ಸಾರಾಂಶ
ಕನ್ನಡಪ್ರಭ ವಾರ್ತೆ ಸೂಲಿಬೆಲೆ
ಮೆಟ್ರಿಕ್ ನಂತರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಾಲೇಜು ಹಾಸ್ಟಲ್ ಕಟ್ಟಡ ನಿರ್ಮಾಣಕ್ಕೆ ಶೀಘ್ರ ಗುದ್ದಲಿಪೂಜೆ ನೆರವೇರಿಸಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಾ ದರ್ಪಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸೂಲಿಬೆಲೆ ಗ್ರಾಮದ ಸರ್ವೇ ನಂ.೧೦ ರಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ಹಾಸ್ಟೆಲ್ ನಿರ್ಮಾಣಕ್ಕೆ ಒಂದು ಎಕರೆ ಭೂಮಿ ಮಂಜೂರು ಮಾಡಿಸಲಾಗಿದ್ದು, ಈ ಜಾಗದಲ್ಲಿ ಸುಸಜ್ಜಿತ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಶೀಘ್ರದಲ್ಲಿ ಭೂಮಿ ಪೂಜೆ ನೆರವೇರಿಸಲಾಗುವುದು. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಕೆ.ಆರ್.ದೇವರಾಜ್ ಮಾತನಾಡಿ, ಹೊಸಕೋಟೆ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚು ಶಿಕ್ಷಣಕ್ಕೆ ಒತ್ತು ನೀಡಿದ ಕೀರ್ತಿ ಮಾಜಿ ಸಂಸದರು, ಹೊಸಕೋಟೆ ಅಭಿವೃದ್ಧಿ ಹರಿಕಾರರಾದ ಬಿ.ಎನ್.ಬಚ್ಚೇಗೌಡರಿಗೆ ಸಲ್ಲುತ್ತದೆ, ಲಕ್ಷಾಂತರ ಯುವಕರು ಮತ್ತು ಯುವತಿಯರು ಶಿಕ್ಷಣ ಪಡೆದು ತಮ್ಮ ಜೀವನ ಕಟ್ಟಿಕೊಂಡಿದ್ದಾರೆ, ಹೋಬಳಿ ಕೇಂದ್ರ ಸೂಲಿಬೆಲೆ ಗ್ರಾಮಕ್ಕೆ ಪದವಿಪೂರ್ವ ಹಾಗೂ ಪದವಿ ಕಾಲೇಜು ನೀಡಿದ ಕೀರ್ತಿ ಬಚ್ಚೇಗೌಡರಿಗೆ ಸಲ್ಲುತ್ತದೆ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಿ.ಎನ್.ಗೋಪಾಲಗೌಡ ಮಾತನಾಡಿ, ಕಾಲೇಜಿಗೆ ಅವಶ್ಯವಿರುವ ನಾನಾ ಸವಲತ್ತುಗಳನ್ನು ನಾವು ಹಾಗೂ ಶಾಸಕ ಶರತ್ ಬಚ್ಚೇಗೌಡರ ಸಹಕಾರದಿಂದ ಕಲ್ಪಿಸಿಕೊಟ್ಟಿದ್ದೇವೆ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಕೆಲಸ ಮಾಡುತ್ತೇವೆ ಎಂದರು.ಕಾಲೇಜು ಪ್ರಾಚಾರ್ಯ ಡಾ.ಕೆ.ಮೋಹನ್‌ಕುಮಾರ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಕಾಲೇಜಿಗೆ ಶೇ. ೯೦ ರಷ್ಟು ಫಲಿತಾಂಶ ಬಂದಿದ್ದು, ಬಿ.ಎ,. ಬಿ.ಕಾಂ, ಹಾಗೂ ಬಿಸಿಎ ಕೋರ್ಸ್‌ಗಳನ್ನು ಪ್ರಾರಂಭಿಸಲಾಗಿದೆ, ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಶಾಸಕರು ೨.೫೦ ಕೋಟಿ ರು. ಅನುದಾನವನ್ನು ಒದಗಿಸಿಕೊಟ್ಟಿದ್ದಾರೆ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಿ.ಎನ್.ಗೋಪಾಲಗೌಡ, ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ.ಸತೀಶಗೌಡರ ಸಹಕಾರ ಅನನ್ಯ ಎಂದರು.
ಡಾ.ಕಲ್ಪನಾ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು, ಸಾಂಸ್ಕೃತಿಕ, ಕ್ರೀಡಾ ಹಾಗೂ ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು.ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ.ಸತೀಶಗೌಡ, ಕಾಲೇಜು ಪ್ರಾಚಾರ್ಯ ಡಾ.ಕೆ.ಮೋಹನ್ ಕುಮಾರ್, ಸದಸ್ಯರಾದ ಮೆಹಬೂಬ್, ದೇವಿದಾಸ್ ಸುಬ್ರಾಯ್ ಶೇಠ್, ಬೆಟ್ಟಹಳ್ಳಿ ಗೋಪಿನಾಥ್, ಡಾ.ಸಾಧಿಕ್ ಪಾಷ, ಆನಂದ್, ಶ್ರೀನಿವಾಸ್. ಭಾಗ್ಯಮ್ಮ, ಕ್ರೀಡಾ ಸಂಚಾಲಕ ಬಾಲನಾಯ್ಕ್, ಸಾಂಸ್ಕೃತಿಕ ಸಮಿತಿ ಶಶಿಕಲಾ, ಎನ್ಎಸ್ಎಸ್ ಸಂಚಾಲಕ ಡಾ.ಅಮೀರ್‌ಪಾಷ, ರೆಡ್ ಕ್ರಾಸ್ ಸಂಚಾಲಕ ಕೃಷ್ಣಪ್ಪ, ನರಸಪ್ಪ, ಚನ್ನಕೃಷ್ಣ,ಸಂಗೀತಾ, ಡಾ.ಕಲ್ಪನಾ, ಜಿಯಾವುಲ್ಲಾ,ಇತರರು ಹಾಜರಿದ್ದರು.