ಡೆಂಘೀ ಪ್ರಕರಣಗಳು ಹೆಚ್ಚಳ ನಿಯಂತ್ರಣಕ್ಕೆ ಕ್ರಮ ವಹಿಸಿ: ಡಾ.ಕಾಂತರಾಜ

| Published : Jul 03 2024, 12:20 AM IST

ಡೆಂಘೀ ಪ್ರಕರಣಗಳು ಹೆಚ್ಚಳ ನಿಯಂತ್ರಣಕ್ಕೆ ಕ್ರಮ ವಹಿಸಿ: ಡಾ.ಕಾಂತರಾಜ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಡೆಂಘೀ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿವೆ. ಕೆಲವೆಡೆ ಸಾವು ಸಂಭವಿಸಿವೆ. ತಾಲೂಕಿನಲ್ಲಿ 20 ಪ್ರಕರಣಗಳು ವರದಿಯಾಗಿವೆ. ಜ್ವರದಿಂದ ಸಾವುಗಳು ಸಂಭವಿಸುವ ಸಾಧ್ಯತೆಗಳು ಇರುವುದರಿಂದ ಡೆಂಘೀ ನಿಯಂತ್ರಣಕ್ಕೆ ಎಲ್ಲಾ ಅಧಿಕಾರಿಗಳು ಮುಂದಾಗಬೇಕು. ಡೆಂಘೀ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆಯೇ ಆರಂಭದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಜಿಲ್ಲೆಯಲ್ಲಿ ಡೆಂಘೀ ಪ್ರಕರಣಗಳು ಹೆಚ್ಚುತ್ತಿರುವ ನಿಯಂತ್ರಣಕ್ಕೆ ಎಲ್ಲ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಜಿಲ್ಲಾ ರೋಗವಾಹಕ ಆಶ್ರಿತ ರೋಗ ನಿಯಂತ್ರಣಾಧಿಕಾರಿ ಡಾ.ಕಾಂತರಾಜು ಹೇಳಿದರು.

ಪಟ್ಟಣ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ಆರೋಗ್ಯ ನಿಯಂತ್ರಣಾಧಿಕಾರಿ, ತಾಲೂಕು ಆರೋಗ್ಯ ಇಲಾಖೆ ಹಾಗೂ ತಾಲೂಕು ಪಂಚಾಯ್ತಿ ಸಹಯೋಗದಲ್ಲಿ ನಡೆದ ಕೀಟ ಜನ್ಯ ರೋಗಗಳ ನಿಯಂತ್ರಣ ಕುರಿತು ಅಂತರ ಇಲಾಖೆ ಅಧಿಕಾರಿಗಳ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಡೆಂಘೀ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿವೆ. ಕೆಲವೆಡೆ ಸಾವು ಸಂಭವಿಸಿವೆ. ತಾಲೂಕಿನಲ್ಲಿ 20 ಪ್ರಕರಣಗಳು ವರದಿಯಾಗಿವೆ. ಜ್ವರದಿಂದ ಸಾವುಗಳು ಸಂಭವಿಸುವ ಸಾಧ್ಯತೆಗಳು ಇರುವುದರಿಂದ ಡೆಂಘೀ ನಿಯಂತ್ರಣಕ್ಕೆ ಎಲ್ಲಾ ಅಧಿಕಾರಿಗಳು ಮುಂದಾಗಬೇಕು ಎಂದರು.

ಡೆಂಘೀ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆಯೇ ಆರಂಭದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಅಧಿಕಾರಿಗಳು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕಟ್ಟುನಿಟ್ಟಿನಿಂದ ಕೆಲಸ ಮಾಡುವ ಮೂಲಕ ಎಚ್ಚರವಹಿಸಬೇಕು ಎಂದರು.

ಡೆಂಘೀ ಹರಡುವ ಸೊಳ್ಳೆಗಳು ಹೆಚ್ಚಾಗಿ ಶುದ್ಧ ನೀರಿನಲ್ಲಿ ಉತ್ಪತ್ತಿಯಾಗುವುದರಿಂದ ಮನೆಗಳು, ತೊಟ್ಟಿಗಳಲ್ಲಿ ಸಂಗ್ರಹಿಸಿರುವ ನೀರನ್ನು ಎರಡು ಮೂರುದಿನಕ್ಕೆ ಸ್ವಚ್ಛಗೊಳಿಸಬೇಕು. ಪಾಚಿ ಕಟ್ಟುವ ಸ್ಥಳದಲ್ಲಿ ಡೆಂಘೀ ಸೊಳ್ಳೆ ಒಂದು ವರ್ಷದವರೆಗೂ ವಾಸಿಸುತ್ತದೆ. ಹಾಗಾಗಿ ಪಾಚಿಕಟ್ಟಿದ ತೊಟ್ಟಿಗಳನ್ನು ಸ್ವಚ್ಛಗೊಳಿಸಿ ಮನೆಯಂಗಳವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ತೀವ್ರಜ್ವರ, ತಲೆ, ಕಣ್ಣು, ನಿಶಕ್ತಿ, ವಾಂತಿ, ಅತಿಯಾದ ಮೈಕೈನೋವು ಕಂಡ ತಕ್ಷಣ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.

ಶಾಲೆಗಳಲ್ಲಿ ಮಕ್ಕಳಿಗೆ ಡೆಂಘೀ, ಸ್ವಚ್ಛತೆ, ನೀರಿನ ಮಹತ್ವ, ಸ್ವಯಂರಕ್ಷಣೆ, ಸೊಳ್ಳೆಗಳಿಂದ ರಕ್ಷಣೆಯ ಬಗ್ಗೆ ಅರಿವು ಮೂಡಿಸಿ, ಅಂಗನವಾಡಿ ಹಾಸ್ಟೆಲ್‌ಗಳಿಗೆ ಕಿಟಕಿಗಳಿಗೆ ಮೆಸ್ ಹಾಕಬೇಕು. ಹಾಸ್ಟೆಲ್‌ಗಳಲ್ಲಿ ಪ್ರಕರಣಗಳು ಹೆಚ್ಚುವ ಸಾಧ್ಯತೆಗಳಿದ್ದು, ಸ್ವಚ್ಛತೆ ಕಾಪಾಡಬೇಕು, ನಗರ ಪ್ರದೇಶದಲ್ಲಿ ಖಾಲಿ ನಿವೇಶನ, ನೀರು ಸಂಗ್ರಹಿಸುರುವ ಸ್ಥಳಗಳನ್ನು ಸ್ವಚ್ಛಗೊಳಿಸಿ ಡೆಂಘೀ ಹರಡದಂತೆ ಕ್ರಮವಹಿಸಬೇಕು ಎಂದರು.

ತಾಪಂ ಇಒ ಲೋಕೇಶ್‌ಮೂರ್ತಿ ಮಾತನಾಡಿ, ಗ್ರಾಪಂ, ಪುರಸಭೆ ವ್ಯಾಪ್ತಿಯಲ್ಲಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮವಹಿಸಬೇಕು. ಕಸ ವಿಲೇವಾರಿ ಮಾಡುವ ವಾಹನಗಳಲ್ಲಿ ಡೆಂಘೀ ಬಗ್ಗೆ ಅರಿವು ಮೂಡಿಸುವ ಮೂಲಕ ನಿಯಂತ್ರಣಕ್ಕೆ ಸಹಕಾರ ನೀಡಬೇಕು ಎಂದರು.

ಸಭೆಯಲ್ಲಿ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸಿ.ಎ.ಅರವಿಂದ್, ಬಿಇಒ ಚಂದ್ರಶೇಖರ, ಎಇಇ ಮಹದೇವಸ್ವಾಮಿ, ಸುರೇಂದ್ರ, ಪುಟ್ಟಸ್ವಾಮಿ, ಸಿ.ಪಿ.ವಿಜಯ್‌ಕುಮಾರ್ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.