ಸಾರಾಂಶ
ಒಂದು ವರ್ಷದಿಂದ ೧೯ ವರ್ಷದ ವಯಸ್ಸಿನವರು ಅಲ್ಬೆಂಡಾಜೋಲ್ ಮಾತ್ರೆ ಸೇವನೆ ಮಾಡುವುದರಿಂದ ಜಂತುಹುಳು ನಿವಾರಣೆಗೆ ಅನುಕೂಲವಾಗುತ್ತದೆ.
ರಾಷ್ಟ್ರೀಯ ಜಂತುಹುಳು ನಿವಾರಣೆ ಕಾರ್ಯಕ್ರಮ ಉದ್ಘಾಟಿಸಿದ ತಾಲೂಕಾ ಆರೋಗ್ಯಾಧಿಕಾರಿ
ಕನ್ನಡಪ್ರಭ ವಾರ್ತೆ ಯಲಬುರ್ಗಾಒಂದು ವರ್ಷದಿಂದ ೧೯ ವರ್ಷದ ವಯಸ್ಸಿನವರು ಅಲ್ಬೆಂಡಾಜೋಲ್ ಮಾತ್ರೆ ಸೇವನೆ ಮಾಡುವುದರಿಂದ ಜಂತುಹುಳು ನಿವಾರಣೆಗೆ ಅನುಕೂಲವಾಗುತ್ತದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ. ಅಮರೇಶ ನಾಗರಾಳ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹಾಗೂ ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಜಂತುಹುಳು ನಿವಾರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಂತುಹುಳುಗಳ ಭಾದೆಯಿಂದ ತಪ್ಪಿಸಿಕೊಳ್ಳಲು ಈ ಮಾತ್ರೆ ಸೇವಿಸಬೇಕು. ರಾಜ್ಯಾದ್ಯಂತ ಈ ಕಾರ್ಯಕ್ರಮವು ಡಿ. ೯ರಿಂದ ಪ್ರಾರಂಭವಾಗುತ್ತಿದ್ದು, ವರ್ಷಕ್ಕೆ ಎರಡು ಮಾತ್ರೆಯಂತೆ ಆರು ತಿಂಗಳಿಗೆ ಒಂದು ಬಾರಿ ಈ ಮಾತ್ರೆಯನ್ನು ವಿತರಿಸಲಾಗುತ್ತದೆ. ಜತೆಗೆ ಕ್ಷಯ ರೋಗದ ಲಕ್ಷಣ ಕುರಿತು ನಾವು ಎಚ್ಚರಿಕೆಯಿಂದ ಇರಬೇಕು. ತ್ವರಿತವಾಗಿ ಪರೀಕ್ಷೆ ಮಾಡಿಸಿದರೆ ಕ್ಷಯ ರೋಗದಿಂದ ಜೀವಗಳನ್ನು ಉಳಿಸಿಕೊಳ್ಳಬಹುದು. ಜತೆಗೆ ಟಿಬಿ ಮುಕ್ತ ಭಾರತ ೧೦೦ ದಿನಗಳ ಅಭಿಯಾನವನ್ನು ಆರೋಗ್ಯ ಇಲಾಖೆಯು ಹಮ್ಮಿಕೊಂಡಿದ್ದು, ಇದಕ್ಕೆ ಪ್ರತಿಯೊಬ್ಬರು ಸಹಕರಿಸುವ ಮೂಲಕ ಕ್ಷಯ ರೋಗದ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.ಹದಿಹರೆಯದವರ ಆರೋಗ್ಯ ಆಪ್ತಸಮಾಲೋಚಕ ಶರಣಪ್ಪ ಉಪ್ಪಾರ ಮಾತನಾಡಿ, ಜಂತುಹುಳು ಭಾದೆಗಳಿಂದ ಹಸಿವಾಗದಿರುವಿಕೆ, ರಕ್ತ ಹೀನತೆ, ನಿಶಕ್ತಿ, ಹೊಟ್ಟೆ ನೋವು, ವಾಂತಿ ಭೇದಿ, ತೂಕದಲ್ಲಿ ಇಳಿಕೆ, ಮಾನಸಿಕ ಅನಾರೋಗ್ಯ ಉಂಟಾಗುತ್ತದೆ ಇದರ ಬಗ್ಗೆ ಹದಿಹರೆಯದವರು ಈ ಲಕ್ಷಣಗಳನ್ನು ತಿಳಿದುಕೊಳ್ಳಬೇಕು ಎಂದರು.
ಪ್ರ‍್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಶ್ರೀದೇವಿ ಹಾಗೂ ಶಿಲ್ಪಾ ಭಜಂತ್ರಿ ಮಾತನಾಡಿ, ಕೈ ತೊಳೆಯುವ ವಿಧಾನಗಳ ಕುರಿತು ಮಾರ್ಗದರ್ಶನ ನೀಡಿದರು. ಶಾಲೆಯ ಮುಖ್ಯ ಗುರು ದುರ್ಗಪ್ಪ ಹಿರೇಮನಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೆ. ಎಚ್ ಛೇತ್ರದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಶಾಲೆಯ ಶಿಕ್ಷಕರು, ಉಪನ್ಯಾಸಕರು, ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.