ನರೇಗಾ ಯೋಜನೆ ಸದುಪಯೋಗ ಪಡೆಯಿರಿ

| Published : Apr 01 2024, 12:49 AM IST

ಸಾರಾಂಶ

ವಿಜಯಪುರ: ಗ್ರಾಮೀಣ ಪ್ರದೇಶದಲ್ಲಿನ ಜನರು ವಲಸೆ ಹೋಗುವುದನ್ನು ತಪ್ಪಿಸಲು ಹಮ್ಮಿಕೊಂಡ ಮಹತ್ವಾಕಾಂಕ್ಷಿ ಯೋಜನೆ ನರೇಗಾ. ನರೇಗಾ ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರಿಗೆ ಈಗ ದಿನಗೂಲಿಯ ಮೊತ್ತ ₹ ೩೪೯ ಮಾಡಲಾಗಿದೆ. ಇದರ ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬೇಕು ಎಂದು ಜಿಪಂ ಸಿಇಒ ರಿಶಿ ಆನಂದ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಗ್ರಾಮೀಣ ಪ್ರದೇಶದಲ್ಲಿನ ಜನರು ವಲಸೆ ಹೋಗುವುದನ್ನು ತಪ್ಪಿಸಲು ಹಮ್ಮಿಕೊಂಡ ಮಹತ್ವಾಕಾಂಕ್ಷಿ ಯೋಜನೆ ನರೇಗಾ. ನರೇಗಾ ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರಿಗೆ ಈಗ ದಿನಗೂಲಿಯ ಮೊತ್ತ ₹ ೩೪೯ ಮಾಡಲಾಗಿದೆ. ಇದರ ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬೇಕು ಎಂದು ಜಿಪಂ ಸಿಇಒ ರಿಶಿ ಆನಂದ ಕರೆ ನೀಡಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತಾಲಯದ ನಿರ್ದೇಶನದಂತೆ ಜಿಲ್ಲೆಯಾದ್ಯಂತ ಯೋಜನೆಯಡಿ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ನಿರಂತರ ಕೆಲಸ ಒದಗಿಸಿ ವಲಸೆ ತಡೆಯುವ ಉದ್ದೇಶದಿಂದ ವಲಸೆ ಯಾಕ್ರಿ ನಿಮ್ಮೂರಲ್ಲೇ ಉದ್ಯೋಗ ಖಾತ್ರಿ/ಉದ್ಯೋಗ ಖಾತ್ರಿ ದುಡಿಮೆ ಖಾತ್ರಿ ಅಭಿಯಾನವನ್ನು ಮಾರ್ಚ್ ೧೫ ರಿಂದ ಮೇ ೩೧ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಮಳೆ ಕೊರತೆಯಿಂದ ವಿಜಯಪುರ ಜಿಲ್ಲೆಯ ೧೩ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಜಿಲ್ಲೆಯಲ್ಲಿ ತಲೆದೋರಿರುವ ಬರದಿಂದ ಗ್ರಾಮೀಣ ಪ್ರದೇಶದ ಅನೇಕ ಕುಟುಂಬಗಳಿಗೆ ಜೀವನ ನಿರ್ವಹಣೆಗೆ ನರೇಗಾ ಯೋಜನೆಯಡಿ ಸ್ಥಳೀಯವಾಗಿ ಅಕುಶಲ ಕೆಲಸ ಒದಗಿಸಲಾಗುತ್ತಿದೆ.ಜನರು ಉದ್ಯೋಗ ಅರಸಿ ವಲಸೆ ಹೋಗುತ್ತಿರುವುದನ್ನು ತಡೆಯಲು, ಮುಂಗಾರು ಆರಂಭಕ್ಕೂ ಮುನ್ನ ಹೆಚ್ಚಿನ ಜನರಿಗೆ ಸ್ಥಳೀಯವಾಗಿ ನಿಗದಿತ ಸಮಯದಲ್ಲಿ ನಿರಂತರ ಕೆಲಸ ಒದಗಿಸುವುದು ಅಗತ್ಯವಾಗಿದೆ.

ಗುಳೆ ತಡೆಯುವ ಉದ್ದೇಶ:

ಬೇಸಿಗೆ ಬಂದರೆ ಗ್ರಾಮಗಳನ್ನು ತೊರೆದು ಬೇರೆ ರಾಜ್ಯಗಳಿಗೆ ಹಾಗೂ ಜಿಲ್ಲೆಗಳಿಗೆ ಜನರು ವಲಸೆ ಹೋಗುವುದನ್ನು ತಡೆಗಟ್ಟುವುದು ಹಾಗೂ ಗ್ರಾಮೀಣ ಪ್ರದೇಶದ ಎಲ್ಲಾ ಜನರಿಗೆ ನಿರಂತರ ಉದ್ಯೋಗ ಒದಗಿಸಿ ಜೀವನ ಸಂಕಷ್ಟ ನೀಗಿಸುವ ಉದ್ದೇಶದಿಂದ ಈ ಅಭಿಯಾನ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಉದ್ಯೋಗ ಚೀಟಿ ಹೊಂದಿರುವ ಎಲ್ಲ ಕುಟುಂಬಗಳು ಗ್ರಾಮ ಪಂಚಾಯತಿ ವತಿಯಿಂದ ಹಮ್ಮಿಕೊಂಡಿರುವ ಈ ಅಭಿಯಾನದಲ್ಲಿ ಸ್ಥಳೀಯವಾಗಿ ಉದ್ಯೋಗ ಪಡೆದು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆ ಮೂಲಕ ಕೋರಿದ್ದಾರೆ.

ಮಾಹಿತಿಗಾಗಿ ನರೇಗಾ ಸಹಾಯವಾಣಿ ಸಂಖೆ: ೮೨೭೭೫೦೬೦೦೦ ಹಾಗೂ ಜಿಪಂ ನರೇಗಾ ಸಹಾಯವಾಣಿ ಸಂಖ್ಯೆ: ೯೪೮೦೮ ೩೧೬೯೯ ಗೆ ಸಂಪರ್ಕಿಸಬಹುದು ಅಥವಾ ಹತ್ತಿರದ ಗ್ರಾಪಂಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ತಿಳಿಸಿದ್ದಾರೆ.---

ಕೋಟ್----

೨೦೨೪-೨೫ನೇ ಸಾಲಿಗೆ ವಿಜಯಪುರ ಜಿಲ್ಲೆಗೆ ೪೨ ಲಕ್ಷ ಮಾನವ ದಿನಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ಮಾನವೃ ದಿನ ಸೃಷ್ಟಿಸಲು ಗ್ರಾಮ ಪಂಚಾಯತಿಗಳ ಕ್ರಿಯಾಯೋಜನೆ ಈಗಾಗಲೇ ಅನುಮೋದಿಸಲಾಗಿದೆ. ಅನುಮೋದನೆಯಾದ ಕಾಮಗಾರಿಗಳಲ್ಲಿನ ಸಮುದಾಯ ಹಾಗೂ ಕೂಲಿ ಆಧಾರಿತ ಕಾಮಗಾರಿಗಳನ್ನು ಮಾತ್ರ ಆರ್ಥಿಕ ವರ್ಗದ ಏಪ್ರಿಲ್, ಮೇ ಮತ್ತು ಜೂನ್ ಮಾಹೆಗಳಲ್ಲಿ ಅನುಷ್ಠಾನಗೊಳಿಸಲು ಅವಕಾಶ ನೀಡಲಾಗಿದೆ.

-ರಿಶಿ ಆನಂದ ಜಿಪಂ ಸಿಇಒ