ಸಾರಾಂಶ
- ಆರೋಗ್ಯ ಇಲಾಖೆಯ ವಿವಿಧ ಸಮಿತಿಗಳ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಕನ್ನಡಪ್ರಭ ವಾರ್ತೆ ಕೊಪ್ಪಳ
ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ನಿಯಮನುಸಾರ ನಿಗದಿತ ಅವಧಿಯಲ್ಲಿ ಲಸಿಕಾಕರಣ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಈ ಅಭಿಯಾನದಲ್ಲಿ ಜಿಲ್ಲೆಯ ಯಾವುದೇ ಮಗು ಲಸಿಕೆಯಿಂದ ವಂಚಿತರಾಗದಂತೆ ಕ್ರಮ ವಹಿಸಿ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಸಮಿತಿಗಳ ಜಿಲ್ಲಾ ಮಟ್ಟದ ಸಮನ್ವಯ ಹಾಗೂ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಗು ಹುಟ್ಟಿದಾಗಿಂದ 16 ವರ್ಷದವರೆಗೆ ನಿಗದಿತ ಅವಧಿಯಲ್ಲಿ ಲಸಿಕೆ ನೀಡಬೇಕು. ಪೊಲೀಯೋ, ದಡಾರ, ರುಬೆಲ್ಲಾದಂತಹ ಮಾರಕ ಕಾಯಿಲೆಗಳಿಂದ ಲಸಿಕೆಗಳು ಮಕ್ಕಳನ್ನು ರಕ್ಷಿಸುತ್ತವೆ. ಈ ಬಗ್ಗೆ ಮಗುವಿನ ಜನನದ ಸಮಯದಲ್ಲಿ ಪೋಷಕರಿಗೆ ವೈದ್ಯರು ಸೂಕ್ತ ತಿಳುವಳಿಕೆ ನೀಡಬೇಕು. ಲಸಿಕೆ ಪಡೆದ ಮಕ್ಕಳ ಸಮೀಕ್ಷೆ ಸಂದರ್ಭದಲ್ಲಿ ಲಸಿಕೆ ಪಡೆಯದ ಮಕ್ಕಳ ಮಾಹಿತಿ ದೊರೆಯುತ್ತದೆ. ಅಂತಹ ಮಕ್ಕಳು ಲಸಿಕೆಯಿಂದ ವಂಚಿತರಾಗಿರುವುದಕ್ಕೆ ಕಾರಣಗಳನ್ನು ತಿಳಿದು, ಮುಂದಿನ ದಿನಗಳಲ್ಲಿ ಅದು ಮರುಕಳಿಸದಂತೆ ಪೋಷಕರಿಗೆ ತಿಳಿಸಬೇಕು. ಜಿಲ್ಲೆಯ ಎಲ್ಲ ಶಾಲೆ, ಅಂಗನವಾಡಿಗಳಲ್ಲಿ ಪೂರ್ವಪ್ರಾಥಮಿಕ ಶಿಕ್ಷಣ ಆರಂಭಗೊಂಡಿದ್ದು, ಈ ಸಮಯದಲ್ಲಿ ಶಾಲೆಗೆ ಮಕ್ಕಳು ದಾಖಲಾಗುವಾಗ ಆ ಮಗು ಆ ಸಮಯದವರೆಗಿನ ನಿರ್ದಿಷ್ಟ ಲಸಿಕೆಗಳನ್ನು ಪಡೆದಿರುವ ಕುರಿತು ಖಾತ್ರಿಪಡಿಸಿಕೊಳ್ಳಿ. ಮಗುವಿನ ಪ್ರತಿ ಲಸಿಕೆಯ ಬಗ್ಗೆ ತಾಯಿ ಕಾರ್ಡ್‌ಗಳಲ್ಲಿ ದಾಖಲು ಮಾಡಿರುತ್ತದೆ. ಒಂದು ವೇಳೆ ತಾಯಿ ಕಾರ್ಡ್ ಇಲ್ಲದಿದ್ದಲ್ಲಿ ಮಗು ಲಸಿಕೆ ಪಡೆದ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ಪರ್ಯಾಯ ಮಾರ್ಗ, ದಾಖಲೆಗಳನ್ನು ಹುಡುಕಿ. ಜಿಲ್ಲೆಯ ಯಾವ ಮಗುವೂ ಲಸಿಕೆಯಿಂದ ವಂಚಿತವಾಗದಂತೆ ಅಗತ್ಯ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.ತಾಯಿ ಮತ್ತು ಶಿಶು ಮರಣ ಪ್ರಮಾಣ ಪರಿಶೀಲನೆ:
ಹೆರಿಗೆ ಸಂದರ್ಭ ಹಾಗೂ ಹೆರಿಗೆಯ ನಂತರ ತಾಯಂದಿರು ಮರಣ ಹೊಂದಲು ರಕ್ತಹೀನತೆ, ಅಧಿಕ ಹಾಗೂ ಕಡಿಮೆ ರಕ್ತದೊತ್ತಡ, ಹೆರಿಗೆ ಸಮಯದಲ್ಲಿನ ಆಘಾತದಿಂದ ಹೃದಯದ ತೊಂದರೆ ಸೇರಿದಂತೆ ಅನೇಕ ಕಾರಣಗಳಿಂದ ಮರಣ ಹೊಂದಬಹುದು. ಆದ್ದರಿಂದ ಗರ್ಭಿಣಿ ಮಹಿಳೆಯ ಕುಟುಂಬದವರು, ಆಶಾ ಕಾರ್ಯಕರ್ತೆಯರು, ಸ್ಥಳೀಯ ಅಥವಾ ಗರ್ಭಿಣಿ ಮಹಿಳೆಯ ತಪಾಸಣೆ ಮಾಡುವ ವೈದ್ಯಾಧಿಕಾರಿಗಳು ಪ್ರಾರಂಭದಲ್ಲಿಯೇ ಆಕೆಯ ಆರೋಗ್ಯ ಸಮಸ್ಯೆಯನ್ನು ಗುರುತಿಸಿ, ಸೂಕ್ತ ಚಿಕತ್ಸೆ ಹಾಗೂ ಆರೈಕೆಗೆ ಶಿಫಾರಸು ಮಾಡಬೇಕು. ತಾಯಿ ಕಾರ್ಡ್‌ಳಲ್ಲಿ ತೊಡಕಿನ ಗರ್ಭಧಾರಣೆ ಹಾಗೂ ತೊಡಕಿಲ್ಲದ ಗರ್ಭಧಾರಣೆ ಎಂದು ಕಡ್ಡಾಯವಾಗಿ ನಮೂದಿಸಬೇಕು ಎಂದು ಜಿಲ್ಲಾಧಿಕಾರಿ ಆಶಾ ಹಾಗೂ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜು ಟಿ. ಮಾತನಾಡಿ, ಹೆರಿಗೆ ಸಂದರ್ಭ ಹಾಗೂ ಹೆರಿಗೆ ನಂತರದಲ್ಲಿ ಮೃತಪಡುವ ತಾಯಂದಿರ ಪ್ರಕರಣಗಳಲ್ಲಿ ಮಹಿಳೆ ಗರ್ಭಿಣಿಯಾದಾಗಿನಿಂದ ರಕ್ತಹೀನತೆಯಿಂದ ಬಳಲುತ್ತಿದ್ದು, ಸೂಕ್ತ ಚಿಕತ್ಸೆ ಹಾಗೂ ಆರೈಕೆಯ ಕೊರತೆಯಿಂದ ಹೆರಿಗೆ ಸಂದರ್ಭ ರಕ್ತದೊತ್ತಡ, ಹೆರಿಗೆ ಸಮಯದಲ್ಲಿನ ತೀವ್ರ ಆಘಾತಕ್ಕೆ ಒಳಗಾಗಿರುವುದು ಕಂಡು ಬಂದಿರುತ್ತದೆ. ಇಂತಹ ಪ್ರಕರಣಗಳಲ್ಲಿ ಬಹಳಷ್ಟು ಪ್ರಕರಣಗಳು ಬೇರೆ ಜಿಲ್ಲೆಯ ಪ್ರಕರಣಗಳಾಗಿದ್ದು, ಗರ್ಭಿಣಿ ತೀವ್ರ ಗಂಭೀರ ಪರಿಸ್ಥಿತಿ ತಲುಪಿದ ನಂತರ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗುತ್ತದೆ. ಕೆಲ ಪ್ರಕರಣಗಳಲ್ಲಿ ಹೆರಿಗೆಯ ನಂತರ ವೈದ್ಯರ ಸಲಹೆಯನ್ನು ಮೀರಿ ಬಾಣಂತಿ ಹಾಗೂ ಮಗುವನ್ನು ಮನೆಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಇತರೆ ಕಾರಣಗಳಿಂದ ಆಗುವ ಸೋಂಕುಗಳಿಂದ ಮಹಿಳೆ ಅಥವಾ ಮಗು ಸಾವನ್ನಪ್ಪಬಹುದು. ಆದ್ದರಿಂದ ಜಿಲ್ಲೆಯ ಪ್ರಸೂತಿ ತಜ್ಞರು ತಮ್ಮ ಹಂತದಲ್ಲಿ ನಿರ್ವಹಣೆ ಮಾಡಲು ಸಾಧ್ಯವಾಗದ ಪ್ರಕರಣಗಳನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ಶಿಫಾರಸ್ಸು ಮಾಡುವಂತೆ ಸೂಚನೆ ನೀಡಲಾಗಿದೆ. ಬೇರೆ ಜಿಲ್ಲೆಯ ಪ್ರಕರಣಗಳಲ್ಲಿ ಸಂಬಂಧಿಸಿದ ಜಿಲ್ಲಾಧಿಕಾರಿ ಹಾಗೂ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.ಕ್ಷಯರೋಗ ಪಾಲುದಾರರ ಸಭೆ:
ಜಿಲ್ಲೆಯಲ್ಲಿ ನಿರ್ದಿಷ್ಟವಾಗಿ ಕ್ಷಯರೋಗ ಬಾಧಿತ ಅಥವಾ ಹೆಚ್ಚಿನ ಸಂಖ್ಯೆಯಲ್ಲಿ ಕ್ಷಯರೋಗಿಗಳಿರುವ ತಾಲೂಕನ್ನು ಗುರುತಿಸಿ, ಆ ತಾಲೂಕಿನಾದ್ಯಂತ ರ್‍ಯಾಂಡಮ್ ಆಗಿ ಮಾದರಿ ಪರೀಕ್ಷೆ ಮಾಡಿ. ಈ ಪ್ರಯೋಗದಿಂದ ನಿರ್ದಿಷ್ಟ ಪ್ರದೇಶದಲ್ಲಿ ಎಷ್ಟು ಜನ ಕ್ಷಯರೋಗಿಗಳು ಇದ್ದಾರೆ ಮತ್ತು ಅದಕ್ಕೆ ಕಾರಣಗಳು, ತಡೆಗಟ್ಟುವ ಕ್ರಮಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಿ. ಕ್ಷಯರೋಗ ಸಂಪೂರ್ಣ ವಾಸಿ ಮಾಡಬಹುದಾದ ಕಾಯಿಲೆಯಾಗಿದ್ದು, ಅದನ್ನು ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಿ, ಸೂಕ್ತ ಹಾಗೂ ನಿರಂತರ ಚಿಕಿತ್ಸೆ ಪಡೆಯುವುದು ಮುಖ್ಯ. ಈ ಬಗ್ಗೆ ಜಿಲ್ಲೆಯಾದ್ಯಂತ ಜನರಲ್ಲಿ ಜಾಗೃತಿ ಮೂಡಿಸಿ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುವ ಉಚಿತ ಪರೀಕ್ಷೆ, ಚಿಕಿತ್ಸೆ, ಸೌಲಭ್ಯಗಳ ಬಗ್ಗೆ ತಿಳುವಳಿಕೆ ಮೂಡಿಸಿ ಎಂದು ಜಿಲ್ಲಾಧಿಕಾರಿ ಕ್ಷಯರೋಗ ನಿರ್ಮೂಲನಾಧಿಕಾರಿಗೆ ತಿಳಿಸಿದರು.