ಮುಖ್ಯರಸ್ತೆ ಅಗಲ ವಿಸ್ತರಿಸಿ ಅಭಿವೃದ್ಧಿ ವಿರೋಧಿಗಳಿಗೆ ತಕ್ಕ ಉತ್ತರ-ಶಾಸಕ ಬಸವರಾಜ ಶಿವಣ್ಣನವರ

| Published : Mar 15 2024, 01:19 AM IST

ಮುಖ್ಯರಸ್ತೆ ಅಗಲ ವಿಸ್ತರಿಸಿ ಅಭಿವೃದ್ಧಿ ವಿರೋಧಿಗಳಿಗೆ ತಕ್ಕ ಉತ್ತರ-ಶಾಸಕ ಬಸವರಾಜ ಶಿವಣ್ಣನವರ
Share this Article
  • FB
  • TW
  • Linkdin
  • Email

ಸಾರಾಂಶ

ಎಂತಹುದೇ ಸಂಕಷ್ಟ ಎದುರಾದರೂ ಸರಿಯೇ ಮುಖ್ಯರಸ್ತೆ ಅಗಲೀಕರಣದಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ. ಆಗಸ್ಟ್ ಅಂತ್ಯದ ವರೆಗೆ ಕಾಲಾವಕಾಶ ಕೊಡಿ, ಅಗಲೀಕರಣ ಕಾಮಗಾರಿಗೆ ಚಾಲನೆ ನೀಡಿ ಪಟ್ಟಣದಲ್ಲಿರುವ ಅಭಿವೃದ್ಧಿ ವಿರೋಧಿಗಳಿಗೆ ತಕ್ಕ ಉತ್ತರ ನೀಡುತ್ತೇನೆ ಎಂದು ಶಾಸಕ ಬಸವರಾಜ ಶಿವಣ್ಣನವರ ಭರವಸೆ ನೀಡಿದರು.

ಬ್ಯಾಡಗಿ: ಎಂತಹುದೇ ಸಂಕಷ್ಟ ಎದುರಾದರೂ ಸರಿಯೇ ಮುಖ್ಯರಸ್ತೆ ಅಗಲೀಕರಣದಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ. ಆಗಸ್ಟ್ ಅಂತ್ಯದ ವರೆಗೆ ಕಾಲಾವಕಾಶ ಕೊಡಿ, ಅಗಲೀಕರಣ ಕಾಮಗಾರಿಗೆ ಚಾಲನೆ ನೀಡಿ ಪಟ್ಟಣದಲ್ಲಿರುವ ಅಭಿವೃದ್ಧಿ ವಿರೋಧಿಗಳಿಗೆ ತಕ್ಕ ಉತ್ತರ ನೀಡುತ್ತೇನೆ ಎಂದು ಶಾಸಕ ಬಸವರಾಜ ಶಿವಣ್ಣನವರ ಭರವಸೆ ನೀಡಿದರು.ಪಟ್ಟಣದ ತಹಸೀಲ್ದಾರ್‌ ಕಚೇರಿಯಲ್ಲಿ ನಡೆದ ಅಗಲೀಕರಣ ಹೋರಾಟ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಅಗಲೀಕರಣ ಕಾಮಗಾರಿ ವಿಳಂಬದಿಂದ ನಿರಂತರ ಕುಡಿಯುವ ನೀರು ಹಾಗೂ ಒಳಚರಂಡಿ ಯೋಜನೆಗಳು ಪೂರ್ಣಗೊಳ್ಳದೇ ಸ್ಥಗಿತಗೊಂಡಿವೆ. ಇದರಿಂದ ಪಟ್ಟಣದ ಸಾರ್ವಜನಿಕರು ಹಾಗೂ ಮಾರುಕಟ್ಟೆ ಜನರು ಕೇವಲ ಟ್ರಾಫಿಕ್ ಕಿರಿಕಿರಿಯಷ್ಟೇ ಅಲ್ಲ, ಕುಡಿಯುವ ನೀರಿಗೂ ಸಂಕಷ್ಟ ಎದುರಿಸುವಂತಾಗಿದೆ. ಇನ್ನೂ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಶಾಶ್ವತ ಪರಿಹಾರ ಕಂಡುಹಿಡಿಯದೇ ಬಿಡುವುದಿಲ್ಲ ಎಂದರು.

ಆ. 16ರಂದು ಎರಡೂ ಕಡೆಗೂ ಟ್ರಂಚ್:ಅಗಲೀಕರಣ ಹೋರಾಟ ಸಮಿತಿ ಗೌರವಾಧ್ಯಕ್ಷ ಗಂಗಣ್ಣ ಎಲಿ ಮಾತನಾಡಿ, 4 ಜನರ ಹಿತಕ್ಕಾಗಿ 4 ಲಕ್ಷ ಜನರ ನೆಮ್ಮದಿ ಹಾಳಾಗುತ್ತಿದೆ. ಕಳೆದ 14 ವರ್ಷಗಳಿಂದ ಮುಖ್ಯರಸ್ತೆ ಅಗಲೀಕರಣಕ್ಕಾಗಿ ಹೋರಾಟ ನಡೆಯುತ್ತಿದೆ. ಆದರೆ ಕೇವಲ ಆಶ್ವಾಸನೆ ಬಿಟ್ಟು ಮತ್ಯಾವ ಕೆಲಸವಾಗಿಲ್ಲ. ಆ. 15ರೊಳಗಾಗಿ ಅಗಲೀಕರಣ ಕಾಮಗಾರಿ ಆರಂಭವಾಗದಿದ್ದರೆ, ಆ. 16ರಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಮಾರುಕಟ್ಟೆ ವ್ಯಾಪಾರಸ್ಥರೊಂದಿಗೆ ಎರಡೂ ಕಡೆಗಳಲ್ಲಿ ಟ್ರಂಚ್ ನಿರ್ಮಿಸಿ ಮುಖ್ಯರಸ್ತೆಯಲ್ಲಿ ಓಡಾಟ ನಿರ್ಬಂಧಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪುರಸಭೆ ಸದಸ್ಯ ಬಸವರಾಜ ಛತ್ರದ ಮಾತನಾಡಿ, ಸಾಮರ್ಥ್ಯ ಕಳೆದುಕೊಂಡ ಶಿಥಿಲಾವಸ್ಥೆ ತಲುಪಿರುವ ಮುಖ್ಯರಸ್ತೆಯಲ್ಲಿನ ಕಟ್ಟಡಗಳನ್ನು ತೆರವುಗೊಳಿಸಲು ಕ್ರಮ ವಹಿಸಲಾಗುವುದು ಎಂದರು. ಮುಖ್ಯರಸ್ತೆ ಎರಡೂ ಬದಿಯಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ನಿಷೇಧ ಹೇರಬೇಕು ಎಂದು ತಾಕೀತು ಮಾಡಿದರಲ್ಲದೇ, ಒಂದು ವೇಳೆ ಹೊಸ ಕಟ್ಟಡಕ್ಕೆ ಅನುಮತಿ ನೀಡಿದ್ದೇ ಆದಲ್ಲಿ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಎಚ್ಚರಿಕೆ ನೀಡಿದರು.

ಅಗಲೀಕರಣ ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ ಮಾತನಾಡಿ, ಪಟ್ಟಣದ ಸುತ್ತಮುತ್ತ ರೈಲು ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ ಮತ್ತು ಹರಿಹರದ ಪಾಲಿಫೈಬರ್ಸ್ ಕಾರ್ಖಾನೆ ಬರದಂತೆ ನೋಡಿಕೊಂಡ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದಲೇ ಈಗಲೂ ಮುಖ್ಯರಸ್ತೆ ಅಗಲೀಕರಣಕ್ಕೆ ಹಿನ್ನಡೆಯಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಹೊಂದಿದ್ದರೂ ಕಿರಿದಾದ ಮುಖ್ಯರಸ್ತೆಯಿಂದ ಸಾರ್ವಜನಿಕರು ಸಂಕಷ್ಟಪಡುವಂತಾಗಿದೆ. ಪುರಸಭೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಸಾಮರ್ಥ್ಯ ಕಳೆದುಕೊಂಡ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.ನೈಜ ಭೂಮಾಲೀಕರಲ್ಲ:ಪಟ್ಟಣದ ಮುಖ್ಯರಸ್ತೆಯಲ್ಲಿನ ವ್ಯಕ್ತಿಗಳು ಮೂಲತಃ ಯಾರೊಬ್ಬರೂ ಭೂಮಾಲೀಕರಲ್ಲ. ಹಿಂದೆ ತಮ್ಮ ಅಧಿಕಾರವಧಿಯಲ್ಲಿ ಸರ್ಕಾರದ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ. ಅಲ್ಲದೇ ಮುಖ್ಯರಸ್ತೆಯಲ್ಲಿನ 1 ಕಿಲೋಮೀಟರ್‌ನಷ್ಟು ರಾಜ್ಯ ಹೆದ್ದಾರಿ ನಕ್ಷೆ ನಾಶಪಡಿಸಿದ್ದಾರೆ. ಯಾರೊಬ್ಬರೂ ಪರವಾನಗಿ ಪಡೆದು ಕಟ್ಟಡ ಕಟ್ಟಿಲ್ಲ. ಕೂಡಲೇ ಸರ್ಕಾರ ಮುಲಾಜಿಲ್ಲದೇ ಒತ್ತುವರಿ ತೆರವುಗೊಳಿಸಬೇಕು ಎಂದರು.ಬಿಜೆಪಿ ತಾಲೂಕಾಧ್ಯಕ್ಷ ಶಿವಯೋಗಿ ಶಿರೂರು ಮಾತನಾಡಿ, ಅಗಲೀಕರಣದ ವಿಷಯದಲ್ಲಿ 3 ಶಾಸಕರು 5 ಮುಖ್ಯಮಂತ್ರಿಗಳು ಬಂದು ಹೋಗಿದ್ದಾರೆ. ಅಗಲೀಕರಣ ಭರವಸೆ ಬಿಟ್ಟರೆ ಈ ವಿಷಯದಲ್ಲಿ ಸರ್ಕಾರ ದಿಟ್ಟತನ ತೋರಿಲ್ಲ. ಈ ಧೋರಣೆ ಮುಂದುವರಿದಲ್ಲಿ ಮುಖ್ಯರಸ್ತೆಯ ವಾಹನ ಸಂಚಾರಕ್ಕೆ ಅವಕಾಶ ಸ್ಥಗಿತಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ತಾಲೂಕಾಧ್ಯಕ್ಷ ದಾನಪ್ಪ ಚೂರಿ, ಜಯಕರ್ನಾಟಕ ಸಂಘಟನೆ ತಾಲೂಕಾಧ್ಯಕ್ಷ ವಿನಾಯಕ ಕಂಬಳಿ, ವಿಶೇಷ ಚೇತನ ತಾಲೂಕಾಧ್ಯಕ್ಷ ಪಾಂಡು ಸುತಾರ, ಗುತ್ತೆಮ್ಮ ಮಾಳಗಿ, ಪ್ರದೀಪ ಜಾಧವ, ಪೀರಾಂಬಿ, ವಕೀಲ ಬಸವರಾಜ ಬಳ್ಳಾರಿ, ಸಂತೋಷ ಆಡಿನವರ, ಪಿಡಬ್ಲೂಡಿ ಎಇಇ ಉಮೇಶ ನಾಯಕ್, ಮುಖ್ಯಾಧಿಕಾರಿ ವಿನಯಕುಮಾರ ಇನ್ನಿತರರಿದ್ದರು.