ಕನ್ನಡಪ್ರಭ ವಾರ್ತೆ, ತುಮಕೂರುಸಾರ್ವಜನಿಕರ ಮೇಲೆ ಜೇನು ಹುಳುಗಳು ದಾಳಿ ಮಾಡುತ್ತಿರುವ ಪ್ರಕರಣ ಜಿಲ್ಲೆಯಲ್ಲಿ ಹೆಚ್ಚುತ್ತಿದ್ದು, ತಡೆಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಯುವ ಘಟಕದ ಮುಖಂಡರು ಗುರುವಾರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ಅವರಿಗೆ ಮನವಿಪತ್ರ ಸಲ್ಲಿಸಿದ ಮಹಾಸಭಾ ಯುವ ಘಟಕ ಜಿಲ್ಲಾಧ್ಯಕ್ಷ ಡಾ. ದರ್ಶನ್ ಕೆ.ಎಲ್ ಮಾತನಾಡಿ, ಜಿಲ್ಲೆಯಲ್ಲಿ ಜೇನುಹುಳುಗಳ ದಾಳಿ ಮಾಡಿದ ಪ್ರಕರಣಗಳು ಹೆಚ್ಚಾಗುತ್ತಿವೆ. ಜೇನುಹುಳುಗಳ ಕಡಿತದಿಂದ ಗಾಯಗೊಂಡ ಅನೇಕರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚೆಗೆ ಜೇನು ಕಡಿತದಿಂದ ತುಮಕೂರಿನ ವಿಜಯಕುಮಾರ್ ಎಂಬುವವರು ಮೃತಪಟ್ಟರು. ಇದರಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ ಎಂದು ಹೇಳಿದರು.ಮರಗಳಲ್ಲಿ ಕಟ್ಟಿರುವ ಜೇನುಗೂಡಿಗೆ ಕಿಡಿಗೇಡಿಗಳು ಕಲ್ಲು ಹೊಡೆದಾಗ, ಪಕ್ಷಿ, ಪ್ರಾಣಿಗಳು ಜೇನುಗೂಡನ್ನು ಕೆಣಕಿದಾಗ ಗೂಡಿನ ಲಕ್ಷಾಂತರ ಸಂಖ್ಯೆಯ ಜೇನು ಹುಳುಗಳು ಎದ್ದು ಸಾರ್ವಜನಿಕರ ಮೇಲೆ ದಾಳಿ ಮಾಡುತ್ತವೆ. ವಾಹನ ಸಂಚಾರ ಮಾಡುವವರನ್ನೂ ಜೇನು ಹುಳುಗಳು ಕಚ್ಚಿ ಗಾಬರಿ ಮಾಡುತ್ತವೆ. ಇದರಿಂದ ವಾಹನ ಸಂಚಾರವೂ ಅಸ್ತವ್ಯಸ್ತವಾಗುತ್ತದೆ. ಜೇನುಹುಳುಗಳ ಹಾವಳಿಯಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟಾಗಿದೆ ಎಂದಿದ್ದಾರೆ.ಜೇನು ಹುಳುಗಳು ದಾಳಿ ಮಾಡಿ ಕಚ್ಚಿದ ಪರಿಣಾವ ಸಾವುನೋವಿನ ಪ್ರಕರಣಗಳು ನಡೆದಿದೆ. ಮಕ್ಕಳು, ವಯೋವೃದ್ಧರು ಜೇನುಹುಳುಗಳ ದಾಳಿಯಿಂದ ತಪ್ಪಿಸಿಕೊಳ್ಳಲಾಗದೆ ಅಪಾಯ ಅನುಭವಿಸುವಂತಾಗಿದೆ. ಈ ಕಾರಣದಿಂದ ತುಮಕೂರು ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ಪಟ್ಟಣಗಳು, ಗ್ರಾಮಗಳಲ್ಲಿ ಜೇನು ಹುಳುಗಳ ದಾಳಿ ತಡೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು. ಇತ್ತೀಚೆಗೆ ನಗರದ ವಿಜಯಕುಮಾರ್ ಎಂಬುವವರು ಜೇನು ಹುಳುಗಳ ಕಡಿತದಿಂದ ಮೃತಪಟ್ಟಿದ್ದಾರೆ. ಈ ಸಂಬಂಧ ನಗರದ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಡಾ. ದರ್ಶನ್ ವಿನಂತಿಸಿಕೊಂಡರು. ಈ ಸಂಬಂಧ ಉಪ ಅರಣ್ಯಸಂರಕ್ಷಣಾಧಿಕಾರಿಗಳು, ತುಮಕೂರು ನಗರಪಾಲಿಕೆ ಆಯುಕ್ತರಿಗೂ ಮನವಿಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಘಟಕದ ಜಿಲ್ಲಾ ಖಜಾಂಚಿ ಭಾನುಪ್ರಕಾಶ್ ಆರಾಧ್ಯ, ನಿರ್ದೇಶಕ ಬಸಯ್ಯ, ನಗರಪಾಲಿಕೆ ಘಟಕ ಅಧ್ಯಕ್ಷ ಎಂ.ಎಸ್. ಗುರುಪ್ರಸಾದ್, ಉಪಾಧ್ಯಕ್ಷ ರವಿಕುಮಾರ್, ತಾಲೂಕು ಪ್ರಧಾನ ಕಾರ್ಯದರ್ಶಿ ಎಚ್.ಎಂ. ಲೋಕೇಶ್, ಬಸವ ಸೇನೆ ಅಧ್ಯಕ್ಷ ಕನ್ನಡ ಪ್ರಕಾಶ್ ಮೊದಲಾದವರು ಹಾಜರಿದ್ದರು.ಜೇನುಹುಳು ದಾಳಿ ತಡೆಗೆ ಕ್ರಮ ಕೈಗೊಳ್ಳಿ
ಸಾರ್ವಜನಿಕರ ಮೇಲೆ ಜೇನು ಹುಳುಗಳು ದಾಳಿ ಮಾಡುತ್ತಿರುವ ಪ್ರಕರಣ ಜಿಲ್ಲೆಯಲ್ಲಿ ಹೆಚ್ಚುತ್ತಿದ್ದು, ತಡೆಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಯುವ ಘಟಕದ ಮುಖಂಡರು ಗುರುವಾರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.