ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ ಜನ ಸಾಮಾನ್ಯರನ್ನು ಆರ್ಥಿಕವಾಗಿ ಸದೃಢಗೊಳಿಸಲು ಪಂಚ ಗ್ಯಾರಂಟಿ ಯೋಜನೆಗಳನ್ನು ಕರ್ನಾಟಕ ಸರ್ಕಾರ ಜಾರಿಗೆ ತಂದಿದೆ. ಯೋಜನೆ ಸದುಪಯೋಗಪಡಿಸಿಕೊಳ್ಳಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಮಂಗಳವಾರ ಮೈಷುಗರ್ ಫ್ಯಾಕ್ಟರಿ ಮೈದಾನದಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾರಂಭ ಮತ್ತು ಡಿಸಿಸಿ ಬ್ಯಾಂಕ್ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ ವಿತರಣೆ ಹಾಗೂ ಮಾಹಿತಿ ನೀಡುವ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ಡಿಸಿಸಿ ಬ್ಯಾಂಕ್‌ನಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ₹112 ಕೋಟಿ ಗಳನ್ನು 5 ಲಕ್ಷದೊಳಗಿನ ಸಾಲವನ್ನು ಬಡ್ಡಿ ರಹಿತವಾಗಿ ನೀಡಲಾಗುತ್ತಿದೆ. 5 ಲಕ್ಷಕ್ಕಿಂತ ಹೆಚ್ಚಿನ ಸಾಲಕ್ಕೆ ಮಾತ್ರ ಬಡ್ಡಿ ವಿಧಿಸಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಈ ವರ್ಷ 20 ಲಕ್ಷ ರೈತರಿಗೆ 16 ಸಾವಿರ ಕೋಟಿ ರು. ಬಡ್ಡಿ ರಹಿತ ( ಶೂನ್ಯ ಬಡ್ಡಿ)ಸಾಲ ನೀಡಲಾಗಿದೆ. ಅದರ ಬಡ್ಡಿಯನ್ನು ಸರ್ಕಾರ ಡಿಸಿಸಿ ಬ್ಯಾಂಕಿಗೆ ಪಾವತಿಸುತ್ತದೆ. ಮಹಿಳೆಯರ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿದ ಶಕ್ತಿ ಯೋಜನೆಯ ಸೌಲಭ್ಯ ಇದುವರೆಗೆ 3.58 ಕೋಟಿ ಜಿಲ್ಲೆಯ ಮಹಿಳೆಯರು ಸದುಪಯೋಗವನ್ನು ಪಡೆದುಕೊಂಡಿದ್ದಾರೆ ಎಂದರು.ಗೃಹಲಕ್ಷ್ಮಿ ಯೋಜನೆಯಡಿ ತಲಾ 2000 ರು.ನಂತೆ 435820 ಮಹಿಳೆಯರಿಗೆ ನೀಡಿ 89.17 ಕೋಟಿ ರು. ವೆಚ್ಚ ಭರಿಸಿದೆ. ಗೃಹ ಜ್ಯೋತಿ ಯೋಜನೆಯಲ್ಲಿ ಜಿಲ್ಲೆಯಲ್ಲಿರುವ 4 ಲಕ್ಷದ 64 ಸಾವಿರ ಕುಟುಂಬಗಳು ಫಲಾನುಭವಿಯಾಗಿದ್ದು, 76 ಸಾವಿರ ಕೋಟಿ ರು. ಹಣವನ್ನು ಸರ್ಕಾರ ಪಾವತಿಸಿದೆ ಎಂದರು.
ಜಿಲ್ಲೆಯಲ್ಲಿ 2600 ಯುವಕರು ಯುವನಿಧಿ ಯೋಜನೆಯಲ್ಲಿ ನೋಂದಣಿಯಾಗಿದ್ದು, ಪದವೀಧರರಿಗೆ 3000 ಹಾಗೂ ಡಿಪ್ಲೋಮೋ ಮುಗಿಸಿದವರಿಗೆ ನಿರುದ್ಯೋಗ ಭತ್ಯೆಯಾಗಿ ಗರಿಷ್ಠ 2 ವರ್ಷದವರೆಗೆ 1500 ರು. ಹಣವನ್ನು ಈ ಯೋಜನೆಯಡಿ ನೀಡಲಾಗುವುದು ಎಂದರು.ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಸರ್ಕಾರ ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನ ಮಾಡಿದೆ. ಮುಂದಿನ ದಿನಗಳಲ್ಲಿ ಹೊಸ ಸಕ್ಕರೆ ಕಾರ್ಖಾನೆಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ರೈತರ ಬದುಕು ಸುಧಾರಿಸಲು ವಿ.ಸಿ.ನಾಲೆ ಹಾಗೂ ಅಣೆಕಟ್ಟು ನಾಲೆ ಆಧುನೀಕರಣ ಗೊಳಿಸಿ ಕಟ್ಟಕಡೆಯ ಭಾಗಕ್ಕೆ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ಸದಾ ರೈತರ ಅಭಿವೃದ್ಧಿಯ ಬಗ್ಗೆ ಚಿಂತಿಸುತ್ತದೆ ಎಂದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳಿಂದ ಸ್ಥಳೀಯವಾಗಿ ಜನರ ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತಿದೆ. ಪರಿಸರದಲ್ಲಿ ಆಗುತ್ತಿರುವ ವೈಪರೀತ್ಯದಿಂದ ಕೃಷಿ ಪದ್ಧತಿಯಲ್ಲಿ ಹೊಸ ಬದಲಾವಣೆ ಮಾಡಿಕೊಳ್ಳಬೇಕಿದೆ. ಈ ಬಗ್ಗೆ ರೈತರಿಗೆ ಹೆಚ್ಚಿನ ಮಾಹಿತಿಯನ್ನು ಇಲಾಖೆಗಳು ನೀಡಬೇಕು ಎಂದರು.ಶಾಸಕ ಪಿ.ರವಿಕುಮಾರ್ ಮಾತನಾಡಿ, ಮಂಡ್ಯ ತಾಲೂಕಿನ ಬಸರಾಳಿನಲ್ಲಿರುವ 100 ಎಕರೆ ಸ್ಥಳದಲ್ಲಿ ಜವಳಿ ಪಾರ್ಕ್ ಹಾಗೂ ಸಾಫ್ಟವೇರ್ ಕಂಪನಿಗಳನ್ನು ಪ್ರಾರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಇದರಿಂದ ಜಿಲ್ಲೆಯ ನಿರುದ್ಯೋಗಿಗಳಿಗೆ ಕೆಲಸ ಸಿಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿ ಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಶೇಖ್ ತನ್ವಿರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಡಿ. ಸಿ. ಸಿ. ಬ್ಯಾಂಕ್ ಕಾರ್ಯ ನಿರ್ವಹಣಾ ಅಧಿಕಾರಿ ಸಿ. ವನಜಾಕ್ಷಿ ಹಾಗೂ ಇನ್ನಿತರು ಉಪಸ್ಥಿತರಿದ್ದರು.