬೇಕು. ಖಾಲಿ ಇರುವ ವಾಟರ್‌ಮನ್ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳ ಗುಣಮಟ್ಟದ ಬಗ್ಗೆ ದೂರುಗಳಿದ್ದು, ಗಮನ ಹರಿಸಬೇಕು. ಯೋಜನೆಯಡಿ ಜಲಮೂಲಗಳ ಪುನಶ್ಚೇತನಕ್ಕೆ ಒತ್ತು ನೀಡುವಂತೆ ಸೂಚಿಸಿದರು. ಸಭೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಪ್ರಗತಿ ಪರಿಶೀಲನೆ ಸಹ ನಡೆಸಿದರು.
ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕರಾದ ಚನ್ನಬಸಪ್ಪ ಹಾವಣಗಿ, ಚನ್ನವೀರಶೆಟ್ಟಿ ರೂಡಗಿ, ಅಭಿಯಂತರ ಚಂದ್ರಶೇಖರ ಸೂಡಂಬಿ ಈ ಸಂದರ್ಭದಲ್ಲಿದ್ದರು.