ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸಿ: ಶಾಸಕ ದರ್ಶನ್ ಪುಟ್ಟಣ್ಣಯ್ಯ

| Published : Nov 09 2024, 01:04 AM IST

ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸಿ: ಶಾಸಕ ದರ್ಶನ್ ಪುಟ್ಟಣ್ಣಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಇಂದೂರ್ ಸ್ವಚ್ಛ ನಗರ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ನಾನು ಸಹ ಸ್ವಚ್ಛತೆ ಸಂಬಂಧಿಸಿದಂತೆ ಅಲ್ಲಿಂದ ವರದಿ ತರಿಸಿಕೊಂಡಿದ್ದೇನೆ. ಎಲ್ಲಾ ಪುರಸಭೆ ಸದಸ್ಯರು, ಅಧಿಕಾರಿಗಳು ಸಹಕಾರ ಕೊಟ್ಟರೆ, ಸ್ಥಳೀಯ ನಿವಾಸಿಗಳು, ಹೊರಗಿನ ಎನ್‌ಜಿಓ ಸಂಘ-ಸಂಸ್ಥೆಗಳನ್ನು ಕರೆಸಿ ಇಡೀ ಪಟ್ಟಣವನ್ನು ಎರಡು ದಿನಗಳಲ್ಲಿ ಸ್ವಚ್ಛತೆ ಮಾಡಿಸಲಾಗುವುದು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಟ್ಟಣದ ಪುರಸಭೆ ವ್ಯಾಪ್ತಿ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕು. ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುವಂತೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದ ಪುರಸಭೆಯಲ್ಲಿ ಅಧ್ಯಕ್ಷೆ ಜ್ಯೋತಿಲಕ್ಷ್ಮಿಬಾಬು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಪುರಸಭೆ ವ್ಯಾಪ್ತಿ ಸಮರ್ಪಕವಾಗಿ ಸ್ವಚ್ಛತಾ ಕಾರ್ಯ ನಡೆಯುತ್ತಿಲ್ಲ ಎಂಬ ಸದಸ್ಯರಾದ ಪಾರ್ಥ, ಚಂದ್ರ, ಗಿರೀಶ್, ಸೋಮಶೇಖ, ಕೃಷ್ಣ ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದರು.

ಈ ವೇಳೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಮಾತನಾಡಿ, ಜನರಿಗೆ ಕುಡಿಯುವ ನೀರಿಗೆ ಸಮಸ್ಯೆ ನಿವಾರಿಸಿ, ಸಮರ್ಪಕವಾಗಿ ಸ್ವಚ್ಛತೆ, ಕಸವಿಲೇವಾರಿ, ಸಂಸ್ಕರಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸ್ವಚ್ಛ ಪಟ್ಟಣವಾಗಿ ಅಭಿವೃದ್ಧಿಪಡಿಸಲು ಎಲ್ಲರೂ ಶ್ರಮಿಸಬೇಕು ಎಂದರು.

ದೇಶದಲ್ಲಿ ಇಂದೂರ್ ಸ್ವಚ್ಛ ನಗರ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ನಾನು ಸಹ ಸ್ವಚ್ಛತೆ ಸಂಬಂಧಿಸಿದಂತೆ ಅಲ್ಲಿಂದ ವರದಿ ತರಿಸಿಕೊಂಡಿದ್ದೇನೆ. ಎಲ್ಲಾ ಪುರಸಭೆ ಸದಸ್ಯರು, ಅಧಿಕಾರಿಗಳು ಸಹಕಾರ ಕೊಟ್ಟರೆ, ಸ್ಥಳೀಯ ನಿವಾಸಿಗಳು, ಹೊರಗಿನ ಎನ್‌ಜಿಓ ಸಂಘ-ಸಂಸ್ಥೆಗಳನ್ನು ಕರೆಸಿ ಇಡೀ ಪಟ್ಟಣವನ್ನು ಎರಡು ದಿನಗಳಲ್ಲಿ ಸ್ವಚ್ಛತೆ ಮಾಡಿಸಲಾಗುವುದು ಎಂದರು.ಉಳಿದಂತೆ ಪುರಸಭೆಯವರು ಸ್ವಚ್ಛತೆಗಾಗಿ ಸಮರ್ಪಕವಾಗಿ ನಿರ್ವಹಣೆ ಮಾಡಿಕೊಂಡು ಹೋಗಬೇಕು. ಡಿಸೆಂಬರ್ ಅಂತ್ಯದೊಳಗೆ ಇದೊಂದು ದೊಡ್ಡಮಟ್ಟದ ಆಂದೋಲನಾ ಮಾದರಿಯಲ್ಲಿ ಪಟ್ಟಣವನ್ನು ಸ್ವಚ್ಛಗೊಳಿಸುವ ಕೆಲಸ ಮಾಡಬೇಕು, ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯವಾಗಿ ಬೇಕು. ಅಲ್ಲದೇ, ಸ್ವಚ್ಛತೆ ಜತೆಗೆ ಕಸವಿಲೇವಾರಿ, ಸಂಸ್ಕರಣೆಗೂ ಆದ್ಯತೆ ನೀಡಬೇಕು ಎಂದು ಕೋರಿದರು. ಶಾಸಕರ ಅಭಿಪ್ರಾಯಕ್ಕೆ ಎಲ್ಲಾ ಸದಸ್ಯರು ಒಪ್ಪಿಗೆ ಸೂಚಿಸಿದರು.

ಸದಸ್ಯ ಚಂದ್ರ ಮಾತನಾಡಿ, ಪುರಸಭೆ ಪರಿಸರ ಸಂರಕ್ಷಣಾಧಿಕಾರಿ ಸಭೆಗೆ ತಪ್ಪು ಮಾಹಿತಿ ರವಾನಿಸುತ್ತಿದ್ದಾರೆ. ಕಸ ಸಾಗಾಣಿಕೆ ಮಾಡುವ ವಾಹನಗಳು ದುರಸ್ತಿಯಾಗಿವೆ. ಯಂತ್ರಗಳನ್ನು ದುರಸ್ತಿ ಪಡಿಸುವಂತೆ ಅಧ್ಯಕ್ಷರು, ಉಪಾಧ್ಯಕ್ಷರು ಹೇಳಿದರೂ ಅಧಿಕಾರಿ ರಿಪೇರಿ ಮಾಡಿಸಿಲ್ಲ. ಕೆಲವು ಪೌರಕಾರ್ಮಿಕರಿಗೆ ಏಳೆಂಟು ತಿಂಗಳಿಂದ ಸಂಬಳ ನೀಡಿಲ್ಲ. ಹೀಗಾದರೆ ಸ್ವಚ್ಛಗೊಳಿಸಲು ಯಾವ ಪೌರಕಾರ್ಮಿಕರು ಆಗಮಿಸುತ್ತಾರೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು.

ಸದಸ್ಯ ಕೃಷ್ಣ ಮಾತನಾಡಿ, ಪಟ್ಟಣದ ಹಾರೋಹಳ್ಳಿಯಲ್ಲಿ 5 ಲಕ್ಷ ಸಾಮರ್ಥ್ಯದ ಕುಡಿಯುವ ನೀರಿನ ಓವರೆಡ್ ಟ್ಯಾಂಕ್ ನಿರ್ಮಿಸಿದ್ದಾರೆ. ಆದರೆ, ಒಂದು ದಿನವು ಸಂಪೂರ್ಣವಾಗಿ ನೀರು ತುಂಬಿಲ್ಲ. ಕಾವೇರಿ ನದಿಯಿಂದ ಬೆಂಗಳೂರುವರೆಗೂ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಕಾವೇರಿ ಪಕ್ಕದಲ್ಲಿರುವ ಹಾರೋಹಳ್ಳಿ ನಿವಾಸಿಗಳಿಗೆ ಶುದ್ದ ಕಾವೇರಿ ನೀರಿನ ಸೌಲಭ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಶೇ.60 ಮಂದಿ ಬೋರ್‌ವೆಲ್ ನೀರು ಕುಡಿಯುತ್ತಿದ್ದಾರೆ. ಶೇ.40 ಮಂದಿಗೆ ಹಾರೋಹಳ್ಳಿ ಪಂಪ್‌ಹೌಸ್ ಮೂಲಕ ಶುದ್ದೀಕರಣವಿಲ್ಲದ ವಿಸಿ ನಾಲೆ ಕೊಳಚೆ ನೀರನ್ನು ಕುಡಿಯಲು ಬಿಡುತ್ತಿದ್ದಾರೆ. ವಿಸಿ ನಾಲೆಗೆ ಮೇಲಿನ ಎಲ್ಲಾ ಗ್ರಾಮಗಳ ಕೊಳಚೆ ನೀರನ್ನೇ ಬಿಡುತ್ತಿದ್ದಾರೆ. ಅದೇ ನೀರನ್ನು ಜನರ ಕುಡಿಯುವುದಕ್ಕಾಗಿ ನೀಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಪ್ರತಿಕ್ರಿಯಿಸಿದ ಶಾಸಕರು ಕುಡಿಯುವ ನೀರು ಬಹುಮುಖ್ಯ. ಪಟ್ಟಣಕ್ಕೆ ಅಗತ್ಯವಿರುವ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಕ್ರಮ ವಹಿಸಬೇಕು. ಅದಕ್ಕಾಗಿ ಪುರಸಭೆ ಅಧಿಕಾರಿಗಳು ಕುಡಿಯುವ ನೀರು ಪೂರೈಕೆ ತಜ್ಞರನ್ನು ಕರೆಸಿ ಚರ್ಚಿಸಿ ಕ್ರಮವಹಿಸಬೇಕು, ಶೀಘ್ರವೇ ಈ ಸಂಬಂಧ ಸಭೆ ನಡೆಸುವಂತೆ ಸೂಚಿಸಿದರು.

ಶೀಘ್ರವೇ ಯುಜಿಡಿ ಸಮಸ್ಯೆ ಪರಿಹಾರ:

ಸದಸ್ಯರಾದ ಎಂ.ಗಿರೀಶ್, ಸೋಮಶೇಖರ್ ಯುಜಿಡಿ ಸಮಸ್ಯೆ ಕುರಿತು ಶಾಸಕರನ್ನು ಪ್ರಶ್ನಿಸಿ ಇದು ಬಹುದೊಡ್ಡ ಸಮಸ್ಯೆಯಾಗಿದೆ. ಮಲೀನ ನೀರು ಶುದ್ದೀಕರಣ ಘಟಕ ನಿರ್ಮಿಸದ ಹಿನ್ನೆಲೆಯಲ್ಲಿ ಯುಜಿಡಿ, ಚರಂಡಿ ನೀರನ್ನು ವಿಸಿ ನಾಲೆಗೆ ಹಾಗೂ ಹಿರೋಡೆ ಕೆರೆಗೆ ಬಿಡಲಾಗುತ್ತಿದೆ. ಇದರಿಂದ ಸಾರ್ವಜನಿಕರು, ಸಂಘಟನೆಗಳು ನಿತ್ಯ ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ದಯಮಾಡಿ ಯುಜಿಡಿ ಸಮಸ್ಯೆಯನ್ನು ಬಗೆಹರಿಸಿ ಎಂದು ಮನವಿ ಮಾಡಿದರು.

ಪ್ರತಿಕ್ರಿಯಿಸಿದ ಶಾಸಕರು ಮತ್ತು ಅಧಿಕಾರಿಗಳು, ಈಗಾಗಲೇ ಯುಜಿಡಿ ಮಲೀನ ನೀರು ಶುದ್ಧೀಕರಣ ಘಟಕ ಸ್ಥಾಪನೆಗೆ ಭೂಮಿ ನೀಡಿದ್ದ ರೈತರಿಗೆ ಕೋರ್ಟ್ ತೀರ್ಮಾನದಿಂದ ಪರಿಹಾರ ನೀಡಲಾಗಿದೆ. ಸಂಸ್ಕರಣ ಘಟಕ ಸ್ಥಾಪನೆ 23.80 ಕೋಟಿಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಸರಕಾರದಲ್ಲಿ ಅಷ್ಟೊಂದು ಹಣ ಇಲ್ಲದ ಪರಿಣಾಮವಾಗಿ ಕೆಯುಡಿಎಫ್‌ಸಿಗೆ ಸಾಲದ ರೂಪದಲ್ಲಿ ಘಟಕ ಸ್ಥಾಪನೆಗೆ ಸರಕಾರ ಸೂಚಿಸಿದೆ. ಶೀಘ್ರವೇ ಘಟಕ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು. ಹಿರೋಡೆ ಕೆರೆಗೆ ಕೆಎಸ್‌ಆರ್‌ಟಿಸಿ ಡಿಫೋಯಿಂದ ಹೆಚ್ಚಿನ ಪ್ರಮಾಣದಲ್ಲಿ ಕೊಳಚೆ ನೀರು ಬರುತ್ತಿರುವ ಹಿನ್ನೆಲೆಯಲ್ಲಿ ಡಿಪೋ ಒಳಗೆ ಮಲೀನ ನೀರು ಶುದ್ದೀಕರಣ ಘಟಕ ಸ್ಥಾಪನೆ ಮಾಡಲಾಗುತ್ತಿದೆ ಎಂದು ಭರವಸೆ ನೀಡಿದರು.

ಸಭೆಯಲ್ಲಿ ಅಧ್ಯಕ್ಷೆ ಜ್ಯೋತಿಲಕ್ಷ್ಮೀ, ಉಪಾಧ್ಯಕ್ಷ ಅಶೋಕ್, ಮುಖ್ಯಾಧಿಕಾರಿ ಸತೀಶ್‌ಕುಮಾರ್ ಸೇರಿದಂತೆ ಪುರಸಭೆ ಸದಸ್ಯರು ಭಾಗಹವಹಿಸಿದ್ದರು.