ಸಾರಾಂಶ
ಕಾರವಾರ: ಸ್ಥಳೀಯ ಮಹಿಳೆಯರಿಗೆ ಅನುಕೂಲವಾಗಲು ಮಾಡಿರುವ ಯುನಿಯನ್‌ಗೆ ನನ್ನ ಸಹಾಯ, ಸಹಕಾರ ಸದಾ ಇರುತ್ತದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ತಿಳಿಸಿದರು.ತಾಲೂಕಿನ ಐಸ್ ಫ್ಯಾಕ್ಟರಿ ಚೆಂಡಿಯಾದಲ್ಲಿ ಸೋಮವಾರ ನಡೆದ ಮಹಿಳಾ ಶಕ್ತಿ ಸ್ಥಳೀಯ ಸೀಬರ್ಡ್ ನಿರಾಶ್ರಿತರ ಮತ್ತು ಕಟ್ಟಡ ಕೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಯುನಿಯನ್ ಉದ್ಘಾಟಿಸಿ ಮಾತನಾಡಿದರು.ಸ್ಥಳೀಯ ಮಹಿಳೆಯರಿಗೆ ಅನುಕೂಲವಾಗಲು ಮಾಡಿರುವ ಯುನಿಯನ್‌ಗೆ ಶುಭವಾಗಲಿ. ಈ ಯುನಿಯನ್‌ಗೆ ನನ್ನ ಸಹಕಾರ ಸದಾ ಇರುತ್ತದೆ. ದೇಶಕ್ಕೆ ತಾಯಂದಿರ ಶಕ್ತಿಯೇ ಮೇಲು. ಭಾರತ ಮಾತೆಯನ್ನು ಪೂಜಿಸುವ ಮತ್ತು ಗೌರವಿಸುವ ಸಂಸ್ಕೃತಿ ನಮ್ಮದು. ಸಂಘದಲ್ಲಿ ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದರು.
ಅದೆಷ್ಟೋ ಕುಟುಂಬಗಳನ್ನು ಮಹಿಳೆಯರೇ ನಿರ್ವಹಣೆ ಮಾಡುತ್ತಿದ್ದಾರೆ. ದುಡಿದ ಹಣವನ್ನು ಕೂಡಿಡುವ ಮೂಲಕ ಕಷ್ಟ ಕಾಲದಲ್ಲಿ ಆ ಹಣ ನೆರವಾಗುತ್ತದೆ. ಕೇವಲ ಸಾಲ ಪಡೆಯುವುದಕ್ಕೆ ಸಂಘ ಬಳಕೆಯಾಗಬಾರದು. ವಿವಿಧ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಂಘವನ್ನು ಬೆಳೆಸಬಹುದು. ಹಣವನ್ನು ಉಳಿತಾಯ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರಿಗೆ ಅನುಕೂಲವಾಗುವ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದರು.ಕೇಂದ್ರ ಸರ್ಕಾರದ ಯೋಜನೆಯೊಂದು ಯಾವುದೇ ಭದ್ರತೆ ಇಲ್ಲದೆ ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯ ಪಡೆಯಬಹುದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದ ವಿಶ್ವಕರ್ಮ ಯೋಜನೆಯ ಮೂಲಕ ಸಾಲ ಪಡೆದು ಸಣ್ಣ ಉದ್ಯಮವನ್ನು ಪ್ರಾರಂಭಿಸಬಹುದು. ಸ್ವಯಂ ಉದ್ಯೋಗಕ್ಕೆ ಅನುಕೂಲವಾಗುತ್ತದೆ ಎಂದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಪೂಜಾ ನಾಯ್ಕ, ಉಪಾಧ್ಯಕ್ಷ ಜೋಗಿ ಗುನಗಿ, ಯುನಿಯನ್‌ನ ಪ್ರಮುಖರಾದ ಜ್ಯೋತಿ ತಳೇಕರ, ಸಾಧನಾ ತಳೇಕರ, ಉತ್ತರಕನ್ನಡ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜಾತಾ ಬಾಂದೇಕರ, ಗ್ರಾಪಂ ಸದಸ್ಯರಾದ ಜಿತೇಶ್ ಅರ್ಗೇಕರ, ಆನಂದು ಗಾಂವಕರ, ಕಲ್ಪನಾ ನಾಯ್ಕ, ದೀಪಾ ಆಗೇರ, ಅಮದಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಆಶಾ ನಾಯ್ಕ, ಚೆಂಡಿಯಾ ಮಹಾಶಕ್ತಿ ಕೇಂದ್ರದ ಸತೀಶ ತಳೇಕರ ಮತ್ತಿತರರು ಇದ್ದರು.