ಪುಲಕೇಶಿ, ಬಸವೇಶ್ವರ ಪುತ್ಥಳಿ ಸ್ಥಾಪನೆಗೆ ಕ್ರಮ ಕೈಗೊಳ್ಳಿ: ಸಂಸದ ಗದ್ದಿಗೌಡರ

| Published : Jan 25 2024, 02:03 AM IST

ಸಾರಾಂಶ

ಬಾಗಲಕೋಟೆ: ಜಿಲ್ಲಾ ಪಂಚಾಯತಿ ನೂತನ ಸಭಾಭವನದಲ್ಲಿ ಬುಧವಾರ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸದ ಪಿ.ಸಿ. ಗದ್ದಿಗೌಡರ, ಐತಿಹಾಸಿಕ ಬಾದಾಮಿ ನಗರವನ್ನು ಅಂದಗೊಳಿಸಲು ಹಾಗೂ ಗತವೈಭವ ಮರುಕಳುಹಿಸುವ ಕಾರ್ಯವಾಗಬೇಕಿದ್ದು, ಈ ದಿಶೆಯಲ್ಲಿ ಚಾಲುಕ್ಯರ ಪ್ರಸಿದ್ಧ ರಾಜ ಇಮ್ಮಡಿ ಪುಲಕೇಶಿ ಹಾಗೂ ಜಗಜ್ಯೋತಿ ಬಸವೇಶ್ವರರ ಪುತ್ಥಳಿಗಳು ನಿರ್ಮಾಣಗೊಂಡಿವೆ. ಶೀಘ್ರ ಅವುಗಳ ಪ್ರತಿಷ್ಠಾಪನೆಗೆ ಸ್ಥಳ ಗುರುತಿಸುವ ಕಾರ್ಯವಾಗಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಐತಿಹಾಸಿಕ ಬಾದಾಮಿ ನಗರವನ್ನು ಅಂದಗೊಳಿಸಲು ಹಾಗೂ ಗತವೈಭವ ಮರುಕಳುಹಿಸುವ ಕಾರ್ಯವಾಗಬೇಕಿದ್ದು, ಈ ದಿಶೆಯಲ್ಲಿ ಚಾಲುಕ್ಯರ ಪ್ರಸಿದ್ಧ ರಾಜ ಇಮ್ಮಡಿ ಪುಲಕೇಶಿ ಹಾಗೂ ಜಗಜ್ಯೋತಿ ಬಸವೇಶ್ವರರ ಪುತ್ಥಳಿಗಳು ನಿರ್ಮಾಣಗೊಂಡಿವೆ. ಶೀಘ್ರ ಅವುಗಳ ಪ್ರತಿಷ್ಠಾಪನೆಗೆ ಸ್ಥಳ ಗುರುತಿಸುವ ಕಾರ್ಯವಾಗಬೇಕೆಂದು ಸಂಸದ ಪಿ.ಸಿ. ಗದ್ದಿಗೌಡರ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತಿ ನೂತನ ಸಭಾಭವನದಲ್ಲಿ ಬುಧವಾರ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೃದಯ ಯೋಜನೆಯಡಿ ಪುಲಕೇಶಿಯ ಎಡರು ಪುತ್ಥಳಿ ಹಾಗೂ ಬಸವೇಶ್ವರರ ಒಂದು ಪುತ್ಥಳಿ ತಯಾರಾಗಿದ್ದು, ಅವುಗಳ ಸ್ಥಾಪನೆ ಕಾರ್ಯ ವಿಳಂಬವಾಗಿದೆ. ಆದ್ದರಿಂದ ಸ್ಥಳೀಯ ಅಧಿಕಾರಿಗಳು ಪ್ರವಾಸಿಗರಿಗೆ, ಸಾರ್ವಜನಿಕರಿಗೆ ಕಾಣುವ ರೀತಿಯಲ್ಲಿ ಸೂಕ್ತ ಸ್ಥಳ ಗುರುತಿಸಿ ಪುತ್ಥಳಿ ಪ್ರತಿಷ್ಠಾಪನೆ ಮಾಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಪಾರಂಪರಿಕ ತಾಣ ಐಹೊಳೆಯಲ್ಲಿ ದುರ್ಗಾದೇವಾಲಯ ಹಾಗೂ ಹುಚ್ಚಿಮಲ್ಲಿ ಗುಡಿ ಪುನಶ್ಛೇತನಗೊಳಿಸುವ ಕಾಮಗಾರಿಗಳು ಪ್ರಗತಿ ಹಂತದಲ್ಲಿದ್ದು, ಉಳಿದ ಐತಿಹಾಸಿಕ ಸ್ಮಾರಕಗಳ ಅಭಿವೃದ್ಧಿಗೆ ಕೈಗೊಂಡ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ತಿಳಿಸಿದರು.

ಬೆಳಗಾವಿ-ಹುನಗುಂದ-ರಾಯಚೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮೂರು ಹಂತಗಳಲ್ಲಿ ಕೈಗೊಳ್ಳಲಾಗುತ್ತಿದ್ದು, ಅಧಿಸೂಚನೆ ಹೊರಡಿಸಲಾಗಿದೆ. ಹೆಸ್ಕಾಂ, ಕೆಪಿಟಿಸಿಎಲ್ ಹಾಗೂ ಎಲ್ಐಎನ್ಟಿ ಕಂಪನಿಯವರಿಗೆ ಈ ಕುರಿತು ಪತ್ರ ಬರೆಯಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹುಬ್ಬಳ್ಳಿ ವಿಭಾಗದ ಅಧಿಕಾರಿಗಳು ಸಭೆಗೆ ತಿಳಿಸಿದರು.

ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲಿಸಿ ಆರ್ಥಿಕ ಪ್ರಗತಿ ಕಡಿಮೆಯಾಗಿದ್ದು, ಜನವರಿ ಅಂತ್ಯಕ್ಕೆ ಆರ್ಥಿಕ ಪ್ರಗತಿ ತೋರಿಸದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಆರೋಗ್ಯ ಇಲಾಖೆಯಲ್ಲಿಯೂ ಸಹ ಆರ್ಥಿಕ ಪ್ರಗತಿಯಲ್ಲಿ ಬಹಳ ಕಡಿಮೆ ಪ್ರಗತಿಹೊಂದಿದ್ದು, ಅನುದಾನ ಭರಿಸಲು ಕ್ರಮವಹಿಸಬೇಕು. ತೋಟಗಾರಿಕೆ ಬೆಳೆ ಪ್ರದೇಶ ಹೆಚ್ಚಿಸಲು ಕ್ರಮ ಕೈಗೊಳ್ಳಲು ತಿಳಿಸಿದ ಸಂಸದರು, ಕೇಂದ್ರ ಪುರಸ್ಕೃತ ಪ್ರತಿಯೊಂದು ಯೋಜನೆಗಳು ಜನರಿಗೆ ತಲುಪಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಲು ಸೂಚನೆ ನೀಡಿದರು.

ಜೆ.ಜೆ.ಎಂ ಯೋಜನೆಯಡಿ ಒಟ್ಟು ನಾಲ್ಕು ಹಂತಗಳಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. 7 ಗ್ರಾಮಗಳನ್ನು ಹೊರತುಪಡಿಸಿ ಉಳಿದ ಎಲ್ಲ ಗ್ರಾಮಗಳಲ್ಲಿ ಈ ಯೋಜನೆ ಕಾಮಗಾರಿಗಳು ಪೂರ್ಣಗೊಂಡಿವೆ. ಬಾದಾಮಿ ಹಾಗೂ ಹುನಗುಂದ ತಾಲೂಕಿನ 7 ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಕೈಗೊಳ್ಳಲು ಗ್ರಾಮಸ್ಥರ ಮನವೊಲಿಸಲು ತಿಳಿಸಿದರು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಪುನಶ್ಚೇತನ ಕಾಮಗಾರಿಗಳ ಮಾಹಿತಿಯನ್ನು ಸಹ ಪಡೆದರು.

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 2020-21ನೇ ಸಾಲಿನ ಬ್ಯಾಚ್-2ರಲ್ಲಿ ಒಟ್ಟು 24 ರಸ್ತೆ ಹಾಗೂ 10 ಸೇತುವೆ ಕಾಮಗಾರಿಗಳು ಮಂಜೂರಾಗಿದ್ದು, ಡಿಸೆಂಬರ್‌ ಅಂತ್ಯಕ್ಕೆ 15 ರಸ್ತೆ ಹಾಗೂ 3 ಸೇತುವೆ ಕಾಮಗಾರಿಗಳು ಪೂರ್ಣಗೊಂಡಿರುತ್ತವೆ. 2022-23ರಲ್ಲಿ 10 ರಸ್ತೆ ಹಾಗೂ 2 ಸೇತುವೆ ಕಾಮಗಾರಿಗಳು ಮಂಜೂರಾಗಿದ್ದು, ಕಾಮಗಾರಿ ಪ್ರಾರಂಭಗೊಂಡಿವೆ. ಡಿಸೆಂಬರ್‌ ಅಂತ್ಯಕ್ಕೆ 22.15 ಕಿ.ಮೀ ಹಾಗೂ ಕಳೆದ ಸಾಲಿನಲ್ಲಿ 113.12 ಕಿ.ಮೀ ಸೇರಿ ಒಟ್ಟು 135.37 ಕಿ.ಮೀ ರಸ್ತೆ ಕಾಮಗಾರಿ ಪೂರ್ಣಗೊಂಡಿವೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ವಿವಿಧ ಇಲಾಖೆಯ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.

ಸಭೆಯಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿ.ಪಂ ಸಿಇಒ ಶಶಿಧರ ಕುರೇರ, ಉಪ ಕಾರ್ಯದರ್ಶಿ ಅಮರೇಶ ನಾಯಕ, ನಾಮನಿರ್ದೇಶಿತ ಸದಸ್ಯ ಯಲ್ಲಪ್ಪ ಬೆಂಡಿಗೇರಿ, ಜಿಪಂ ಮುಖ್ಯ ಯೋಜನಾಧಿಕಾರಿ ಪುನಿತ್, ಯೋಜನಾಧಿಕಾರಿ ಎನ್.ವೈ. ಬಸರಿಗಿಡದ, ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ ಹಾಗೂ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.