ಸಾರಾಂಶ
ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆ, ಸ್ವಚ್ಛತೆ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಜಿಪಂ ಸಿಇಒ ಸದಾಶಿವ ಪ್ರಭು ಹೇಳಿದರು.
ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಯಲು ಬಹಿರ್ದೆಸೆ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಸಮೀಕ್ಷೆ ನಡೆಸಿ, ಗ್ರಾಮದಲ್ಲಿ ಮನೆಗಳನ್ನು ಗುರುತಿಸಿ ಸ್ಥಳದಲ್ಲಿಯೇ ಸಿಟಿಜನ್ ಪೋರ್ಟಲ್‌ನಲ್ಲಿ ಅರ್ಜಿ ದಾಖಲಿಸಿ ಅವರಿಗೆ ನಿಯಮಾನುಸಾರ ಶೌಚಾಲಯ ಸೌಲಭ್ಯ ಕಲ್ಪಿಸಲು ತ್ವರಿತ ಕ್ರಮ ಕೈಗೊಂಡು ಕಾರ್ಯಾದೇಶ, ಪಾವತಿ ಆದೇಶ ನೀಡಬೇಕು ಎಂದು ನಿರ್ದೇಶನ ನೀಡಿದರು.ಜಿಲ್ಲೆಯಾದ್ಯಂತ ಕಾರ್ಯದೇಶ ಮತ್ತು ಪಾವತಿ ಆದೇಶ ನೀಡುವಲ್ಲಿ ತುಂಬ ವಿಳಂಬವಾಗುತ್ತಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಪ್ರತಿ ತಾಲೂಕುವಾರು ಪ್ರತಿವಾರ ವಿಡಿಯೋ ಸಂವಾದ ನಡೆಸಲಾಗುವುದು. ಒಂದು ವೇಳೆ ಪಿಡಿಒಗಳು ಪ್ರಗತಿ ಸಾಧಿಸಲು ವಿಫಲರಾದಲ್ಲಿ ಅಂತಹವರ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದರು.
ನಿರ್ಲಕ್ಷ್ಯ ವಹಿಸಿದರೆ ಕ್ರಮ:ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ವಸತಿ ಯೋಜನೆಗಳಡಿ ಫಲಾನುಭವಿಗಳಿಗೆ ಮಂಜೂರಾದ ಮನೆಗಳನ್ನು ಕಟ್ಟಲು ಕ್ರಮ ಕೈಗೊಳ್ಳುವಲ್ಲಿ ಪಿಡಿಒಗಳ ನಿರ್ಲಕ್ಷ್ಯದ ಬಗ್ಗೆ ಅಂಕಿ-ಅಂಶಗಳ ಸಹಿತ ಮಾಹಿತಿ ನೀಡಿದ ಅವರು, ಕೆಲ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಡೀ ಅಧಿಕಾರಿ ವರ್ಗಕ್ಕೆ ಕೆಟ್ಟ ಹೆಸರು ಬರುತ್ತದೆ. ಇಂತಹ ಕಾರಣಗಳಿಂದ ರಾಜ್ಯಮಟ್ಟದಲ್ಲಿ ನಮ್ಮ ಜಿಲ್ಲೆಯ ಪ್ರಗತಿಗೆ ತುಂಬ ಹಿನ್ನಡೆ ಉಂಟಾಗುತ್ತದೆ. ಅಧಿಕಾರಿಗಳು ನಿಷ್ಕಾಳಜಿ ತೋರುವುದು ಕಂಡುಬಂದಲ್ಲಿ ಮುಲಾಜಿಲ್ಲದೇ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದರು.
ವರದಿ ಸೂಚನೆ:ಮಂಜೂರಾದ ಮನೆಗಳ ನಿರ್ಮಾಣದ ಬಗ್ಗೆ ಒಂದೆರಡು ದಿನಗಳಲ್ಲಿ ಸಂಪೂರ್ಣ ವರದಿ ನೀಡಬೇಕು. ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ವಸತಿ ಸೌಲಭ್ಯದ ಅವಶ್ಯಕತೆ ಇರುವ ಅರ್ಹರಿಗೆ ಮನೆಗಳು ಸಿಗುವಂತೆ ನೋಡಿಕೊಳ್ಳಬೇಕು. ಒತ್ತಡಕ್ಕೆ ಒಳಗಾಗಿ ಫಲಾನುಭವಿಗಳ ಆಯ್ಕೆಯಲ್ಲಿ ನಿಯಮ ಉಲ್ಲಂಘನೆಯಾಗಿರುವುದು ಕಂಡು ಬಂದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು. ಫಲಾನುಭವಿಗಳ ಆಯ್ಕೆಯಲ್ಲಿ ಎಚ್ಚರ ವಹಿಸಬೇಕು ಎಂದು ತಿಳಿಸಿದರು.
ಈಗಾಗಲೇ ಲೇಔಟ್ ಪ್ಲಾನ್ ಅನುಮೋದನೆಯಾಗಿರುವ ಪಂಚಾಯಿತಿಗಳಲ್ಲಿ ಲೇಔಟ್ ಅಭಿವೃದ್ಧಿಪಡಿಸಲು ಅನುದಾನ ಬಿಡುಗಡೆ ಪ್ರಸ್ತಾವನೆಯನ್ನು ತ್ವರಿತವಾಗಿ ಸಲ್ಲಿಸಬೇಕು. ವಸತಿ ರಹಿತರಿಗೆ ಮನೆಗಳ ಸೌಲಭ್ಯ ತ್ವರಿತವಾಗಿ ದೊರೆಯಲು ಕ್ರಮ ವಹಿಸಬೇಕು ಎಂದು ಸಿಇಒ ಸೂಚಿಸಿದರು.ಸರ್ಕಾರದ ಸ್ವತ್ತನ್ನು ರಕ್ಷಿಸಿ:
ಗ್ರಾಮೀಣ ಪ್ರದೇಶದಲ್ಲಿನ ಕುಡಿಯುವ ನೀರಿನ ಸರಬರಾಜು ಪೈಪುಗಳ ಸೋರಿಕೆಯನ್ನು ಗಮನಿಸಿ ಕೂಡಲೇ ಸರಿಪಡಿಸಿ ಕುಡಿಯುವ ನೀರು ಕಲುಷಿತವಾಗದಂತೆ ಕ್ರಮ ವಹಿಸಬೇಕು. ಶುದ್ಧ ಕುಡಿಯುವ ನೀರಿನ ಮೋಟರ್ ಪಂಪ್ ಹಾಗೂ ಜಲಜೀವನ್ ಮಿಷನ್ ನೀರು ಸರಬರಾಜು ಪಂಪ್ ಸೇರಿದಂತೆ ಸರ್ಕಾರಿ ಸ್ವತ್ತುಗಳ ಕಳ್ಳತನ ಹಾಗೂ ಹಾನಿ ಮಾಡುವಂತಹ ಪ್ರಕರಣಗಳು ನಡೆದಲ್ಲಿ ಉದಾಸೀನ ಮಾಡದೆ ಕಡ್ಡಾಯವಾಗಿ ಪೊಲೀಸ್ ಇಲಾಖೆಗೆ ದೂರು ನೀಡಿ ಸ್ವತ್ತುಗಳ ರಕ್ಷಣೆ ಮಾಡಬೇಕು ಎಂದು ಸೂಚಿಸಿದರು.ಇದೇ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಫೀಲ್ಡ್ ಟೆಸ್ಟ್ ಕಿಟ್ ತರಬೇತಿ ನೀಡಲಾಯಿತು.
ಮುಂಗಾರು ಆರಂಭವಾಗುತ್ತಿರುವ ಸಂದರ್ಭದಲ್ಲಿ ಕಾಲರಾ ಹರಡುವಿಕೆ ತಡೆಗಟ್ಟುವುದು, ಡೆಂಘೀ, ಚಿಕೂನ್ ಗುನ್ಯಾದಂತಹ ರೋಗವಾಹಕ ನಿಯಂತ್ರಣ ಕುರಿತಂತೆ ವಿವಿಧ ಇಲಾಖೆಗಳ ಪಾತ್ರಗಳ ಬಗ್ಗೆ ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಬಿ.ಷಣ್ಮುಖ ನಾಯ್ಕ ಮಾಹಿತಿ ನೀಡಿದರು.ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ, ಮುಖ್ಯ ಯೋಜನಾಧಿಕಾರಿ ಅನ್ನದಾನ ಸ್ವಾಮಿ, ಯೋಜನಾ ನಿರ್ದೇಶಕ ಅಶೋಕ್ ತೋಟದ ಇದ್ದರು.