ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಹಾಲಿ ಸಂಸದ ರಮೇಶ ಜಿಗಜಿಣಗಿಗೆ ಮತ್ತೊಮ್ಮೆ ವಿಜಯಪುರ ಲೋಕಸಭಾ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಘೋಷಣೆಯಾದ ಹಿನ್ನೆಲೆ ವಿಜಯಪುರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಜಿಗಜಿಣಗಿ ಅವರಿಗೆ ಸಿಹಿ ತಿನಿಸಿ ಸಂಭ್ರಮಾಚರಣೆ ಮಾಡಿದರು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ ಜಿಗಜಿಣಗಿ, ಪಕ್ಷದಿಂದ ಟಿಕೆಟ್ ಘೋಷಣೆ ಮಾಡಿದ್ದಕ್ಕೆ ಸಂತಸ ತಂದಿದೆ. ಟಿಕೆಟ್ ಕ್ರೆಡಿಟ್ ನಮ್ಮ ರಾಷ್ಟ್ರೀಯ ನಾಯಕರು ಹಾಗೂ ಕಾರ್ಯಕರ್ತರಿಗೆ ಸಲ್ಲಬೇಕು. ಇದರಲ್ಲಿ ನನದೇನೂ ಪಾತ್ರ ಇಲ್ಲ. ಎಲ್ಲ ಕಾರ್ಯಕರ್ತರದ್ದು ಎಂದರು. ನನಗೆ ಟಿಕೆಟ್ ಸಿಕ್ಕಿದ್ದು ಕಾರ್ಯಕರ್ತರಿಗೆ ಸಿಕ್ಕಂತೆ. ನನಗೆ ಟಿಕೆಟ್ ಸಿಗುತ್ತದೆ ಎಂದು ಮೊದಲೇ ಹೇಳಿದ್ದೆ. ನಿರೀಕ್ಷೆಯಂತೆ ನನಗೆ ಟಿಕೆಟ್ ನೀಡಿದ್ದಾರೆ. ನನಗೆ ಯಾರು ವಿರೋಧ ಮಾಡಿದ್ದಾರೆ ಅವರೆಲ್ಲರಿಗೂ ದೇವರು ಒಳ್ಳೆಯದು ಮಾಡಲಿ ಎಂದು ಹೇಳಿದರು.
ಹುಬ್ಬಳ್ಳಿ ಸೆಂಟ್ರಲ್ ಶಾಸಕ, ಪಕ್ಷದ ಬೆಳಗಾವಿ ಚುನಾವಣಾ ಉಸ್ತುವಾರಿ ಮಹೇಶ ಟೆಂಗಿನಕಾಯಿ ಮಾತನಾಡಿ, 20 ಟಿಕೆಟ್ ಘೋಷಣೆಯಾಗಿದ್ದು, ಒಳ್ಳೆಯ ಅಭ್ಯರ್ಥಿಗಳಿಗೆ ಕೊಟ್ಟಿದ್ದಾರೆ. ಅಬ್ ಕೀ ಬಾರ್ ಚಾರ್ ಸೋ ಪಾರ್, ರಾಜ್ಯದಲ್ಲಿ 28 ಕ್ಷೇತ್ರಗಳನ್ನೂ ನಾವು ಗೆಲ್ಲಲಿದ್ದೇವೆ. ಈ ಬಾರಿಯೂ ಎನ್‌ಡಿಎ ಗೆಲುವು ನಿಶ್ಚಿತವಾಗಿದೆ ಎಂದಿದ್ದಾರೆ.ಇನ್ನು ಟಿಕೆಟ್ ಸಿಗದ ಹಿನ್ನೆಲೆ ಪಾರ್ಟಿಯಲ್ಲಿ ಕೆಲವರಿಗೆ ಅಸಮಾಧಾನ ವಿಚಾರದ ಬಗ್ಗೆ ಮಾತನಾಡಿದ ಅವರು, ಬಿಜೆಪಿ ದೊಡ್ಡ ಪಕ್ಷ. ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಹೆಸರು ಘೋಷಣೆ ಆಗುವವರೆಗೂ ಆಕಾಂಕ್ಷಿಗಳೇ, ಘೋಷಣೆ ಆದ ಮೇಲೆ ಅಭ್ಯರ್ಥಿಗಳು. ಅಭ್ಯರ್ಥಿಗಳನ್ನು ಗೆಲ್ಲಿಸೋದು ನಮ್ಮ ಗುರಿ. ನನಗೂ ಈ ಹಿಂದೆ ಬಿ ಫಾರ್ಮ್ ನೀಡಿ ಎಲೆಕ್ಷನ್ ನಿಲ್ಲಬೇಡಿ ಎಂದಿದ್ದರು. ನನ್ನ ತ್ಯಾಗ ಗಮನಿಸಿ ಪಕ್ಷ ವಿಧಾನಸಭೆಗೆ ಟಿಕೆಟ್ ನೀಡಿ ಗುರುತಿಸಿದೆ. ಟಿಕೆಟ್ ಸಿಗದೆ ಇದ್ದವರು ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡೋದೆ ನಮ್ಮ ಗುರಿ ಎಂದರು.
ಇನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಿದ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಾರ್ಟಿ ಬೇರೆ ಬೇರೆ ಆಯಾಮದಲ್ಲಿ ವಿಚಾರ ಮಾಡಿ ಟಿಕೆಟ್ ನೀಡಿದೆ. ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ ಪಾರ್ಟಿ ತೀರ್ಮಾನ ತೆಗೆದುಕೊಂಡಿರುತ್ತದೆ. ಪಕ್ಷದ ತೀರ್ಮಾನವೇ ಅಂತಿಮ ಎಂದು ಸ್ಪಷ್ಟಪಡಿಸಿದರು.ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ್ ಕುಚಬಾಳ, ಮಾಜಿ ಸಚಿವ ಎಸ್. ಕೆ. ಬೆಳ್ಳುಬ್ಬಿ, ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಮುಖಂಡ ವಿಜುಗೌಡ ಪಾಟೀಲ್, ಚಂದ್ರಶೇಖರ ಕವಟಗಿ, ವಿಜಯ ಜೋಶಿ ಹಲವರಿದ್ದರು.