ಸಾರಾಂಶ
ಹಾನಗಲ್ಲ: ಪುರಸಭೆ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಾರದು. ಸಮಸ್ಯೆ ಉಲ್ಬಣಗೊಳ್ಳದಂತೆ ಮುನ್ನೆಚ್ಚರಿಕೆ ವಹಿಸಿ, ಲಭ್ಯ ಜಲಮೂಲ ಸದ್ಬಳಕೆ ಮಾಡಿಕೊಂಡು ಸಮರ್ಪಕ ನೀರು ಪೂರೈಕೆಗೆ ಕಾಳಜಿ ವಹಿಸಿ ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ್ ಅವರಿಗೆ ಶಾಸಕ ಶ್ರೀನಿವಾಸ ಮಾನೆ ಸೂಚಿಸಿದರು.
ಪಟ್ಟಣಕ್ಕೆ ನೀರು ಪೂರೈಕೆಗೆ ಸಂಬಂಧಿಸಿದಂತೆ ಪುರಸಭೆಯ ಆಡಳಿತಾಧಿಕಾರಿಯಾಗಿರುವ ಸವಣೂರು ಉಪ ವಿಭಾಗಾಧಿಕಾರಿ, ಪುರಸಭೆ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಸಮರ್ಪಕ ಕುಡಿಯುವ ನೀರು ಪೂರೈಕೆ ಈ ಬಾರಿ ಸವಾಲಿನಿಂದ ಕೂಡಿದೆ. ನಿರ್ಲಕ್ಷ್ಯ ವಹಿಸಿದರೆ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ. ತೀವ್ರ ಮಳೆ ಕೊರತೆಯ ಕಾರಣ ಅಂತರ್ಜಲ ಪ್ರಮಾಣ ಕಡಿಮೆಯಾಗಿದೆ. ಕುಡಿಯುವ ನೀರಿಗೆ ಪರಿತಪಿಸುವ ಸ್ಥಿತಿ ಇದ್ದರೂ ಕೆಲವೆಡೆ ನೀರನ್ನು ವ್ಯರ್ಥ ಮಾಡಲಾಗುತ್ತಿದೆ. ನೀರಿನ ಅಪವ್ಯಯ ತಡೆಗಟ್ಟುವಲ್ಲಿ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಪ್ರಾಮಾಣಿಕ ಪ್ರಯತ್ನ ಅಧಿಕಾರಿಗಳಿಂದ ನಡೆಯಬೇಕಿದೆ. ಇಂಥ ಸಂದಿಗ್ಧ ಸಂದರ್ಭದಲ್ಲಿ ಸಾರ್ವಜನಿಕ ಮನವೊಲಿಸಿ ಅವರ ಸಾಥ್ ಸಹ ಪಡೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಆನಿಕೆರೆಯಲ್ಲಿ ಲಭ್ಯವಿರುವ ನೀರಿನ ಪ್ರಮಾಣದ ಕುರಿತು ಮಾಹಿತಿ ಪಡೆದು, ಪ್ರಸ್ತುತ ಇರುವ ನೀರನ್ನು ಎಲ್ಲಿಯವರೆಗೆ ಪೂರೈಸಬಹುದು ಎನ್ನುವ ಬಗೆಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕ ಶ್ರೀನಿವಾಸ ಮಾನೆ, ಮಳಗಿ ಧರ್ಮಾ ಜಲಾಶಯದಿಂದ ಆನಿಕೆರೆಗೆ ನೀರು ಹರಿಸುವ ಕುರಿತು ಚರ್ಚೆ ಕೈಗೊಂಡರು. ಮಳಗಿ ಧರ್ಮಾ ಜಲಾಶಯ ಮತ್ತು ಆನಿಕೆರೆಯಲ್ಲಿನ ಜಲಮೂಲ ಸಂರಕ್ಷಿಸಿಕೊಳ್ಳಿ. ಮುಂದಿನ ಏಪ್ರಿಲ್, ಮೇ ಅಂತ್ಯದವರೆಗೂ ಅತ್ಯಂತ ಜಾಗರೂಕತೆಯಿಂದ ನೀರು ಪೂರೈಕೆಗೆ ಮುಂದಾಗಿ ಎಂದು ಸೂಚಿಸಿದರು.
ಸವಣೂರು ಉಪವಿಭಾಗಾಧಿಕಾರಿ ಮಹ್ಮದ್ ಖಿಜರ್, ಕರ್ನಾಟಕ ನೀರಾವರಿ ನಿಗಮದ ಎಇಇ ಪ್ರಹ್ಲಾದ್ ಶೆಟ್ಟಿ, ಸಹಾಯಕ ಅಭಿಯಂತರ ಜಾವೇದ್ ಮುಲ್ಲಾ ಇದ್ದರು.ಜಲಮೂಲ ಬರಿದಾಗುತ್ತಿದೆ. ಅಂತರ್ಜಲವೂ ಬತ್ತುತ್ತಿದೆ. ಏಪ್ರಿಲ್, ಮೇ ತಿಂಗಳಿನಲ್ಲಿ ನೀರು ಪೂರೈಕೆಗೆ ಸವಾಲು ನಮ್ಮ ಮುಂದಿದೆ. ಜನ, ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇಂಥ ಸಮಯದಲ್ಲಿ ಸಮುದಾಯದಲ್ಲಿಯೂ ಜಾಗೃತಿ ಮೂಡಬೇಕಿದೆ. ನೀರು ಪೋಲು ಮಾಡದೇ ಸಂರಕ್ಷಿಸಿಟ್ಟುಕೊಳ್ಳಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
;Resize=(128,128))
;Resize=(128,128))
;Resize=(128,128))
;Resize=(128,128))