ಸಾರಾಂಶ
ವಚನ ಗುಮ್ಮಟ ಎಂದು ಅಭಿದಾನ ಹೊಂದಿದ್ದ ಫ.ಗು. ಹಳಕಟ್ಟಿ ಅವರು ಕನ್ನಡ ನಾಡಿನ ಮನೆ-ಮನೆಗೆ ಹೋಗಿ ವಚನದ ಕಟ್ಟುಗಳನ್ನು ಸಂಗ್ರಹಿಸಿ, ತಮ್ಮ ಶಿವಾನುಭವ ಪತ್ರಿಕೆ ಮೂಲಕ ಪ್ರಕಟಿಸಿದರು.
ಧಾರವಾಡ:
ಕನ್ನಡ ನಾಡಿಗೆ ಹೊಸ ಮಾರ್ಗದ ಮೂಲಕ ಧಾರ್ಮಿಕ, ಆಧ್ಯಾತ್ಮಿಕ, ಸಾಹಿತ್ಯಿಕ ಮತ್ತು ಸಾಮಾಜಿಕ ಕಾಂತ್ರಿಗೆ ಕಾರಣವಾದ ಮತ್ತು 12ನೇ ಶತಮಾನದ ಬಸವಾದಿ ಪ್ರಮಥರು ಬರೆದ ವಚನಗಳನ್ನು ಸಂರಕ್ಷಿಸಿ, ನಾಡಿಗೆ ಪರಿಚಯಿಸಿ ಪ್ರಚುರಪಡಿಸಿದ್ದು ಶರಣ ಫ.ಗು. ಹಳಕಟ್ಟಿ ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹೇಳಿದರು.ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ವಚನ ಪಿತಾಮಹ ಫ.ಗು. ಹಳಕಟ್ಟಿ ಜನ್ಮದಿನದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ವಚನ ಗುಮ್ಮಟ ಎಂದು ಅಭಿದಾನ ಹೊಂದಿದ್ದ ಫ.ಗು. ಹಳಕಟ್ಟಿ ಅವರು ಕನ್ನಡ ನಾಡಿನ ಮನೆ-ಮನೆಗೆ ಹೋಗಿ ವಚನದ ಕಟ್ಟುಗಳನ್ನು ಸಂಗ್ರಹಿಸಿ, ತಮ್ಮ ಶಿವಾನುಭವ ಪತ್ರಿಕೆ ಮೂಲಕ ಪ್ರಕಟಿಸಿದರು. ಅವುಗಳ ಮೇಲೆ ಅಂದಿನ ವಿದ್ವಾಂಸರು, ಸಮಾಜದ ಮುಖಂಡರು ಹಾಗೂ ಸ್ವಾಮಿಜೀಗಳಿಂದ ವಿಶ್ಲೇಷಣೆ, ಅಭಿಪ್ರಾಯ ಬರೆಸಿದರು. ಹಳಕಟ್ಟಿ ಅವರ ಪರಿಶ್ರಮದಿಂದಾಗಿಯೇ ವಚನ ಸಾಹಿತ್ಯ ಉಳಿದು, ಬೆಳೆದು ಬಂದಿದೆ ಎಂದರು.ಹಳಕಟ್ಟಿ ಅವರು ತಮ್ಮ ಜೀವನದುದ್ದಕ್ಕೂ ವಚನ ಸಾಹಿತ್ಯದ ಸಂಶೋಧನೆ, ಪ್ರಕಟಣೆಗಾಗಿ ಹಗಲಿರುಳು ಶ್ರಮಿಸಿದರು. ಸಮಾಜಕ್ಕೆ ಹೊಸ ಶರಣ ಮಾರ್ಗ ತೋರಿದರು ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೇಕ್ಕೆರಿ ಸ್ವಾಗತಿಸಿದರು. ಡಾ. ಫ.ಗು. ಹಳಕಟ್ಟಿ ಅವರ ಜೀವನ ಮತ್ತು ವಚನ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಕುರಿತು ಹಿರಿಯ ಸಾಹಿತಿ ಡಾ. ಬಾಳಣ್ಣ ಶೀಗಿಹಳ್ಳಿ ವಿಶೇಷ ಉಪನ್ಯಾಸ ನೀಡಿದರು.ಹಿರಿಯರಾದ ಈಶ್ವರ ಕಡ್ಲಿಮಟ್ಟಿ, ಬಸವರಾಜ ಕೊಂಗಿ, ಸದಾನಂದ ಶಾಂತಪ್ಪ ಹಳಕಟ್ಟಿ ಸೇರಿದಂತೆ ಇದ್ದರು.