ಸಾರಾಂಶ
ಕನ್ನಡಪ್ರಭ ವಾರ್ತೆ ಇಳಕಲ್ಲ
ಕೌಶಲ್ಯ ಯೋಜನೆಯಡಿ ಸರ್ಕಾರದ ಸೌಲಭ್ಯಗಳನ್ನು ಯುವಜನತೆ ಸದುಪಯೋಗ ಪಡೆದುಕೊಳ್ಳಬೇಕೆಂದು ಶಿಕ್ಷಣ ಇಲಾಖೆಯ ಕೇಂದ್ರ ಶಾಲೆಯ ಮುಖ್ಯ ಶಿಕ್ಷಕ ಶ್ರೀಧರ ಜೋಗಿನ ತಿಳಿಸಿದರು.ನಗರದ ಮುಖಮುಖಿ ಸಾಮಾಜಿಕ ಸ್ಪಂದನ ಸಂಸ್ಥೆ, ಯುಕ್ತ ಕೌಶಲ್ಯ ತರಬೇತಿ ಕೇಂದ್ರ (ಕೌಶಲ್ಯ ಪಥ) ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇಳಕಲ್ಲ ಇವರ ಸಂಯುಕ್ತ ಆಶ್ರಯದಲ್ಲಿ ವಿವಿಧ ಕೌಶಲ್ಯ ತರಬೇತಿ ಉಚಿತ ಕಾರ್ಯಾಗಾರ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ, ಇಂದಿನ ಯುವಕರಿಗೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕೌಶಲ್ಯ ಯೋಜನೆ ಹಾಗೂ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ಕೌಶಲ್ಯ ಯೋಜನೆ ಸುಮಾರು ವರ್ಷಗಳಿಂದ ರಾಜ್ಯದಲ್ಲಿ ಜಾರಿಯಲ್ಲಿದೆ. ಕೌಶಲ್ಯ ತರಬೇತಿ ಯೋಜನೆ ಅಡಿಯಲ್ಲಿ ವಿದ್ಯಾವಂತ ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ ಕೇಂದ್ರಗಳ ಮೂಲಕ ತಲುಪಿಸುವಲ್ಲಿ ಯಶಸ್ವಿಕಾರಿಯಾಗಿವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಮೊಹಮ್ಮದ್ ಆರೀಫ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾವಂತ ನಿರುದ್ಯೋಗಿ ಯುವಕರಲ್ಲಿ ಆತ್ಮವಿಶ್ವಾಸ ಇರುತ್ತದೆ. ಅವುಗಳನ್ನು ಬಳಸಿಕೊಂಡು ಉದ್ಯೋಗ, ಉದ್ದಿಮೆ ಸ್ಥಾಪಿಸಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.ತರಬೇತಿ ಕಾರ‍್ಯಾಗಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರು ಅನಿಸಿಕೆ ಹಂಚಿಕೊಂಡರು. ಮುಖಾಮುಖಿ ಸಾಮಾಜಿಕ ಸ್ಪಂದನ ಸಂಸ್ಥೆಯ ಉಪಾಧ್ಯಕ್ಷ ಲಾಲ್ ಬಾಷಾ ಶಿವನಗುತ್ತಿ, ಖಜಾಂಚಿಯಾದ ವೆಂಕಟೇಶ್ ಬಂಡಿ, ಪ್ರಧಾನ ಕಾರ್ಯದರ್ಶಿ ಶೇಖರಯ್ಯ ಹಿರೇಮಠ, ಕಾಲೇಜಿನ ಉದ್ಯೋಗ ಭರವಸೆಯ ಸಂಯೋಜಕಿ ಗಾಯತ್ರಿ ದಾದ್ಮಿ ಇದ್ದರು. ಕೌಶಲ್ಯ ತರಬೇತಿ ಕಾರ್ಯಕ್ರಮದ ಕುರಿತು ಉಪನ್ಯಾಸ ನೀಡಿದ ಶ್ರೀಧರ್ ಜೋಗಿನ್ ಅವರಿಗೆ ಕಾಲೇಜು ವತಿಯಿಂದ ಸನ್ಮಾನಿಸಲಾಯಿತು. ಶಿಕ್ಷಕಿ ಮಹಾದೇವಿ ಇಂಜನಗೇರಿ ನಿರೂಪಿಸಿದರು. ಮಹಾಂತೇಶ ಜೀವಣ್ಣನವರ್ ವಂದಿಸಿದರು.