ಪ್ಲಾಸ್ಟಿಕ್ ಧ್ವಜ ಮಾರಾಟವಾಗದಂತೆ ಕ್ರಮ ವಹಿಸಿ

| Published : Aug 02 2024, 12:53 AM IST

ಪ್ಲಾಸ್ಟಿಕ್ ಧ್ವಜ ಮಾರಾಟವಾಗದಂತೆ ಕ್ರಮ ವಹಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಆಗಸ್ಟ್ 15 ರಂದು ಜರುಗಲಿರುವ ಸಂಭ್ರಮದ ಸ್ವಾತಂತ್ರೋತ್ಸವ ಆಚರಣೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯಲ್ಲಿ ಆಗಸ್ಟ್‌ 15 ರಂದು ಜರುಗಲಿರುವ ಸಂಭ್ರಮದ ಸ್ವಾತಂತ್ರೋತ್ಸವ ಆಚರಣೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಸ್ವಾತಂತ್ರೋತ್ಸವ ದಿನಾಚರಣೆ ಕುರಿತ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿವರ್ಷದಂತೆ ಈ ವರ್ಷವೂ ಸಂಭ್ರಮದಿಂದ ಆಚರಿಸುವ ನಿಟ್ಟಿನಲ್ಲಿ ರಚಿಸಲಾದ ವಿವಿಧ ಸಮಿತಿಗಳ ಸಿದ್ಧತೆ ಕುರಿತು ಚರ್ಚಿಸಿದರು. ಯಾವುದೇ ರೀತಿಯ ಅಡೆತಡೆಯಾಗದಂತೆ ಎಲ್ಲ ರೀತಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಪ್ಲಾಸ್ಟಿಕ್ ಧ್ವಜ ಬಳಕೆ ನಿಷೇಧವಿದ್ದರೂ ಮಾರಾಟವಾಗುತ್ತಿರುವುದು ಕಂಡುಬರುತ್ತಿದೆ. ಅಂಗಡಿಗಳಲ್ಲಿ ಮಾರಾಟವಾಗದಂತೆ ನಗರಸಭೆ ನಿಗಾವಹಿಸಲು ತಿಳಿಸಿದ ಜಿಲ್ಲಾಧಿಕಾರಿಗಳು ಸುತ್ತೋಲೆ ಹೊರಡಿಸುವಂತೆ ಶಾಲಾ ಶಿಕ್ಷಣ ಇಲಾಖೆಗೆ ಸೂಚಿಸಿದರು.

ಆಗಸ್ಟ್‌ 15 ರಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಜಹಣ ನೆರವೇರಲಿದ್ದು, ಪೋಲಿಸ್, ಗೃಹರಕ್ಷಕದಳ, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಮಾಜಿ ಸೈನಿಕರ ತಂಡ ಒಳಗೊಂಡಂತೆ ಆಕರ್ಷಕ ಪಥಸಂಚಲನ ಹಮ್ಮಿಕೊಳ್ಳಲಾಗುತ್ತಿದೆ. ಶಿಷ್ಟಾಚಾರದ ಪ್ರಕಾರ ಆಮಂತ್ರಣ ಪತ್ರಿಕೆ ಮುದ್ರಣ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ಸನ್ಮಾನ ಮಾಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ದೇಶಭಕ್ತಿ ಗೀತೆ ಹಾಡಿಸಲು ತಂಡಗಳನ್ನು ಆಯ್ಕೆ ಮಾಡಲು ತಿಳಿಸಿದರು.

ಕಾರ್ಯಕ್ರಮ ಯಶಸ್ವಿಗೊಳಿಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಸಮಿತಿಗೆ ವಹಿಸಿದ ಜವಾಬ್ದಾರಿಯನ್ನು ತಪ್ಪದೇ ಪಾಲಿಸಬೇಕು. ಶಿಷ್ಟಾಚಾರಕ್ಕೆ ಲೋಪವಾಗದಂತೆ ಧ್ವಜ ಸಂಹಿತೆಗೆ ಯಾವುದೇ ತರಹ ಅಪಚಾರವಾಗದಂತೆ ನೋಡಿಕೊಳ್ಳಲು ಸೂಚಿಸಿದ ಅವರು ಧ್ವಜಾರೋಹಣ ವ್ಯವಸ್ಥೆ ಮಾಡಲು ಭಾರತ ಸೇವಾದಳ, ಪೊಲೀಸ್ ಇಲಾಖೆ, ತಹಸೀಲ್ದಾರ್‌ ಹಾಗೂ ಯುವಜನ ಸೇವಾ ಹಾಗೂ ಕ್ರೀಡಾಧಿಕಾರಿಗಳಿಗೆ ವಹಿಸಿದರೆ, ಬಂದೋಬಸ್ತ್‌ ವ್ಯವಸ್ಥೆಗೆ ಪೊಲೀಸ್ ಇಲಾಖೆಗೆ ತಿಳಿಸಲಾಯಿತು. ಜಿಲ್ಲಾ ಕ್ರೀಡಾಂಗಣ ಸ್ವಚ್ಛತೆಗೆ ನಗರಸಭೆಗೆ ಸೂಚಿಸಲಾಯಿತು.

ಸಭೆಯಲ್ಲಿ ಜಿ.ಪಂ ಸಿಇಒ ಶಶಿಧರ ಕುರೇರ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿ.ಪಂ ಯೋಜನಾ ನಿರ್ದೇಶಕ ಎನ್.ವಾಯ್.ಬಸರಿಗಿಡದ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಲೋಕೋಪಯೋಗಿ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ರಾಜಶೇಖರ ಕಡಿವಾಲರ, ಪಶು ಇಲಾಖೆಯ ಉಪನಿರ್ದೇಶಕ ಎಸ್.ಎಚ್.ಚೊಳಚಗುಡ್ಡ, ತಹಸೀಲ್ದಾರ್‌ ಅಮರೇಶ ಪಮ್ಮಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

---

ಬಾಕ್ಸ್‌

ಸೂಕ್ತ ವ್ಯವಸ್ಥೆಗೆ ಸೂಚನೆ

ಕ್ರೀಡಾಂಗಣದಲ್ಲಿ ಸ್ಟೇಜ್ ನಿರ್ಮಾಣ, ಗಣ್ಯರಿಗೆ, ಶಾಸಕರಿಗೆ, ಸಂಸದರುಗಳಿಗೆ ಹಾಗೂ ಸನ್ಮಾನಿತರಿಗೆ, ಪತ್ರಕರ್ತರಿಗೆ ಸೂಕ್ತ ಆಸನಗಳ ವ್ಯವಸ್ಥೆ ಕಲ್ಪಿಸಬೇಕು. ಧ್ವನಿವರ್ಧಕ ಹಾಗೂ ಜನರೇಟರ್ ವ್ಯವಸ್ಥೆ ಕೈಗೊಳ್ಳಲು ಸೂಚಿಸಿದರು. ಕುಡಿಯುವ ನೀರಿನ ವ್ಯವಸ್ಥೆ, ಶಾಲಾ ಮಕ್ಕಳಿಗೆ ಸಹಿ ವಿತರಣೆ ಕ್ರಮವಹಿಸಬೇಕು. ವೇದಿಕೆ ಮೇಲೆ ಗಣ್ಯವ್ಯಕ್ತಿಗಳಿಗೆ ಆಸನಗಳ ವ್ಯವಸ್ಥೆ ಹಾಗೂ ವೇದಿಕೆಯ ಎರಡು ಕಡೆಗಳಲ್ಲಿ ಅಧಿಕಾರಿಗಳಿಗೆ, ಸನ್ಮಾನಿತರಿಗೆ ಹಾಗೂ ಪತ್ರಕರ್ತರಿಗೆ ಪ್ರತ್ಯೇಕ ಆಸನಗಳ ವ್ಯವಸ್ಥೆ ಮಾಡಬೇಕು. ಜಿಲ್ಲಾಡಳಿತ ಭವನ ಸೇರಿದಂತೆ ತಾಲೂಕು ಆಡಳಿತ ಭವನ, ಜಿಲ್ಲಾ ಕ್ರೀಡಾಂಗಣಕ್ಕೂ ವಿದ್ಯುತ್ ಅಲಂಕಾರ ಮಾಡುವಂತೆ ಸೂಚಿಸಲಾಯಿತು.